ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಿಂದ ನನ್ನ ವಿರುದ್ಧ ಅಪಪ್ರಚಾರ: ಈಶ್ವರಪ್ಪ ಆರೋಪ

-
Published 15 ಏಪ್ರಿಲ್ 2024, 16:25 IST
Last Updated 15 ಏಪ್ರಿಲ್ 2024, 16:25 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ನನ್ನ ಬಗ್ಗೆ ಭಯ ಶುರುವಾಗಿ ಅಪಪ್ರಚಾರದಲ್ಲಿ ತೊಡಗಿದ್ದಾರೆ’ ಎಂದು ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಹೇಳಿದರು.

‘ಕಾಂಗ್ರೆಸ್‌ ಅಭ್ಯರ್ಥಿ ದುರ್ಬಲ ಆಗಿರುವುದರಿಂದ ರಾಘವೇಂದ್ರ ಅವರಿಗೆ ಅವರ ಭಯವೇ ಇಲ್ಲ. ಬದಲಾಗಿ ನನ್ನ ಬಗ್ಗೆ ಭಯ ಶುರುವಾಗಿದೆ. ಹೀಗಾಗಿ ಟೀಕಿಸುತ್ತಿದ್ದಾರೆ. ನನ್ನ ಸ್ಪರ್ಧೆಯ ಕುರಿತು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ’ ಎಂದು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಚುನಾವಣಾ ಕಣದಿಂದ ನಾನು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಅನೇಕ ಬಾರಿ ಸ್ಪಷ್ಟಪಡಿಸಿದ್ದೇನೆ. ಬ್ರಹ್ಮ ಬಂದು ಹೇಳಿದರೂ, ನರೇಂದ್ರ ಮೋದಿ ಹೇಳಿದರೂ ಹಿಂದಕ್ಕೆ ಪಡೆಯೊಲ್ಲ ಎಂದು ಹೇಳಿದರೂ, ಈಶ್ವರಪ್ಪ ನಾಮಪತ್ರ ವಾಪಸ್ ಪಡೆಯವ ಸಾಧ್ಯತೆ ಇದೆ ಎಂದು ಗುಲ್ಲು ಹರಡಿಸಲಾಗುತ್ತಿದೆ’ ಎಂದು ಅವಲತ್ತುಕೊಂಡರು.

‘ಕಾಂಗ್ರೆಸ್ ಪಕ್ಷದಿಂದ ಡಮ್ಮಿ ಅಭ್ಯರ್ಥಿ ಹಾಕಲಾಗಿದೆ ಎಂಬ ನನ್ನ ಮಾತಿಗೆ ಮಧು ಬಂಗಾರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಬೇರೇನು ಹೇಳಬೇಕೆಂದು ಅವರೇ ಹೇಳಲಿ, ಅದರಂತೆ ಕರೆಯುತ್ತೇನೆ’ ಎಂದು ವ್ಯಂಗ್ಯವಾಡಿದರು.

‘ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹೊಂದಾಣಿಕೆಯಾಗಿದೆ. ಒಂದರ್ಥದಲ್ಲಿ ಇವರು ಚುನಾವಣಾ ಪಾಲುದಾರರು. ಹೀಗಾಗಿಯೇ ಕಾಂಗ್ರೆಸ್ ಹೆಚ್ಚು ಪ್ರಚಾರ ಮಾಡುತ್ತಿಲ್ಲ. ಅವರ ಹೊಂದಾಣಿಕೆಯಿಂದ ಮಧು ಬಂಗಾರಪ್ಪ ಮತ್ತು ರಾಘವೇಂದ್ರ ಎಲ್ಲಿಯೂ ಪರಸ್ಪರ ಟೀಕಿಸುತ್ತಿಲ್ಲ. ಇಬ್ಬರೂ ನನ್ನನ್ನು ಟೀಕಿಸುತ್ತಿದ್ದಾರೆ’ ಎಂದರು.

‘ನಾನು ರಾಜ್ಯಪಾಲ ಅಥವಾ ರಾಜ್ಯಸಭಾ ಸದಸ್ಯ ಆಗುವುದಿಲ್ಲ ಎಂದು ವರಿಷ್ಠರಿಗೆ ಹಿಂದೆಯೇ ಹೇಳಿದ್ದೇನೆ. ಯಾವುದೇ ಆಮಿಷಕ್ಕೆ ಬಲಿಯಾಗುವುದಿಲ್ಲ. ನನ್ನ ಮಗನಿಗೆ ಅನೇಕ ಆಮಿಷ ತೋರಿಸಿ ಅವರು ಮೋಸ ಮಾಡಿದ್ದಾಯಿತು. ಇನ್ನು ಮೋಸಕ್ಕೆ ಬಲಿಯಾಗುವುದಿಲ್ಲ ದೃಢ ನಿರ್ಧಾರ ತೆಗೆದುಕೊಂಡಿದ್ದೇನೆ. ಬೆಂಬಲಿಗರು ಯಾವುದೇ ಅಪಪ್ರಚಾರಕ್ಕೆ ಕಿವಿಕೊಡಬೇಡಿ’ ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ಕಾಚಿನಕಟ್ಟೆ ಸತ್ಯನಾರಾಯಣ, ಮಹಾಲಿಂಗ ಶಾಸ್ತ್ರಿ, ಗಂಗಾಧರ ಮಂಡೇನಕೊಪ್ಪ, ಶಿವಾಜಿ, ರಾಜಣ್ಣ, ತಿಪ್ಪೇಸ್ವಾಮಿ, ವಿಶ್ವಾಸ್ ಇದ್ದರು.

ನಾನು ಯಾವುದೇ ಪಕ್ಷದಲ್ಲಿ ಇಲ್ಲ: ಗೂಳಿಹಟ್ಟಿ ಶೇಖರ್

‘ನಾನು ಈಗ ಯಾವುದೇ ಪಕ್ಷದಲ್ಲಿ ಇಲ್ಲ. ನನಗೆ ಯಾವುದೇ ಬಂಧನವೂ ಇಲ್ಲ. ನಾನು ಸ್ವತಂತ್ರ. ಹೀಗಾಗಿ ನಾನು ಯಾರ ಪರವಾಗಿ ಎಲ್ಲಿ ಬೇಕಾದರೂ ಪ್ರಚಾರ ಮಾಡಬಹುದು. ಶಿವಮೊಗ್ಗದಲ್ಲಿ ಕೆ.ಎಸ್. ಈಶ್ವರಪ್ಪ ಹಾಗೂ ಚಿತ್ರದುರ್ಗದಲ್ಲಿ ಗೋವಿಂದ ಕಾರಜೋಳ ಅವರನ್ನು ಬೆಂಬಲಿಸಿ ಪ್ರಚಾರ ಮಾಡುತ್ತೇನೆ’ ಎಂದು ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕೆಲವರು ಈ ಕುರಿತು ಅನಗತ್ಯ ಗೊಂದಲ ಸೃಷ್ಟಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ ಹರಿಬಿಡುತ್ತಿದ್ದಾರೆ’ ಎಂದರು. ‘ಶಿಕಾರಿಪುರ ಶಿವಮೊಗ್ಗ ಗ್ರಾಮಾಂತರ ಸೊರಬ ವಿಧಾನಸಭಾ ಕ್ಷೇತ್ರಗಳಲ್ಲಿ 1.30 ಲಕ್ಷ ಭೋವಿ ಜನಾಂಗದವರಿದ್ದಾರೆ. ಇವರೆಲ್ಲರೂ ನನ್ನ ಜೊತೆ ಸಂಪರ್ಕದಲ್ಲಿದ್ದಾರೆ. ಈಶ್ವರಪ್ಪ ಅವರಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT