ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಸಭೆಯಲ್ಲಿ ಕಾವೇರಿಸಿದ ಮದ್ಯದ ಘಮಲು

ಹರಾಜು ಪ್ರಕ್ರಿಯೆಗೆ ಸದಸ್ಯರ ಆಕ್ರೋಶ
Last Updated 14 ಅಕ್ಟೋಬರ್ 2021, 3:29 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಹರಾಜು ಪ್ರಕ್ರಿಯೆ ನಡೆದು ಮೂರು ತಿಂಗಳು ಕಳೆದರೂ ಇನ್ನೂ ಮಳಿಗೆ ಖಾಲಿ ಮಾಡಿಸಿಲ್ಲ. ವ್ಯಾಪಾರಿಗೆ, ಬಿಡ್‌ದಾರರಿಗೆ ಮೋಸ ಆಗಿದೆ. ಹಿಂದಿನ ವ್ಯಾಪಾರಿಯನ್ನು ತೆರವುಗೊಳಿಸದೇ ಹರಾಜು ನಡೆಸುವುದು ಸರಿಯಲ್ಲ ಎಂದು ಗ್ರಾಮಸ್ಥರು ದೂರಿದರು.

ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಮಾಜಿ ಅಧ್ಯಕ್ಷ ಎಚ್.ಪಿ. ಅನಿಲ್ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಚರ್ಚೆ ನಡೆಯಿತು.

ಸ್ವ ಹಿತಾಸಕ್ತಿಗೆ ಗ್ರಾಮ ಪಂಚಾಯಿತಿ ಆದಾಯ ಕಡಿಮೆಯಾಗಿದೆ. ಗ್ರಾಮ ಪಂಚಾಯಿತಿ ಸ್ವಾಧೀನದಲ್ಲಿರುವ ಮಳಿಗೆ ಹಿಂಪಡೆಯಲು ಕಾನೂನು ತೊಡಕು ಹೇಗೆ ಬಂದಿದೆ. ಪೊಲೀಸ್ ಇಲಾಖೆಯ ಸಹಾಯದೊಂದಿಗೆ ತೆರವು ಯಾಕೆ ಆಗಲಿಲ್ಲ ಎಂದು ಅವರುಪ್ರಶ್ನಿಸಿದರು.

ವಿದ್ಯುತ್ ಬಿಲ್ ₹ 33 ಲಕ್ಷ ಬಾಕಿ ಇದೆ. ಸದಸ್ಯರ ಒತ್ತಡದಿಂದ ಕಾಡು ದಾರಿಯಲ್ಲಿ ಪ್ರತಿ ಕಂಬಕ್ಕೆ ವಿದ್ಯುತ್ ದೀಪ ಅಳವಡಿಸಲಾಗುತ್ತಿದೆ. ಅವಶ್ಯಕತೆಗೆ ಮೀರಿ ಬೀದಿದೀಪ ಹಾಕಿರುವುದರಿಂದ ಪಂಚಾಯಿತಿಗೆ ಹೊರೆಯಾಗಲಿದೆ ಎಂದು ಅನಿಲ್ ಹೇಳಿದರು.

ಗ್ರಾಮದ ಯುವಕರು ಉದ್ಯೋಗ ವಂಚಿತರಾಗಿದ್ದಾರೆ. ಮೆಡಿಕಲ್ ಶಾಪ್ ಅನುಮತಿಯಲ್ಲಿ ಪಂಚಾಯಿತಿ ತಪ್ಪು ಮಾಡಿದೆ. ಸ್ಥಳೀಯರಿಗೆ, ಓದಿರುವವರಿಗೆ ಅವಕಾಶ ನೀಡದೆ ಹೊರಗಿನವರಿಗೆ ಮಣೆ ಹಾಕಲಾಗಿದೆ ಎಂದು ಗ್ರಾಮಸ್ಥರು ದೂರಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿ ನಾಗೇಂದ್ರ ಸಭೆ ಅಧ್ಯಕ್ಷತೆ ವಹಿಸಿದ್ದರು. ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಅಬಕಾರಿ, ಮೆಸ್ಕಾಂ, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಅಕ್ರಮ ಮದ್ಯ ಮಾರಾಟ ನಿಲ್ಲಿಸಿ: ‘ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಎಗ್ಗಿಲ್ಲದೇ ನಡೆಯುತ್ತಿದೆ. ಗ್ರಾಮದಲ್ಲಿ ಮದ್ಯ ವ್ಯಸನಿಗಳ ಸಂಖ್ಯೆ ಜಾಸ್ತಿಯಾಗಿದೆ. ಅಬಕಾರಿ ಇಲಾಖೆ ಅಧಿಕಾರಿಗಳು ಅಕ್ರಮಕ್ಕೆ ಸಹಕಾರ ನೀಡುತ್ತಿದ್ದಾರೆ. ಕರ್ತವ್ಯ ಪ್ರಜ್ಞೆ ಮರೆತ ಅಬಕಾರಿ ಇಲಾಖೆ ವಿರುದ್ಧ ಗ್ರಾಮ ಪಂಚಾಯಿತಿ ಆಡಳಿತ ದೂರು ನೀಡಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’ ಎಂದು ಗ್ರಾಮಸ್ಥರುಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT