ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: 'ಮೋದಿ ಕರ್ತವ್ಯ ಪ್ರಜ್ಞೆ ಎಲ್ಲರಿಗೂ ಮಾದರಿ'

ಸರ್ಕಾರಿ ನೌಕರರ ತಾಲ್ಲೂಕು ಸಮ್ಮೇಳನ: ಸಂಸದ ಬಿವೈಆರ್ ಅಭಿಮತ
Last Updated 5 ಫೆಬ್ರುವರಿ 2023, 6:35 IST
ಅಕ್ಷರ ಗಾತ್ರ

ಶಿವಮೊಗ್ಗ: ‘ತಾಯಿಯ ಸಾವಿನ ಶೋಕದ ಸಂದರ್ಭದಲ್ಲೂ ಕರ್ತವ್ಯದ ಕರೆ ಮರೆಯದೇ ಅರ್ಧ ದಿನಕ್ಕೆ ಕೆಲಸಕ್ಕೆ ಮರಳಿದ ಪ್ರಧಾನಮಂತ್ರಿ ನರೇಂದ್ರ ಮೋದಿ ನಮಗೆಲ್ಲ ಮಾದರಿಯಾಗಿ ನಿಲ್ಲುತ್ತಾರೆ’ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಇಲ್ಲಿನ ಎನ್‌ಇಎಸ್ ಮೈದಾನದಲ್ಲಿ ಶನಿವಾರ ನಡೆದ ಸರ್ಕಾರಿ ನೌಕರರ ತಾಲ್ಲೂಕು ಸಮ್ಮೇಳನ ಹಾಗೂ ಫ್ಯಾಮಿಲಿ ಮಾರ್ಟ್ ಉದ್ಘಾಟಿಸಿ ಅವರು ಮಾತನಾಡಿದರು.

‘ರಜೆ ಕೂಡ ಘೋಷಣೆ ಮಾಡದೇ, ಮಧ್ಯಮ ವರ್ಗದ ಕುಟುಂಬದಲ್ಲಿ ನಡೆಯುವ ಅಂತ್ಯಸಂಸ್ಕಾರದಂತೆ ತಾಯಿಯ ಕಾರ್ಯ ಮುಗಿಸಿ, ಪಶ್ಚಿಮ ಬಂಗಾಳದಲ್ಲಿ ಅಧಿಕೃತ ಕಾರ್ಯಕ್ರಮದಲ್ಲಿ ಭಾಗಿಯಾಗಲು ತೆರಳಿದ ನರೇಂದ್ರ ಮೋದಿ ಅವರಿಗಿಂತ ಮಾದರಿ ವ್ಯಕ್ತಿ ನಮಗೆ ಬೇಕಾ?’ ಎಂದು ಪ್ರಶ್ನಿಸಿದರು.

‘ವಿಮಾನ ನಿಲ್ದಾಣದ ಉದ್ಘಾಟನೆಯ ನಂತರ ಅದರ ಬಳಕೆಗೆ ಅನುಕೂಲ ಆಗಲು ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಕೇಂದ್ರ ಪ್ರವಾಸೋದ್ಯಮ ಸಚಿವರಿಗೆ ಮಾಹಿತಿ ನೀಡಿರುವೆ’ ಎಂದು ತಿಳಿಸಿದರು.

ಸರ್ಕಾರಿ ನೌಕರರ ಸಂಘದವರು ಇಟ್ಟಿರುವ ಬೇಡಿಕೆಗಳನ್ನು ಹಂತ ಹಂತವಾಗಿ ಕಾರ್ಯರೂಪಕ್ಕೆ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ‘ಎನ್‌ಪಿಎಸ್ ಹಾಗೂ ವೇತನ ಆಯೋಗ ಜಾರಿಯ ಬಗ್ಗೆ ಯಡಿಯೂರಪ್ಪ ಸಾಹೇಬರ ಜೊತೆ ಚರ್ಚೆ ಮಾಡಿದ್ದೇನೆ. ಹಳೆಯ ಪಿಂಚಣಿ ವ್ಯವಸ್ಥೆ ಜಾರಿ ವಿಚಾರದಲ್ಲಿ ನೌಕರರು ಬೀದಿಗಿಳಿಯುವುದು ಬೇಡ. ಬೇಡಿಕೆ ಈಡೇರಿಸಲಿದ್ದೇವೆ ಎಂದು ಭರವಸೆ ನೀಡಿದ್ದಾರೆ’ ಎಂದು ತಿಳಿಸಿದರು.

‘ನೌಕರರು ಯಾರೂ ಕೂಡ ವಿಚಲಿತರಾಗುವುದು ಬೇಡ. ನಿಮ್ಮ ಜೊತೆ ಸಂಘ ಇದೆ. ಅನಿವಾರ್ಯವಾದರೆ ಹೋರಾಟ ಮಾಡಿ ನಮ್ಮ ಹಕ್ಕು ಪಡೆಯುವ ಶಕ್ತಿ ಇದೆ. ನಾವೆಲ್ಲ ರಸ್ತೆಗಿಳಿದರೆ ಸರ್ಕಾರದ ಪರಿಸ್ಥಿತಿ ಏನಾಗಲಿದೆ. ಸರ್ಕಾರ ಅದಕ್ಕೆ ಅವಕಾಶ ಕೊಡದಿರಲಿ’ ಎಂದರು.

‘ಈ ಬಾರಿಯ ಬಜೆಟ್‌ ₹3 ಲಕ್ಷ ಕೋಟಿಯ ನಿಶ್ವಯ ಆಗಿದೆ. ಜಿಎಸ್‌ಟಿ ಸಂಗ್ರಹದಲ್ಲಿ ಎರಡನೇ ರಾಜ್ಯ ಇಡೀ ದೇಶದಲ್ಲಿ ಕರ್ನಾಟಕ. ಅನೇಕ ಮೊದಲುಗಳಿಗೆ ನೌಕರರ ಕೊಡುಗೆ ಕಾರಣವಾಗಿದೆ. ಯಡಿಯೂರಪ್ಪ ಎರಡೂವರೆ ವರ್ಷಗಳಲ್ಲಿ 25 ಸರ್ಕಾರಿ ಆದೇಶಗಳನ್ನು ನೌಕರರಿಗೆ ಕೊಟ್ಟಿದ್ದಾರೆ’ ಎಂದು ತಿಳಿಸಿದರು.

ಸಮಾರಂಭದಲ್ಲಿ ಶಾಸಕ ಅಶೋಕ ನಾಯ್ಕ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಈ.ಕಾಂತೇಶ್ ಮಾತನಾಡಿದರು. ನೌಕರರ ಸಂಘಟನೆಯ ಪದಾಧಿಕಾರಿಗಳು ಹಾಜರಿದ್ದರು. ಕೊನೆಗೆ ಡಾ.ಗುರುರಾಜ್ ಕರ್ಜಗಿ ಅವರ ವಿಶೇಷ ಉಪನ್ಯಾಸ ಹಾಗೂ ಕಲಾವಿದ ಗಂಗಾವತಿ ಪ್ರಾಣೇಶ್ ಅವರ ಹಾಸ್ಯ ನೆರೆದವರನ್ನು ರಂಜಿಸಿತು.

***

‘ಮಾಧ್ಯಮದವರು, ನಾವು ಅಣ್ಣತಮ್ಮಂದಿರಂತೆ ಇದ್ದೇವೆ’

‘ಶಿವಮೊಗ್ಗ ಜಿಲ್ಲೆಯ ಪತ್ರಿಕಾ ಮಾಧ್ಯಮದ ಮಿತ್ರರು ನಮ್ಮ ನೌಕರರ ಸಂಘಟನೆಯ ಬಗ್ಗೆ ಅತ್ಯಂತ ಅಭಿಮಾನ ಹೊಂದಿದ್ದಾರೆ. ಯಾರಾದರೂ ಕೆಟ್ಟ ವ್ಯಕ್ತಿಗಳು ನಮ್ಮ ಸಂಘಟನೆಯ ವಿರುದ್ಧ ಟೀಕೆ ಮಾಡಿದರೆ, ಹೇಳಿಕೆ ಕೊಟ್ಟರೆ ಮಾಧ್ಯಮಗಳಲ್ಲಿ ಅದನ್ನು ಪ್ರಸಾರ ಮಾಡುವುದಿಲ್ಲ. ಸಂಘಟನೆಗೆ ಅದು ಅವರು ಕೊಡುವ ಗೌರವ. ಅವರು (ಮಾಧ್ಯಮದವರು) ನಾವು ಅಣ್ಣ–ತಮ್ಮಂದಿರಂತೆ ಇದ್ದೇವೆ’ ಎಂದು ಸಿ.ಎಸ್‌. ಷಡಾಕ್ಷರಿ ಹೇಳಿದರು.

***

ಬಕೆಟ್‌ಗಟ್ಟಲೇ ಹಾಲು ಕರೆದುಕೊಂಡರು!

‘ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅವರ ಪಕ್ಕದಲ್ಲಿದ್ದ ಅವಕಾಶ ನೌಕರರ ಹಿತಕ್ಕೆ ಸಮರ್ಥವಾಗಿ ಬಳಸಿಕೊಂಡ ಶ್ರೇಯಸ್ಸು ಷಡಾಕ್ಷರಿಗೆ ಸಲ್ಲುತ್ತದೆ. ಯಡಿಯೂರಪ್ಪ ಅವರು ಕಾಮಧೇನು ಇದ್ದಂತೆ. ಅವರು ಸಿಎಂ ಆಗಿದ್ದಾಗ ಷಡಾಕ್ಷರಿ ಬಕೆಟ್‌ಗಟ್ಟಲೇ ಹಾಲು ಕರೆದುಕೊಂಡರು’ ಎಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದಾಗ ಸಭೆ ನಗೆಗಡಲಲ್ಲಿ ತೇಲಿತು.

‘ನೌಕರರ ಸಂಘಟನೆಯ ಹಿಂದಿನ ಅಧ್ಯಕ್ಷರುಗಳು ಆಯಾ ಮುಖ್ಯಮಂತ್ರಿಗಳಿಂದ ಬಕೆಟ್‌ಗಟ್ಟಲೇ ಹಾಲು ಕರೆದುಕೊಂಡು ತಮ್ಮ ಮನೆಗೆ ಒಯ್ದಿದ್ದರು. ಆದರೆ, ಷಡಾಕ್ಷರಿ ಅದನ್ನು ನೌಕರರ ಸಮುದಾಯಕ್ಕೆ ಹಂಚಿದ್ದಾರೆ’ ಎಂದು ಹೇಳಿದರು.

***

‘ಜಿಲ್ಲೆಯಲ್ಲಿ ಕೆಲಸ ಮಾಡುವವರು ಪುಣ್ಯವಂತರು’

‘ಸರ್ಕಾರಿ ನೌಕರರಿಗೆ ಚುನಾಯಿತ ಪ್ರತಿನಿಧಿಗಳು ತೊಂದರೆ ಕೊಡುತ್ತಿಲ್ಲದಿದ್ದರೆ ಅದು ರಾಜ್ಯದಲ್ಲಿಯೇ ಶಿವಮೊಗ್ಗ ಜಿಲ್ಲೆ ಹಾಗೂ ತಾಲ್ಲೂಕು ಮಾತ್ರ. ಅದನ್ನು ಹೆಮ್ಮೆಯಿಂದ ಹೇಳುವೆ’ ಎಂದು ಕೆ.ಎಸ್‌.ಈಶ್ವರಪ್ಪ ತಿಳಿಸಿದರು.

‘ಶಿವಮೊಗ್ಗದಲ್ಲಿ ಕೆಲಸ ಮಾಡಬೇಕಿದ್ದರೆ ನಾವು ಪುಣ್ಯವಂತರು ಎಂದು ಸರ್ಕಾರಿ ನೌಕರರೇ ಹೇಳುತ್ತಿದ್ದಾರೆ’ ಎಂದರು.

‘ವಿರೋಧ ಪಕ್ಷದಲ್ಲಿದ್ದಾಗಲೂ ಸರ್ಕಾರವನ್ನು ಸಮರ್ಥವಾಗಿ ಟೀಕಿಸುತ್ತಿದ್ದ ಆಯನೂರು ಮಂಜುನಾಥ್ ಆಡಳಿತ ಪಕ್ಷದಲ್ಲಿದ್ದರೂ ವಿರೋಧ ಪಕ್ಷದವರಂತೆ ಮಾತನಾಡುತ್ತಿದ್ದಾರೆ’ ಎಂದು ಈಶ್ವರಪ್ಪ ಭಾಷಣದಲ್ಲಿ ಟಾಂಗ್ ನೀಡಿದರು.

‘ವೇದಿಕೆ ತುಂಬಾ ಬಿಜೆಪಿ ನಾಯಕರೇ ತುಂಬಿದ್ದಾರೆ ಎಂಬುದು ಇಲ್ಲಿಗೆ ಬಂದಾಗ ಗೊತ್ತಾಯ್ತು. ಒಂದು ಕಡೆ ಜೆಡಿಎಸ್‌ನ ಭೋಜೇಗೌಡರು ಇದ್ದಾರೆ. ಇನ್ನು ಕಾಂಗ್ರೆಸ್‌ನವನು ನಾನೂ ಒಬ್ಬ ಇರಲಿ ಎಂದು ನನ್ನನ್ನು ಕರೆದಿದ್ದಾರೆ ಅನ್ನಿಸಿತ್ತು. ಷಡಕ್ಷರಿ ಅವರ ಮೇಲಿನ ಗೌರವದಿಂದ ಬಂದಿರುವೆ’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಸಂಯೋಜಕ ಎಸ್‌.ಪಿ.ದಿನೇಶ್ ಚಟಾಕಿ ಹಾರಿಸಿದರು.

***

ಈ ನಾಡು ಶಾಂತಿಯ ತೋಟ..

‘ಈ ನಾಡು ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕಿದೆ. ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ಸಂದೇಶ ನಾಡಗೀತೆಯ ಆಶಯ. ಅದು ನಮ್ಮ ಸಂವಿಧಾನದ ಆಶಯವೂ ಹೌದು. ಅದು ನಮ್ಮಿಂದ ನಿಮ್ಮಿಂದ ಆಗಬೇಕಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಸಾಗೋಣ’ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಸಲಹೆ ನೀಡಿದರು. ‘ಮಾಡುತ್ತಿರುವ ಕೆಲಸ ಇನ್ನಷ್ಟು ಪ್ರಾಮಾಣಿಕತೆಯಿಂದ ಮಾಡಿದರೆ ಅದರ ಎಲ್ಲ ವಿವರವನ್ನು ಜೋಡಿಸಿ ಒಂದು ದಿನ ಭಗವಂತ ಪುರಸ್ಕಾರ ಕೊಡಲಿದ್ದಾನೆ’ ಎಂದು ನೌಕರರಿಗೆ ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT