ಭಾನುವಾರ, ಆಗಸ್ಟ್ 14, 2022
28 °C
ತಡೆಗೋಡೆ ಕಾಮಗಾರಿಗೆ ಭಾರಿ ಮಳೆ ಅಡ್ಡಿ l ಸಂಚಾರ ನಿರ್ಬಂಧಕ್ಕೆ ಜಿಲ್ಲಾಧಿಕಾರಿ ಆದೇಶ

ಕುಸಿತದ ಭೀತಿಯಲ್ಲಿ ನಾಗೋಡಿ ಘಾಟಿ ರಸ್ತೆ

ರವಿ ನಾಗರಕೊಡಿಗೆ Updated:

ಅಕ್ಷರ ಗಾತ್ರ : | |

Prajavani

ಹೊಸನಗರ: ತಾಲ್ಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 766 ‘ಸಿ’ ನಾಗೋಡಿ ಘಾಟಿ ಆರಂಭದಲ್ಲಿನ ಕಾಂಕ್ರೀಟ್ ರಸ್ತೆ ಕುಸಿತಕ್ಕೆ ಒಳಗಾಗುವ ಅಪಾಯದಲ್ಲಿದೆ.

ಪಕ್ಕದಲ್ಲಿನ ಕಾಂಕ್ರೀಟ್ ತಡೆಗೋಡೆಯ ದುರವಸ್ಥೆಯಿಂದಾಗಿ ಭಾರಿ ಪ್ರಮಾಣದ ಮಳೆ ನೀರು ಹರಿದು ಬಂದು, ಕಾಂಕ್ರೀಟ್ ರಸ್ತೆ ಕೊಚ್ಚಿ ಹೋಗುವ ಭೀತಿ ಇದೆ. ಅಲ್ಲದೆ ಘಾಟಿ ರಸ್ತೆ ಕುಸಿತದ ಭೀತಿಯಿಂದ ಜಿಲ್ಲಾಧಿಕಾರಿ ಈ ಭಾಗದ ಸಂಚಾರ ಬಂದ್ ಮಾಡಿ ಆದೇಶ ಹೊರಡಿಸಿದ್ದಾರೆ.

ಆರು ದಿನಗಳಿಂದ ಈ ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಈ ಮಳೆಯಿಂದಾಗಿ ರಸ್ತೆ ಪಕ್ಕದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಜೆಬಿಎನ್ ಮಾದರಿಯ ತಡೆಗೋಡೆ ಕಾಮಗಾರಿಗೆ ಹಿನ್ನಡೆಯಾಗಿದೆ. ಇದರಿಂದ ಈ ಪ್ರದೇಶದಲ್ಲಿ ಬಿದ್ದ ಮಳೆ ನೀರು ಸಮರ್ಪಕವಾಗಿ ಹರಿಯದೆ ರಸ್ತಗೆ ನುಗ್ಗುತ್ತಿದೆ. ಅಲ್ಲದೆ ಭಾರಿ ನಿರೀಕ್ಷಿತ ಜೆಬಿಎನ್ ಮಾದರಿ ತಡೆಗೋಡೆ ಕಾಮಗಾರಿಯು ಅರ್ಧಂಬರ್ಧ ಆಗಿದ್ದು, ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗಿದೆ.

ತಡೆಗೋಡೆ ತಂದ ದುರವಸ್ಥೆ: ಎರಡು ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿಯ ನಾಗೋಡಿ ಬಳಿ ರಸ್ತೆ ಕುಸಿತ ಕಂಡಿತ್ತು. ಈ ರಸ್ತೆ ಪಕ್ಕದಲ್ಲಿ ₹ 42 ಲಕ್ಷ ವೆಚ್ಚದಲ್ಲಿ ಒಂದು ತಡೆಗೋಡೆ ನಿರ್ಮಿಸಲಾಗಿತ್ತು. ಈ ತಡೆಗೋಡೆ ಕಳೆದ ಮಳೆಗಾಲದಲ್ಲಿ ಬಿದ್ದುಹೋಗಿತ್ತು. ಮಳೆಗಾಲದ ನೀರು ರಸ್ತೆ ತುಂಬಾ ಹರಿದು ಅವಾಂತರ ಸೃಷ್ಟಿಯಾಗಿತ್ತು. ಆಗ ಮಳೆಗಾಲ ಮುಗಿಯುವವರೆಗೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿತ್ತು. ರಸ್ತೆ ಪಕ್ಕದ ಗುಡ್ಡದ ಮಣ್ಣು ಜರಿದು ನೀರಿನ ಜತೆ ಸೇರಿ ಹರಿದುಬಂದು ರಸ್ತೆ ಹಾಳಾಗಲು ಕಾರಣವಾಗಿತ್ತು.

ಜೆಬಿಎನ್ ಮಾದರಿ ತಡೆಗೋಡೆ: ಅನುಭವಿ ತಜ್ಞರ ಅಭಿಪ್ರಾಯದಂತೆ ನೀರು ಸುಲಭದಲ್ಲಿ ಹರಿಯಲು ಅನುಕೂಲವಾಗುವಂತೆ ಯೋಜನೆ ರೂಪಿಸಿ ಜೆಬಿಎನ್ ಮಾದರಿಯಲ್ಲಿ ತಡೆಗೋಡೆ ನಿರ್ಮಿಸಲು ಉದ್ದೇಶಿಸಲಾಗಿತ್ತು. ಅದರಂತೆ ₹ 4.38 ಕೋಟಿ ವೆಚ್ಚದಲ್ಲಿ ಜೆಬಿಎನ್ ಮಾದರಿಯಲ್ಲಿ ವಾಲ್ ನಿರ್ಮಿಸಿ, ಅಲ್ಲಿನ ತಿರುವು ರಸ್ತೆಯನ್ನು ನೇರ ಮಾಡುವ ಕಾಮಗಾರಿಗೆ ಟೆಂಡರ್ ಕರೆದು ಏಪ್ರಿಲ್ ತಿಂಗಳಿನಲ್ಲಿ ಆದೇಶ ನೀಡಲಾಗಿತ್ತು.

ಕಾಮಗಾರಿ ಆರಂಭವಾಗಿ ಮೂರು ತಿಂಗಳು ಕಳೆದರೂ ಶೇ 30ರಷ್ಟು ಕೂಡ ಕೆಲಸ ನಡೆದಿಲ್ಲ. ನನೆಗುದಿಗೆ ಬಿದ್ದ ಕಾಮಗಾರಿಯಿಂದಾಗಿ ಮತ್ತೆ ರಸ್ತೆ ಕುಸಿತದ ಭೀತಿ ಎದುರಾಗಿದೆ. ಇದೀಗ ಮಳೆ ಸುರಿಯುತ್ತಿರುವುದರಿಂದ ಮಂದಗತಿಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಇಷ್ಟೆಲ್ಲ ಅವಾಂತರಕ್ಕೆ ಕಾರಣ ಎನ್ನಲಾಗಿದೆ.

ಜೆಬಿಎನ್ ಮಾದರಿಯ ತಡೆಗೋಡೆ 13 ಮೀಟರ್ ಎತ್ತರಕ್ಕೆ, ಸುಮಾರು 20 ಹಂತದಲ್ಲಿ ಮೇಲೇಳಬೇಕಾಗಿದೆ. ಆರಂಭಿಕ ಹಂತವು 3 ಮೀಟರ್ ಅಗಲವಿದ್ದು, ಅಂತಿಮ ಹಂತ ತಲುಪುವಾಗ 1 ಮೀಟರ್ ಅಗಲ ಆಗಬೇಕಾಗಿದೆ ಎಂದು ಯೋಜನೆಯ ರೂಪುರೇಷೆ ತಿಳಿಸುತ್ತದೆ. ಆದರೆ, ಮೂರು ತಿಂಗಳು ಕಳೆದರೂ ನೆಲಬಿಡದ ಕಾಮಗಾರಿ ಅಂತಿಮ ಹಂತಕ್ಕೆ ಬರಲು ಇನ್ನೆಷ್ಟು ವರ್ಷ ಕಳೆಯಬೇಕು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಮನವಿ: ‘ನಾಗೋಡಿ ಘಾಟಿ ರಸ್ತೆ ಆಗಾಗ ಕುಸಿತ ಕಾಣುತ್ತಿದೆ. ಇದಕ್ಕೆ ಶಾಶ್ವತ ಕಾಮಗಾರಿ ಅವಶ್ಯ. ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಹಳ್ಳ ಹಿಡಿದರೆ ನಷ್ಟ ನಮಗೆ ಆಗುತ್ತದೆ. ಮಳೆಗಾಲದಲ್ಲಿ ಘಾಟಿ ಸಂಚಾರ ಬಂದ್ ಆಗುವ ಸ್ಥಿತಿ ತಲುಪಿದ್ದು, ಇದಕ್ಕೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನೇರ ಹೊಣೆ ಹೊರಬೇಕಾಗಿದೆ. ಮಳೆಗಾಲ ಎಂದು ಕಾಯದೆ ಈ ಕಾಮಗಾರಿಯನ್ನು ಬೇಗನೆ ಮುಗಿಸಬೇಕಾಗಿದೆ’ ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ಬದಲಿ ಸಂಚಾರಕ್ಕೆ ಸೂಚನೆ
ಕೊಲ್ಲೂರು ಘಾಟಿ ನಾಗೋಡಿ ಬಳಿ ಕುಸಿತಕ್ಕೆ ಒಳಗಾಗುವ ಭೀತಿ ಇರುವುದರಿಂದ ಬದಲಿ ಮಾರ್ಗ ಅನುಸರಿಸಲು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.

ರಾಣೆಬೆನ್ನೂರು ಮಾರ್ಗದಿಂದ ಶಿಕಾರಿಪುರ, ಹೊಸನಗರ– ಬೈಂದೂರು ಮಾರ್ಗದ ಮೂಲಕ ಹೋಗುವ ವಾಹನಗಳು ಬದಲಿ ಮಾರ್ಗವಾಗಿ ಹೊಸನಗರ– ನಗರ– ಮಾಸ್ತಿಕಟ್ಟೆ– ಸಿದ್ದಾಪುರ ಮಾರ್ಗವಾಗಿ ಸಂಚರಿಸಬೇಕಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಭಿನ್ನ ಮಾದರಿ
ಜೆಬಿಎನ್ ಮಾದರಿಯ ತಡೆಗೋಡೆ ವಿಭಿನ್ನ ಮಾದರಿಯ ತಡೆಗೋಡೆಯಾಗಿದೆ. ಇಲ್ಲಿ ಸಿಮೆಂಟ್, ಮರಳು ಬಳಸದೆ ಕಾಮಗಾರಿ ನಡೆಸಲಾಗುತ್ತದೆ. ಕಬ್ಬಿಣದ ಸರಳು, ಮೆಸ್ ಒಳಗೆ ದೊಡ್ಡ ಗಾತ್ರದ ಸೈಜುಗಲ್ಲುಗಳನ್ನು ತುಂಬಿ ಹಂತ ಹಂತವಾಗಿ ನಿರ್ಮಿಸಲಾಗುತ್ತದೆ. ಇದರಿಂದ ಗುಡ್ಡದಿಂದ ಬಸಿಯುವ ನೀರು ಕಲ್ಲುಗಳ ಮಧ್ಯೆ ಬಸಿದು ಹೊರ ಹೋಗುತ್ತದೆ. ಮಳೆ ರಭಸಕ್ಕೆ ತಡೆಗೋಡೆ ಕುಸಿಯುವ ಭೀತಿ ಬರದು ಎಂಬುದು ತಜ್ಞರ ಅಭಿಪ್ರಾಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.