ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿ ಮಹಾನ್‌ ಸುಳ್ಳುಗಾರ: ಮಧು ಬಂಗಾರಪ್ಪ

ಮೋದಿಯ ಸುಳ್ಳಿನ ಪ್ರಣಾಳಿಕೆ ಜನತೆ ನಂಬುವುದಿಲ್ಲ, ಒಡೆದ ಮನೆಯಾಗಿರುವ ಬಿಜೆಪಿ
Published 14 ಏಪ್ರಿಲ್ 2024, 16:03 IST
Last Updated 14 ಏಪ್ರಿಲ್ 2024, 16:03 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಪ್ರಧಾನಿ ನರೇಂದ್ರ ಮೋದಿ ಒಬ್ಬ ಮಹಾನ್‌ ಸುಳ್ಳುಗಾರ ಮತ್ತು ದೊಡ್ಡ ನಟ. ಅವರು ಘೋಷಣೆ ಮಾಡಿರುವ ಸುಳ್ಳಿನ ಪ್ರಣಾಳಿಕೆಯನ್ನು ಜನತೆ ಎಂದಿಗೂ ನಂಬುವುದಿಲ್ಲ’  ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು. 

‘ದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಮೋದಿ ಹೆಸರು ಹೇಳಿದರೇ ಸಾಕು ಜನರಲ್ಲಿ ಜಿಗುಪ್ಸೆ ಉಂಟಾಗುತ್ತಿದೆ. ಶಿವಮೊಗ್ಗದಲ್ಲಿ ಕಾಂಗ್ರೆಸ್‌ ಪರವಾದ ಅಲೆ ಜೋರಾಗಿದೆ. ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಲೋಕಸಭೆ ಸ್ಥಾನಗಳನ್ನು ಗೆಲ್ಲಲಿದ್ದೇವೆ. ಮೋದಿಯ ಸುಳ್ಳಿನ ಕಂತೆಗೆ ಜನರು ಮೋಸ ಹೋಗುವುದಿಲ್ಲ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು. 

‘ರಾಜ್ಯದಲ್ಲಿ ಬಿಜೆಪಿ ಸಂಪೂರ್ಣ ಒಡೆದ ಮನೆ ಆಗಿದೆ. ಈಶ್ವರಪ್ಪ ಅವರು ತಮ್ಮ ಮಗನಿಗೆ ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ಬಂಡಾಯ ಸಾರುವ ಮೂಲಕ ರಗಳೆ ಮಾಡುತ್ತಿದ್ಧಾರೆ. ಬಿಜೆಪಿ ಮನೆಯ ಹೊಲಸು ನಾರುತ್ತಿದೆ. ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಬಿಜೆಪಿಯ ‘ಎ’ ಟೀಂ ಮತ್ತು ಈಶ್ವರಪ್ಪ ಅವರು ‘ಬಿ’ ಟೀಂ ಆಗಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ ಕುಮಾರ್‌ ಅವರು ಡಮ್ಮಿ ಅಲ್ಲ. ಬಲಿಷ್ಠವಾಗಿ ಇದ್ದಾರೆ. ಈಶ್ವರಪ್ಪ ಅವರು ತಿಳಿದು ಮಾತನಾಡಬೇಕು. ನಿಮ್ಮ ಬಗ್ಗೆ ಗೌರವವಿದೆ. ಅದನ್ನು ಉಳಿಸಿಕೊಳ್ಳಬೇಕು’ ಎಂದರು.

‘ಬಿಜೆಪಿಯಲ್ಲಿ ನಡೆಯುತ್ತಿರುವ ಕುಟುಂಬ ರಾಜಕಾರಣಕ್ಕೆ ಬಹಳಷ್ಟು ಜನ ರೋಸಿ ಹೋಗಿದ್ದಾರೆ. ಈಶ್ವರಪ್ಪ ಅವರಿಗೆ ಕಾಂಗ್ರೆಸ್‌ನವರು ಬೆಂಬಲಿಸುತ್ತಿಲ್ಲ. ಬೆಂಬಲ ನೀಡುತ್ತಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ. ಅವರ ಜತೆ ಇರುವ ಕಾಂಗ್ರೆಸ್ಸಿಗರ ಪಟ್ಟಿ ಕೊಡಲಿ’ ಎಂದು ಸವಾಲು ಹಾಕಿದರು. 

ಜೆಡಿಎಸ್‌ ಪಕ್ಷ ತನ್ನ ಸಿದ್ಧಾಂತ ಬದಿಗೊತ್ತಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದು ನಿಜಕ್ಕೂ ನಾಚಿಗೇಡಿನ ಸಂಗತಿ. ಜಾತ್ಯತೀತ ಪದವನ್ನು ಬಿಜೆಪಿಗೆ ಅಡವಿಟ್ಟಿದ್ದಾರೆ. ಇದಕ್ಕೆ ಮತದಾರರೇ ಎರಡೂ ಪಕ್ಷಗಳಿಗೆ ನಿರೀಕ್ಷೆಗೂ ಮೀರಿ ತಕ್ಕ ಪಾಠ ಕಲಿಸುವುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಿದರು. 

ವಿಮಾನ ನಿಲ್ದಾಣವೊಂದೇ ಸಂಸದ ಬಿ.ವೈ. ರಾಘವೇಂದ್ರ ಅವರ ಸಾಧನೆ. ಇದನ್ನು ಜನರ ದುಡ್ಡಿನಿಂದ ಕಟ್ಟಲಾಗಿದೆ ಎಂಬುದು ಅವರು ಮರೆತಂತೆ ಕಾಣುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಹಲವಾರು ಸಮಸ್ಯೆಗಳು ಇದ್ದವು. ಆದರೆ ಯಾವುದನ್ನೂ ಅವರು ಬಗೆಹರಿಸಲು ಪ್ರಯತ್ನ ಮಾಡಲಿಲ್ಲ ಎಂದು ಆರೋಪಿಸಿದರು.

1 ಲಕ್ಷ ಜನ ಸೇರುವ ನಿರೀಕ್ಷೆ: 

ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಅವರು ಏ. 15ರಂದು ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಮೆರವಣಿಗೆ ನಡೆಸಲಾಗುವುದು. ಮಹಾವೀರ ವೃತ್ತದಲ್ಲಿ ಹಲವು ನಾಯಕರು ಭಾಷಣ ಮಾಡಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬರುತ್ತಾರೆ. ಮುಂದಿನ ದಿನಗಳಲ್ಲಿ ಸುಮಾರು 20ರಿಂದ 25 ರೋಡ್ ಶೋ ಮಾಡಲಾಗುವುದು. ಶಿವಮೊಗ್ಗ ಸಿಟಿಯಲ್ಲಿ ವಾರ್ಡ್‌ ಮಟ್ಟದಿಂದ ಚುನಾವಣೆ ಪ್ರಚಾರ ನಡೆಸಲಾಗುವುದು. ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಅವರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಮಧು ಬಂಗಾರಪ್ಪ ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜಕುಮಾರ್‌, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ, ಜಿಲ್ಲಾ ಕಾಂಗ್ರೆಸ್ ಸಮಿತಿ ಘಟಕ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಕಲಗೋಡು ರತ್ನಾಕರ್‌, ಮಂಜುನಾಥ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT