ಶುಕ್ರವಾರ, ಜೂಲೈ 3, 2020
22 °C

225 ಕೆರೆಗಳ ಒಡಲು ತಂಬಿಸಲಿರುವ ತುಂಗಭದ್ರೆ: ಬಿ.ವೈ.ರಾಘವೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಶಿಕಾರಿಪುರ ತಾಲ್ಲೂಕಿನ ಉಡುಗಣಿ, ತಾಳಗುಂದ, ಹೊಸೂರು ಹೋಬಳಿಗಳ 225 ಕೆರೆಗಳಿಗೆ ನೀರು ತುಂಬಿಸುವ ₨ 850 ಕೋಟಿ ವೆಚ್ಚದ ಪುರದಕೆರೆ ಏತ ನೀರಾವರಿ ಯೋಜನೆ ಒಂದು ವರ್ಷದ ಒಳಗೆ ಪೂರ್ಣಗೊಳ್ಳಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಹಾವೇರಿ ಜಿಲ್ಲೆ ಚಟ್ನಹಳ್ಳಿ ಪುರದಕೆರೆ ಬಳಿ ಸೋಮವಾರ ತುಂಗಭದ್ರಾ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆ ಕಾಮಗಾರಿ ವೀಕ್ಷಿಸಿದ ನಂತರ ಸುದ್ದಿಗಾರರ ಜತೆ ಅವರು ಮಾತನಾಡಿದರು.

ಮಳೆಗಾಲದ ಅವಧಿಯಲ್ಲಿ ನದಿಯಿಂದ 1.5 ಟಿಎಂಸಿ ಅಡಿ ನೀರು ಪಂಪ್‌ ಮಾಡುವ ಮೂಲಕ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. 5 ಅಡಿ ವ್ಯಾಸದ ಕಬ್ಬಿಣ, ಸಿಮೆಂಟ್‌ ಕೊಳವೆಯ ಮೂಲಕ 45 ಕಿ.ಮೀ. ನೀರು ಹರಿಯುತ್ತದೆ. ನಂತರ ಅಲ್ಲಿಂದ ಕೆರೆಗಳಿಗೆ ಜಾಕ್‌ವೆಲ್‌ಗಳ ಮೂಲಕ ನೀರು ಹರಿಸುವ ಪ್ರಕ್ರಿಯೆಯ ಕಾಮಗಾರಿಗಳು ನಡೆಯಲಿವೆ. ಚಟ್ನಹಳ್ಳಿನದಿ ತಟದಲ್ಲಿ ಮೂರು ಮೀಟರ್ ಎತ್ತರದ ಚೆಕ್‌ಡ್ಯಾಂ ನಿರ್ಮಿಸಲಾಗುತ್ತಿದೆ. ಅಲ್ಲಿ ಅಳವಡಿಸುವ 5 ಸಾವಿರ ಎಚ್‌.ಪಿ ಮೋಟಾರ್‌ಗಳಿಗೆ 110 ಕೆ.ವಿ. ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ಯೋಜನೆಯ ಪರಿಣಾಮ ಕೆರೆಗಳು ಸದಾ ತುಂಬಿರುತ್ತವೆ. ಅಂತರ್ಜಲ ಹೆಚ್ಚಳದ ಪರಿಣಾಮ 7 ಸಾವಿರ ಹೆಕ್ಟೇರ್ ಪ್ರದೇಶ ಹಸಿರು ಮಯವಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಪುರದಕೆರೆ ಏತ ನೀರಾವರಿ ಯೋಜನೆಯ ಜತೆಗೆ, ಜಿಲ್ಲೆಯ ಸೊರಬ ತಾಲ್ಲೂಕಿನ ಮೂಡಿ, ಮೂಗೂರು ಏತ ನೀರಾವರಿ, ಕಸಬಾ, ಕಚವಿ ಏತ ನೀರಾವರಿ ಸೇರಿ  ಒಂದು ಸಾವಿರ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಒಟ್ಟು 1,500 ಕೋಟಿ ವಿನಿಯೋಗಿಸಲಾಗುತ್ತಿದೆ. ಪುರದಕೆರೆಯ ಒಂದನೇ ಮಾರ್ಗ ಹಸೂರು ಹೋಬಳಿ ಕಾಗಿನಲ್ಲಿಯವರೆಗೆ ಸಾಗಲಿದೆ. ಮತ್ತೊಂದು ಮಾರ್ಗ ಶಿಕಾರಿಪುರ ತಾಲ್ಲೂಕಿಗೆ ನೀರು ಹರಿಸಲಿದೆ. ಬರಡು ಭೂಮಿಗೂ ನೀರು ಹರಿಸುವ ಸಂಕಲ್ಪ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಧುನಿಕ ಭಗೀರಥ ಎಂದು ಬಣ್ಣಿಸಿದರು.

ಶಿಕಾರಿಪುರ ತಾಲ್ಲೂಕಿನ ಹಲವು ಗ್ರಾಮಗಳು ಸಾಕಷ್ಟು ಬಾರಿ ಬರಗಾಲಕ್ಕೆ ತುತ್ತಾಗಿವೆ. ಏತ ನೀರಾವರಿ ಮೂಲಕ ಮಳೆಗಾಲದಲ್ಲಿ ತುಂಗಭದ್ರ ನದಿಯ ಹೆಚ್ಚುವರಿ ನೀರು ಸದ್ವಳಕೆಯಾಗಲಿದೆ. ಹಾಗೆಯೇ, ಜಿಲ್ಲೆಯ ಹೊಸಹಳ್ಖಿ ಏತನೀರಾವರಿ ಯೋಜನೆ ಮೂಲಕ ಕುಂಸಿ, ಹಾರನಹಳ್ಳಿ, ಆಯನೂರು ಹಾಗೂ ಶಿಕಾರಿಪುರ ತಾಲ್ಲೂಕಿನ ಅಂಜನಾಪುರ ಜಲಾಶಯಕ್ಕೆ ತಲಾ ಅರ್ಧ ಟಿಎಂಸಿ ಅಡಿ ನೀರು ಒದಗಿಸಲಾಗುವುದು.  ಹಿರೇಕೆರೂರು ತಾಲ್ಲೂಕಿನ ಸರ್ವಜ್ಞ ಏತನೀರಾವರಿ ಯೋಜನೆ, ದಾವಣಗೆರೆ ಜಿಲ್ಲೆ ಭರಮಸಾಗರ, ಜಗಳೂರು ಏತನೀರಾವರಿ ಯೋಜನೆಗೂ ಅನುದಾನ ನೀಡಲಾಗಿದೆ ಎಂದು ವಿವರ ನೀಡಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ್, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿ ಎ.ಆರ್.ರವಿ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ರೇವಣ್ಣಪ್ಪ, ಜ್ಯೋತಿ ಪ್ರಕಾಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು