ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕುಪತ್ರ ಪಡೆಯಲು ಜೈಲಿಗೆ ಹೋಗೋಣ: ಕಾಗೋಡು ತಿಮ್ಮಪ್ಪ ಕರೆ

ಶಿಕಾರಿಪುರ: ಪ್ರತಿಭಟನಾ ಸಭೆಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕರೆ
Last Updated 13 ಸೆಪ್ಟೆಂಬರ್ 2022, 6:47 IST
ಅಕ್ಷರ ಗಾತ್ರ

ಶಿಕಾರಿಪುರ: ‘ಸಾಗುವಳಿ ಭೂಮಿ ಹಕ್ಕುಪತ್ರ ಪಡೆಯಲು ಶಿಕಾರಿಪುರದಿಂದಲೇ ಹೋರಾಟ ನಡೆಸುವ ಮೂಲಕ ಜೈಲಿಗೆ ಹೋಗುವ ಚಳುವಳಿ ನಡೆಸೋಣ’ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಸೋಮವಾರ ಅರಣ್ಯ ಭೂಮಿ, ಬಗರ್‌ಹುಕುಂ ಸಾಗುವಳಿದಾರರು ಹಾಗೂ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನಾ ಸಭೆ ನೇತೃತ್ವ ವಹಿಸಿ ಅವರು ಮಾತನಾಡಿದರು.

‘ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಾಗುವಳಿ ಚೀಟಿ ಕೊಡಿಸುವ ಕೆಲಸ ಮಾಡಿದ್ದೇವೆ. ಆಗ ಯಾವುದೇ ದಾಖಲೆ ಕೇಳಲಿಲ್ಲ. ಆದರೆ, ಈ ಸರ್ಕಾರ ಪ್ರಸ್ತುತ ಅರಣ್ಯ ಭೂಮಿ ಸಾಗುವಳಿದಾರರು ಭೂಮಿ ಹಕ್ಕು ಪತ್ರ ಪಡೆಯಲು 75 ವರ್ಷಗಳ ದಾಖಲೆ ನೀಡಬೇಕು ಎಂದು ಹೇಳುತ್ತಿದೆ. ಈ ದಾಖಲೆ ನೀಡಲು ಸಾಧ್ಯವೇ’ ಎಂದು ಪ್ರಶ್ನಿಸಿದ ಅವರು, ‘ನಿಮ್ಮ ಪಾದಕ್ಕೆ ನಮಸ್ಕಾರ ಮಾಡುತ್ತೇನೆ. ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಿ’ ಎಂದು ಮನವಿ ಮಾಡಿದರು.

‘ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಿದೆ. ಬಿಜೆಪಿ ಸರ್ಕಾರ ಅರಣ್ಯ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡುವ ಬದಲು ಕೊಟ್ಟ ಹಕ್ಕು ಪತ್ರವನ್ನು ವಜಾ ಮಾಡುವ ಕಾರ್ಯವನ್ನು ಮಾಡುತ್ತಿದೆ. ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯಾ’ ಎಂದು ಪ್ರಶ್ನಿಸಿದಕೆಪಿಸಿಸಿ ಉಪಾಧ್ಯಕ್ಷ ಮಧು ಬಂಗಾರಪ್ಪ, ‘ಬಿಜೆಪಿ ಸರ್ಕಾರ ಜನಪರ ಆಡಳಿತ ನೀಡುವುದನ್ನು ಬಿಟ್ಟು ಧರ್ಮದ ಆಧಾರದ ಮೇಲೆ ದೇಶ ಒಡೆಯುತ್ತಿದೆ’ ಎಂದು ಟೀಕಿಸಿದರು.

‘ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದರೂ ಅರಣ್ಯ ಭೂಮಿ ಹಾಗೂ
ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡುವ ಕಾರ್ಯ ಮಾಡಲಿಲ್ಲ’ ಎಂದು ಸ್ಥಳೀಯ ಮುಖಂಡರು ಆರೋಪಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯರಾದ ಆರ್.ಪ್ರಸನ್ನ ಕುಮಾರ್, ಎಚ್.ಎಸ್. ಶಾಂತವೀರಪ್ಪಗೌಡ, ‘ಕಾಡಾ’ ಮಾಜಿ ಅಧ್ಯಕ್ಷ ನಗರದ ಮಹಾದೇವಪ್ಪ, ಮಾಜಿ ಶಾಸಕ ಬಿ.ಎನ್.ಮಹಾಲಿಂಗಪ್ಪ, ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್, ಮುಖಂಡರಾದ ಕಲಗೋಡು ರತ್ನಾಕರ್, ತೀ.ನಾ. ಶ್ರೀನಿವಾಸ್, ಎಸ್.ಪಿ. ನಾಗರಾಜ್ ಗೌಡ, ರುದ್ರೇಗೌಡ, ಹುಲ್ಮಾರ್ ಮಹೇಶ್, ಶಿವ್ಯಾನಾಯ್ಕ, ಉಮೇಶ್ ಮಾರವಳ್ಳಿ, ಉಮೇಶ್ ಮಾರವಳ್ಳಿ, ಉಳ್ಳಿ ದರ್ಶನ್, ರಾಘುನಾಯ್ಕ, ಗಾಮ ದಯಾನಂದ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT