ಸೋಮವಾರ, ಸೆಪ್ಟೆಂಬರ್ 20, 2021
21 °C
ಶಾಸಕ ಹಾಲಪ್ಪ ಹರತಾಳು ಹೇಳಿಕೆ

ಮಂತ್ರಿ ಸ್ಥಾನಕ್ಕೆ ನನ್ನ ಹೆಸರು ಹತ್ತಿರದಲ್ಲಿದೆ; ಎಚ್.ಹಾಲಪ್ಪ ಹರತಾಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಗರ: ‘ರಾಜ್ಯದ ನೂತನ ಸಚಿವ ಸಂಪುಟದಲ್ಲಿ ಮಂತ್ರಿಯಾಗಬೇಕು ಎಂಬ ಬಯಕೆ ಇದೆ. ಮಂತ್ರಿ ಸ್ಥಾನಕ್ಕೆ ನನ್ನ ಹೆಸರು ಹತ್ತಿರದಲ್ಲೇ ಇದೆ’ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ಆತ್ಮವಿಶ್ವಾಸದಿಂದ ಹೇಳಿದರು.

ಸಚಿವ ಸ್ಥಾನ ಸಿಗುವ ಕುರಿತು ಭಾನುವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಉಪ ಮುಖ್ಯಮಂತ್ರಿ ಸ್ಥಾನವನ್ನು ನಾನು ಕೇಳಿಲ್ಲ. ವಾಸ್ತವದಲ್ಲಿ ಇದು ಅಸಾಧ್ಯ ಎಂಬುದು ಗೊತ್ತಿದೆ. ಸಚಿವ ಸ್ಥಾನ ನೀಡಿದರೆ ಆ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲು ಸಿದ್ಧನಿದ್ದೇನೆ. ಹಾಗೆಂದು ಸ್ಥಾನ ನೀಡುವಂತೆ ಒತ್ತಡ ಹೇರುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ವಾರದೊಳಗೆ ಸಚಿವ ಸಂಪುಟ ರಚನೆಯಾಗಲಿದೆ. ದೆಹಲಿಗೆ ಹೋದಮಾತ್ರಕ್ಕೆ ಸಚಿವ ಸ್ಥಾನ ಸಿಗುತ್ತದೆ ಎನ್ನುವುದು ತಪ್ಪು ಕಲ್ಪನೆ. ಕೇವಲ ಕಾರ್ಯಕರ್ತರನ್ನು ಖುಷಿಪಡಿಸಲು ದೆಹಲಿಗೆ ಹೋಗಬಹುದಷ್ಟೇ. ರಾಜ್ಯದ ಬಿಜೆಪಿಯ ಕೆಲವು ಹಿರಿಯ ನಾಯಕರು ಸಚಿವ ಸ್ಥಾನ ನಿರಾಕರಿಸಿದರೆ ಹೊಸಬರಿಗೆ ಹೆಚ್ಚಿನ ಅವಕಾಶ ಸಿಗುತ್ತದೆ’ ಎಂದರು.

‘ಜಿಲ್ಲೆಯಲ್ಲಿ ಈಡಿಗ ಜನಾಂಗ ಪ್ರಬಲವಾದದ್ದು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಬಿಜೆಪಿಯಲ್ಲಿ ಕೇವಲ ಜಾತಿ ನೋಡಿ ಸ್ಥಾನ ಕೊಡುವ ಪರಿಪಾಠವಿಲ್ಲ. ಸೋಷಿಯಲ್ ಎಂಜಿನಿಯರಿಂಗ್ ಹಾಗೂ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ನೋಡಿದರೆ ನನಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ. ಪಕ್ಷದ ಮಾನದಂಡದಂತೆ ನನಗೂ ವಯಸ್ಸಾಗಿದೆ. ಮೂರು ಬಾರಿ ಶಾಸಕನಾಗಿರುವುದನ್ನು ಪರಿಗಣಿಸಿ ಸ್ಥಾನ ನೀಡುವ ಭರವಸೆ ಇದೆ’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.