ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರ್ತಿಯತ್ತ ಲಿಂಗನಮಕ್ಕಿ ಜಲಾಶಯ

ನದಿಗೆ ನೀರು; ಮುಂಜಾಗ್ರತೆ ವಹಿಸಲು ಕೆಪಿಸಿ ಸೂಚನೆ
Last Updated 7 ಆಗಸ್ಟ್ 2022, 7:06 IST
ಅಕ್ಷರ ಗಾತ್ರ

ಶಿವಮೊಗ್ಗ: ಶರಾವತಿ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿದ್ದು, ಲಿಂಗನಮಕ್ಕಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹೀಗಾಗಿ ಅಣೆಕಟ್ಟೆಯ ಸುರಕ್ಷತಾ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಜಲಾಶಯದಿಂದ ಯಾವುದೇ ಸಮಯದಲ್ಲಿ ಹೊರ ಬಿಡಲಾಗುತ್ತಿದೆ.

ಅಣೆಕಟ್ಟೆಯ ಕೆಳದಂಡೆಯಲ್ಲಿ ಹಾಗೂ ನದಿಯ ಪಾತ್ರದುದ್ದಕ್ಕೂ ವಾಸಿಸುತ್ತಿರುವ ಸಾರ್ವಜನಿಕರು ತಮ್ಮ ಜನ, ಜಾನುವಾರುಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳುವಂತೆ ಕರ್ನಾಟಕ ವಿದ್ಯುತ್ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಮನವಿ ಮಾಡಿದ್ದಾರೆ.

ಜಲಾಶಯದ ನೀರಿನ ಮಟ್ಟ ದಿನೇ ದಿನೇ ಏರುತ್ತಿದೆ. ಗರಿಷ್ಠ ಮಟ್ಟ 1819 ಅಡಿಗಳಾಗಿದ್ದು, ಶನಿವಾರ ಬೆಳಿಗ್ಗೆ 8ಕ್ಕೆ ಜಲಾಶಯದ ನೀರಿನ ಮಟ್ಟ 1801.35 ಅಡಿಗಳಾಗಿದೆ. ಶನಿವಾರ ಲಿಂಗನಮಕ್ಕಿ ಜಲಾಶಯದ ಒಳ ಹರಿವು 30,397 ಕ್ಯುಸೆಕ್‌ಗೂ ಹೆಚ್ಚಿದ್ದು, ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣಇದೇ ರೀತಿಯಲ್ಲಿ ಮುಂದುವರಿದರೆ ಶೀಘ್ರ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಕಳೆದ ವರ್ಷಕ್ಕಿಂತ ಕಡಿಮೆ: ವಿಶೇಷವೆಂದರೆ ಲಿಂಗನಮಕ್ಕಿ ಜಲಾಶಯದಲ್ಲಿ ಕಳೆದ ವರ್ಷ (2021) ಆಗಸ್ಟ್ 6ರಂದು ನೀರಿನ ಮಟ್ಟ 1810.35 ಅಡಿ ಇತ್ತು. ಈ ಬಾರಿ ಕಳೆದ ವರ್ಷಕ್ಕಿಂತ ನೀರು ಕಡಿಮೆ ಸಂಗ್ರಹವಾಗಿದೆ.

ವ್ಯಾಪಕ ಮಳೆ:

ಹೊಸನಗರ ತಾಲ್ಲೂಕಿನಲ್ಲಿ ಲಿಂಗನಮಕ್ಕಿ ಜಲಾನಯನ ಪ್ರದೇಶದ ಹುಲಿಕಲ್ಲಿನಲ್ಲಿ ಕಳೆದ 24 ಗಂಟೆಯಲ್ಲಿ 19 ಸೆಂ.ಮೀ. ಮಳೆ ದಾಖಲಾಗಿದೆ. ಮಾಸ್ತಿಕಟ್ಟೆಯಲ್ಲಿ 18.3 ಸೆಂ.ಮೀ, ಮಾಣಿ 16.5 ಸೆಂ.ಮೀ., ಚಕ್ರಾ ನಗರ 16.1 ಸೆಂ.ಮೀ., ಸಾವೆಹಕ್ಲು 16 ಸೆಂ.ಮೀ., ಯಡೂರು 13.7 ಸೆಂ.ಮೀ, ಸುಳಗೋಡು 12.9 ಸೆಂ.ಮೀ., ಬಿದನೂರಿನಲ್ಲಿ 11.6 ಸೆಂ.ಮೀ. ಮಳೆಯಾಗಿದೆ.

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಹೊನ್ನೆತಾಳು ವ್ಯಾಪ್ತಿಯಲ್ಲಿ 12.45 ಸೆಂ.ಮೀ., ಬಿದರಗೋಡು ಸುತ್ತಲೂ 12.85 ಸೆಂ.ಮೀ. ಮಳೆಯಾಗಿದೆ.

97 ಮನೆಗಳಿಗೆ ಹಾನಿ

ಜಿಲ್ಲೆಯಲ್ಲಿ ಆರು ದಿನಗಳಲ್ಲಿ (ಆಗಸ್ಟ್ 1ರಿಂದ 6) ಸರಾಸರಿ 14 ಸೆಂ.ಮೀ.
ಮಳೆಯಾಗಿದೆ. ವಾಡಿಕೆಯಂತೆ ಆಗಸ್ಟ್ ಮೊದಲ ವಾರದಲ್ಲಿ 14.1 ಸೆಂ.ಮೀ. ಮಳೆಯಾಗಬೇಕಿದೆ. ಆದರೆ, ಇಲ್ಲಿಯವರೆಗೆ 14 ಸೆಂ.ಮೀ ಮಳೆಯಾಗಿದೆ.‌ ಇಷ್ಟು ಮಳೆ ಬಿದ್ದರೂ ತಿಂಗಳ ಆರಂಭದಲ್ಲಿ ಶೇ 1ರಷ್ಟು ವಾಡಿಕೆಗಿಂತ ಮಳೆ ಕಡಿಮೆ ಆಗಿದೆ.

ಜಿಲ್ಲೆಯಲ್ಲಿ 163 ಹಳ್ಳಿಗಳಲ್ಲಿ ಮಳೆಯಿಂದಾಗಿ ಅನಾಹುತ ಸಂಭವಿಸಿದೆ. ಮನೆಯ ಗೋಡೆ, ಸಂಪೂರ್ಣ ಮನೆ ಹಾನಿಗೊಳಗಾಗಿರುವುದು ಸೇರಿ 97 ಮನೆಗಳು ಹಾಳಾಗಿವೆ. 132 ಮನೆಗಳಿಗೆ ಮಳೆ ನೀರು ನುಗ್ಗಿದೆ. 266 ಎಕರೆ ಪ್ರದೇಶದಲ್ಲಿ ಬೆಳೆದ ಭತ್ತ ಮತ್ತು ಮೆಕ್ಕೆಜೋಳ ಹಾನಿಗೀಡಾಗಿವೆ. 10 ವಿದ್ಯುತ್ ಕಂಬಗಳು ಉರುಳಿವೆ.

ಜಲಾಶಯಗಳು ಬಹುತೇಕ ಭರ್ತಿ

ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ ಸರಾಸರಿ 4.6 ಸೆಂ.ಮೀ. ಮಳೆಯಾಗಿದೆ. ತೀರ್ಥಹಳ್ಳಿಯಲ್ಲಿ 6.7 ಸೆಂ.ಮೀ., ಹೊಸನಗರ 6.60 ಸೆಂ.ಮೀ., ಸಾಗರ 5.83 ಸೆಂ.ಮೀ., ಸೊರಬ 4.35 ಸೆಂ.ಮೀ, ಶಿಕಾರಿಪುರ 2.48 ಸೆಂ.ಮೀ., ಶಿವಮೊಗ್ಗ 1.90 ಹಾಗೂ ಭದ್ರಾವತಿ ತಾಲ್ಲೂಕಿನಲ್ಲಿ 1.15 ಸೆಂ.ಮೀ ಮಳೆ ದಾಖಲಾಗಿದೆ.

ಲಿಂಗನಮಕ್ಕಿ ಹೊರತುಪಡಿಸಿ ತುಂಗಾ, ಭದ್ರಾ, ಅಂಜನಾಪುರ, ಚಕ್ರ, ಅಂಬ್ಲಿಗೋಳ, ಮಾಣಿ ಅಣೆಕಟ್ಟೆಗಳು ಬಹುತೇಕ ಭರ್ತಿಯಾಗಿವೆ. 154.35 ಅಡಿ ನೀರು ಸಾಮರ್ಥ್ಯದ ಅಂಜನಾಪುರ ಜಲಾಶಯದಲ್ಲಿ 154.79 ಅಡಿ ನೀರು ಸಂಗ್ರಹವಿದೆ. ಅಂಬ್ಳಿಗೋಳ ಜಲಾಶಯ 193.52 ಅಡಿ ಗರಿಷ್ಠ ಸಾಮರ್ಥ್ಯವಿದ್ದು, 193.53‌ ಅಡಿ ನೀರು ಸಂಗ್ರಹವಾಗಿದೆ. ಚಕ್ರ‌ ಜಲಾಶಯದ ಗರಿಷ್ಠ ಎತ್ತರ 580.57 ಅಡಿ ಅಲ್ಲಿ ಈಗ 572.80 ನೀರು ಸಂಗ್ರಹವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT