ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯವರು ಸುಳ್ಳಿನ ವ್ಯಾಪಾರಿಗಳು: ಆರ್.ಎಂ.ಮಂಜುನಾಥ ಗೌಡ ಟೀಕೆ

Last Updated 29 ಜುಲೈ 2021, 4:13 IST
ಅಕ್ಷರ ಗಾತ್ರ

ಸಾಗರ: ಬಿಜೆಪಿಯವರು ಸುಳ್ಳಿನ ವ್ಯಾಪಾರಿಗಳಾಗಿದ್ದು, ಜನರು ಅದಕ್ಕೆ ಮಾರು ಹೋಗಿದ್ದಾರೆ. ತಮ್ಮನ್ನು ವಿರೋಧಿಸುವವರ ಮೇಲೆ ತನಿಖಾ ಸಂಸ್ಥೆಗಳ ಮೂಲಕ ಪ್ರಕರಣ ದಾಖಲಿಸಿ ವಾಕ್ ಸ್ವಾತಂತ್ರ್ಯವನ್ನು ಕಸಿಯುವ ಹುನ್ನಾರ ಬಿಜೆಪಿಯಿಂದ ನಡೆದಿದೆ ಎಂದು ಕಾಂಗ್ರೆಸ್ ಮುಖಂಡ ಎಂ.ಆರ್. ಮಂಜುನಾಥ ಗೌಡ ತಿಳಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಆಡಳಿತದಲ್ಲಿ ಪೆಟ್ರೋಲ್, ಡಿಸೇಲ್, ಅಡುಗೆ ಎಣ್ಣೆ, ಬೇಳೆಕಾಳು ಮೊದಲಾದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿವೆ. ಈ ಬಗ್ಗೆ ಆಡಳಿತ ನಡೆಸುವವರಿಗೆ ಪರಿವೇ ಇಲ್ಲದಂತಾಗಿದೆ’ ಎಂದು ದೂರಿದರು.

‘ಕಳೆದ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಮಾಡಿಕೊಂಡರೂ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಾಗಿಲ್ಲ. ಈ ಕಾರಣ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವುದು ಸೂಕ್ತ ಎಂದು ನಾನು ತೀರ್ಮಾನಿಸಿ ಈಗಾಗಲೇ ಕಾಂಗ್ರೆಸ್‌ಗೆ ಸೇರಿದ್ದೇನೆ. ಮಧು ಬಂಗಾರಪ್ಪ ಅವರು ಕೂಡ ಅದೇ ರೀತಿಯ ತೀರ್ಮಾನಕ್ಕೆ ಬಂದಿರುವುರುವುದು ಸ್ವಾಗತಾರ್ಹ ನಡೆಯಾಗಿದೆ’ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್, ‘ಬಿಜೆಪಿಯ ಕುಟಿಲ ರಾಜಕಾರಣದ ನೀತಿಯಿಂದ ಬಹುತ್ವ, ಸಾಂವಿಧಾನಿಕ ಮೌಲ್ಯಗಳು ನಾಶವಾಗುತ್ತಿವೆ. ಎಲ್ಲ ಪ್ರಗತಿಪರ ಶಕ್ತಿಗಳು ಕಾಂಗ್ರೆಸ್ ನೇತೃತ್ವದಲ್ಲಿ ಈಗಿನ ಕೋಮುವಾದಿ, ಮನುವಾದಿ ಸರ್ಕಾರವನ್ನು ಕಿತ್ತೊಗೆಯಬೇಕಿದೆ. ಮಧು ಬಂಗಾರಪ್ಪ ಹಾಗೂ ಮತ್ತಿತರರ ಕಾಂಗ್ರೆಸ್ ಸೇರ್ಪಡೆ ಈ ಕೆಲಸಕ್ಕೆ ಸಹಕಾರಿಯಾಗಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕೆಪಿಸಿಸಿ ಕಾರ್ಯದರ್ಶಿ ಡಾ.ರಾಜನಂದಿನಿ ಕಾಗೋಡು, ‘ಮಧು ಬಂಗಾರಪ್ಪ ಅವರ ಸೇರ್ಪಡೆ ಕಾಂಗ್ರೆಸ್ ಬಲವನ್ನು ಹೆಚ್ಚಿಸಲಿದೆ. ಜಿಲ್ಲೆ ಹಾಗೂ ರಾಜ್ಯದಲ್ಲಿ ಪಕ್ಷದ ಸಂಘಟನೆಗೆ ಅವರ ಸೇರ್ಪಡೆ ನೆರವಾಗಲಿದೆ’ ಎಂದರು.

ಕಾಂಗ್ರೆಸ್‌ನ ಪ್ರಮುಖರಾದ ಐ.ಎನ್.ಸುರೇಶ್ ಬಾಬು, ತಶ್ರೀಫ್ ಇಬ್ರಾಹಿಂ, ಕೆ.ಎಸ್.ಪ್ರಶಾಂತ್, ಅಶೋಕ್ ಬೇಳೂರು, ಮಹಾಬಲ ಕೌತಿ, ಲೋಹಿತ್ ಶಿರವಾಳ ಇದ್ದರು.

ಅತ್ತೆ, ಸೊಸೆ ಹತ್ತಿರವಾಗಲು ಸ್ವಲ್ಪ ಸಮಯ ಬೇಕು
‘ನೀವು ಕಾಂಗ್ರೆಸ್ ಸೇರಿದರೂ ಮುಖಂಡ ಕಿಮ್ಮನೆ ರತ್ನಾಕರ್ ಅವರೊಂದಿಗಿನ ಮುನಿಸು ಬಗೆಹರಿದಿಲ್ಲವಲ್ಲ’ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಂಜುನಾಥ ಗೌಡ, ‘ತೀರ್ಥಹಳ್ಳಿಯಲ್ಲಿ ನಡೆದ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ನಾವಿಬ್ಬರೂ ಒಟ್ಟಾಗಿ ಕೆಲಸ ಮಾಡಿದ್ದರಿಂದಲೇ ಕಾಂಗ್ರೆಸ್‌ಗೆ ಬಹುಮತ ಸಾಧ್ಯವಾಯಿತು. ಏನೇ ಆದರೂ ಅತ್ತೆ ಸೊಸೆ ಹತ್ತಿರವಾಗಲು ಸ್ವಲ್ಪ ಸಮಯ ಬೇಕು. ಅತ್ತೆ ಪ್ರೀತಿಯಿಂದ ಮನೆಯ ಬೀಗದ ಕೀಯನ್ನು ಸೊಸೆಗೆ ನೀಡುವುದು ಅಥವಾ ಸೊಸೆಯೇ ಅತ್ತೆಯ ಕೈಯಿಂದ ಕೀ ಕಿತ್ತುಕೊಳ್ಳುವುದು ಹೀಗೆ ಎರಡರಲ್ಲಿ ಒಂದು ಘಟಿಸುತ್ತದೆ’ ಎಂದು ಮಾರ್ಮಿಕವಾಗಿ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT