ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್‌ 22ಕ್ಕೆ ಶಿವಮೊಗ್ಗ ಮಾರಿಕಾಂಬ ಜಾತ್ರೆ

ಫೆ. 22ರಿಂದ ಆರಂಭವಾಗಬೇಕಿದ್ದ ಉತ್ಸವ ಒಂದು ತಿಂಗಳು ಮುಂದೂಡಿಕೆ
Last Updated 19 ಜನವರಿ 2022, 15:00 IST
ಅಕ್ಷರ ಗಾತ್ರ

ಶಿವಮೊಗ್ಗ: ಮುಂದಿನ ತಿಂಗಳು ಫೆ. 22ರಿಂದ ಆರಂಭವಾಗಬೇಕಿದ್ದ ಶಿವಮೊಗ್ಗ ಮಾರಿಕಾಂಬ ಜಾತ್ರೆಯನ್ನುಕೋವಿಡ್‌ ಕಾರಣ ಮಾರ್ಚ್‌ 22ಕ್ಕೆ ಮುಂದೂಡಲಾಗಿದೆ.

ಜಾತ್ರೆ ಮುಂದೂಡಿದರೂ ಸಿದ್ಧತೆಗಳು ಮುಂದುವರಿಯಲಿವೆ. ಕೋವಿಡ್‌ ನಿಯಮಗಳು, ಮಾರ್ಗಸೂಚಿ ಅನುಸರಿಸಿ ಮಾರಿಕಾಂಬ ಜಾತ್ರೆ ನಡೆಸಲು ನಿರ್ಧರಿಸಲಾಗಿದೆ ಎಂದು ಕೋಟೆ ಶ್ರೀಮಾರಿಕಾಂಬ ಸಮಿತಿ ಅಧ್ಯಕ್ಷ ಎಸ್.ಕೆ. ಮರಿಯಪ್ಪ, ಕಾರ್ಯದರ್ಶಿ ಎನ್. ಮಂಜುನಾಥ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮಾರ್ಚ್ ವೇಳೆಗೆ ಕೊರೊನಾ ಹಾವಳಿ ಕಡಿಮೆಯಾಗುವ ಸಾಧ್ಯತೆ ಇದೆ. ಸಾಂಪ್ರದಾಯಿಕ ಮಾರಿಜಾತ್ರೆಗೆ ತೊಂದರೆ ಇರುವುದಿಲ್ಲ. ನಾಡಿಗರ ಮನೆಯಿಂದ ಹಿಡಿದು ವಿವಿಧ ಜಾತಿಗಳ ನೇತೃತ್ವದಲ್ಲಿ ವಿಧಿ ವಿಧಾನ, ಪೂಜೆ ಶಾಸ್ತ್ರೋಕ್ತವಾಗಿ ನಡೆಯಲಿವೆ. ಜಾತ್ರೆ ಮೂರು ಅಥವಾ ನಾಲ್ಕು ದಿನಗಳು ನಡೆಸುವ ಕುರಿತು ಮತ್ತೊಮ್ಮೆ ಸಭೆ ಸೇರಿ ನಿರ್ಧರಿಸಲಾಗುವುದು ಎಂದರು.

ದೇವಸ್ಥಾನ ಸುತ್ತಮುತ್ತ ಯಾವುದೇ ರೀತಿಯ ಅಂಗಡಿಗಳು, ವಸ್ತು ಪ್ರದರ್ಶನ ಇರುವುದಿಲ್ಲ. ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡು ದೇವಿಯ ದರ್ಶನ ಪಡೆಯಬೇಕು. ಜಿಲ್ಲಾಡಳಿತದ ಸೂಚನೆ ಅನ್ವಯ ಮಾರಿಕಾಂಬ ಜಾತ್ರೆ ನಡೆಸಲಾಗುವುದು. ಜ.28ರಂದು ಮರ ತರುವ ಪ್ರಕ್ರಿಯೆ ನಡೆಯುತ್ತದೆ. ತಂದ ಮರವನ್ನು ತವರು ಮನೆಯಲ್ಲಿ ಇಡಲಾಗುವುದು. ಶೂನ್ಯ ಮಾಸದಲ್ಲಿಯೇ ಮರ ತರುವುದು ರೂಢಿ. ಮರ ತಂದರೆ ದೇವಿ ಕೂರಿಸಲೇ ಬೇಕಾಗುತ್ತದೆ. ಈ ಪ್ರಕ್ರಿಯೆ ಜ. 28 ರಂದೇ ನಡೆಯುತ್ತದೆ. ನಂತರ ಮಾರ್ಚ್ ತಿಂಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಕೆಲವು ಬದಲಾವಣೆಗೆ ಒಳಪಟ್ಟು ಸಂಭ್ರಮದಿಂದಲೇ ನಡೆಸಲಾಗುವುದು ಎಂದು ವಿವರ ನೀಡಿದರು.

ಮೇಯರ್ ಸುನಿತಾ ಅಣ್ಣಪ್ಪ ಮಾತನಾಡಿ, ಶಿವಮೊಗ್ಗದ ಮಾರಿಕಾಂಬೆಗೆ ವಿಶಿಷ್ಟವಾದ ಶಕ್ತಿ ಇದೆ. ಈ ಬಾರಿ ಮಾರಿಕಾಂಬೆ ಹಬ್ಬ ನಡೆಯುತ್ತದೆ. ಬೇವಿನ ಉಡುಗೆ ಸೇರಿದಂತೆ ಮಹಿಳೆಯರಿಂದ ವಿಶೇಷ ಪೂಜೆಗಳು ನೆರವೇರಲಿವೆ. ಅಂತರ ಕಾಯ್ದುಕೊಂಡು, ನಿಯಮಾನುಸಾರ ಮಾರಿಕಾಂಬ ಜಾತ್ರೆ ನಡೆಸಲಾಗುವುದು. ಈ ಬಾರಿ ಪಾಲಿಕೆಯಿಂದ ಜಾತ್ರೆಗೆ ₹ 10 ಲಕ್ಷ ನೀಡಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನ ಸಮಿತಿ ಮುಖಂಡರಾದ ಯಮುನಪ್ಪ, ಡಿ.ಎಂ. ರಾಮಯ್ಯ, ಸೀತಾರಾಮ ನಾಯಕ, ತಿಮ್ಮಣ್ಣ, ಲೋಕೇಶ್, ಸತ್ಯನಾರಾಯಣ, ಚಂದ್ರಶೇಖರ್, ತುಕ್ಕೋಜಿರಾವ್, ಶ್ರೀಧರಮೂರ್ತಿ ನವಲೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT