ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥಹಳ್ಳಿ | ತೆರೆದ ಬಾವಿಯಲ್ಲಿ ಫ್ಲೋರೈಡ್‌ ಅಂಶ: ಶಾಸಕ ಆರಗ ಜ್ಞಾನೇಂದ್ರ ಆತಂಕ

Published 28 ನವೆಂಬರ್ 2023, 15:54 IST
Last Updated 28 ನವೆಂಬರ್ 2023, 15:54 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ‘ಶಂಕರಾಪುರ ಗ್ರಾಮದ ತೆರೆದ ಬಾವಿಯಲ್ಲಿ ಫ್ಲೋರೈಡ್‌ ಅಂಶ ಕಂಡು ಬಂದಿದೆ. ಶಾಲಾ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಆಗುತ್ತಿಲ್ಲ. ಆಗುಂಬೆ ಹೋಬಳಿಯಲ್ಲಿಯೇ ನೀರಿಗೆ ಹಾಹಾಕಾರ ಹೆಚ್ಚಳವಾಗಿದೆ. ಅಧಿಕಾರಿಗಳು ಚೌಕಾಸಿ ಮಾಡುತ್ತಿದ್ದೀರಾ’ ಎಂದು ಶಾಸಕ ಆರಗ ಜ್ಞಾನೇಂದ್ರ ಗದರಿದರು.

ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಅನಾವೃಷ್ಟಿಯ ಸಮಸ್ಯೆಗಳ ಕುರಿತು ಮಂಗಳವಾರ ನಡೆದ ಟಾಸ್ಕ್‌ ಫೋರ್ಸ್‌ ಸಭೆಯಲ್ಲಿ ಅವರು ಆತಂಕ ವ್ಯಕ್ತಪಡಿಸಿದರು.

‘ನೊಣಬೂರು, ಅರಳಸುರಳಿ, ಕೋಣಂದೂರು, ತ್ರಿಯಂಬಕಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಫ್ಲೋರೈಡ್‌ ಅಂಶ ಕಂಡು ಬರುತ್ತಿದೆ. ಜನವರಿಯಿಂದ ನೀರಿನ ಸಮಸ್ಯೆ ತೀವ್ರಗೊಳ್ಳಲಿದ್ದು, ಖಾಸಗಿ ಬೋರ್‌ವೆಲ್‌ ವಶಪಡಿಸಿಕೊಂಡಾದರೂ ನೀರು ಒದಗಿಸಬೇಕು’ ಎಂದು ತಾಕೀತು ಮಾಡಿದರು.

‘₹ 160 ಕೋಟಿ ಮೊತ್ತದ ಜೆಜೆಎಂ ಯೋಜನೆ ಬೇಕಾಬಿಟ್ಟಿ ಅನುಷ್ಠಾನ ಮಾಡಲಾಗುತ್ತಿದೆ. ಯಾವ ಹಳ್ಳಿಗಳಿಗೆ ನೀರು ಅಗತ್ಯವಾಗಿ ಬೇಕಿತ್ತೋ ಅಲ್ಲಿಗೆ ನೀರು ಸರಬರಾಜಾಗುತ್ತಿಲ್ಲ. ಎಂಜಿನಿಯರ್‌ಗಳು ಸಭೆಗೆ ಯಾಕ್ರಿ ಬಂದಿಲ್ಲ. ನಿಮಗೇನು ಹೊಣೆಗಾರಿಕೆ ಇಲ್ವಾ. ಸಭೆಗೆ ಬಾರದೆ ಚೌಕಾಸಿ ಮಾಡುತ್ತಿದ್ದೀರಲ್ಲ ಯಾಕೆ. ಹೀಗೇ ಮುಂದುವರಿದರೆ ನಿಮನ್ನು ವರ್ಗಾವಣೆ ಮಾಡಲು ಶಿಫಾರಸ್ಸು ಮಾಡುತ್ತೇನೆ’ ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಚಂದ್ರಶೇಖರ್‌ಗೆ ಎಚ್ಚರಿಗೆ ನೀಡಿದರು.

10ರಿಂದ 15 ಮನೆಗಳಿರುವ ಕೊಡಸೆ, ನಂದಿಗೋಡು, ಹುಲಿಸರ, ಇಕ್ಕೇರಿ, ಕಾರಂಜಿ, ನಿಲುವಾಸೆ, ಟೆಂಕಬೈಲು, ನಾಗಜ್ಜಿಕುಮ್ರಿ, ಕುಡುಮಲ್ಲಿಗೆ, ಗುಡ್ಡೇಕೊಪ್ಪ, ಕಲ್ಲತ್ತಿ, ಕೂಡಿಗೆ, ತ್ರಿಯಂಬಕಪುರ, ಮಲ್ಲಂದೂರು ಶೆಟ್ಟಿಹಳ್ಳಿ, ಹೆದ್ದೂರು, ಗುರುವಳ್ಳಿ ಬಸವಾನಿ, ಹೊನ್ನೇತ್ತಾಳು, ಶೀರೂರು ಮುಂತಾದ ಗ್ರಾಮಗಳಲ್ಲಿ ಜೆಜೆಎಂ ಯೋಜನೆಯ ಪೈಪ್‌ಲೈನ್‌ ಅನುಷ್ಠಾನ ಗೊಂಡಿಲ್ಲ ಎಂದು ವಿವಿಧ ಗ್ರಾಮ ಪಂಚಾಯಿತಿ ಪಿಡಿಒಗಳು ದೂರಿದರು.

‘ತಾಲ್ಲೂಕಿಗೆ ನೀರು ಪೂರೈಸುವ ಉದ್ದೇಶದಿಂದ ₹356 ಕೋಟಿ ವೆಚ್ಚದ ಬಹುಗ್ರಾಮ ಯೋಜನೆ ಮಂಜೂರು ಮಾಡಿಸಿದ್ದೇನೆ. ಪಂಚಾಯಿತಿ ಸದಸ್ಯರೇ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದು, ಯೋಜನೆ ಮಣ್ಣು ಪಾಲಾಗುತ್ತಿದೆ. ಬೇಕು ಅಂತ ನಿರ್ಣಯ ಮಾಡಿದ್ದಾರಲ್ಲ ಅವರೇ ಎಲ್ಲ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಕೊಡಲಿ’ ಎಂದು ರೇಗಿದರು.

ಸಭೆಯಲ್ಲಿ ತಹಶೀಲ್ದಾರ್ ಜಕ್ಕನ ಗೌಡರ್‌, ಇಒ ಶೈಲಾ ಎನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT