ಗುರುವಾರ , ಡಿಸೆಂಬರ್ 1, 2022
20 °C
ಉತ್ಸವಕ್ಕೆ ಚಾಲನೆ ನೀಡಿದ ಸತ್ಯಾನಂದತೀರ್ಥ ಶ್ರೀಗಳು

ಚೌಡೇಶ್ವರಿ ದೇವಿಗೆ ನವರಾತ್ರಿ ವೈಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮರಿ: ‘ಸಮಾಜದ ವರ್ಗ ಸಂಘರ್ಷಗಳಿಗೆ ಅಂತ್ಯ ನೀಡಿದ ಜಗತ್ತಿನ ಶ್ರೇಷ್ಠ ಸಂತ ನಾರಾಯಣ ಗುರುಗಳನ್ನು ಕೇವಲ ರಾಜಕೀಯದ ಸರಕಾಗಿಸಬಾರದು. ಗುರುಗಳ ತತ್ವ ಸಂದೇಶಕ್ಕೆ ಪೆಟ್ಟು ಬಿದ್ದಾಗ ಒಗ್ಗಟ್ಟಾಗಿ ಪ್ರತಿರೋಧ ವ್ಯಕ್ತಪಡಿಸುವ ಅಗತ್ಯವಿದೆ’ ಎಂದು ಕೇರಳದ ಶಿವಗಿರಿ ಮಠದ ಸತ್ಯಾನಂದತೀರ್ಥ ಶ್ರೀಗಳು ಹೇಳಿದರು.

ತಾಲ್ಲೂಕಿನ ತುಮರಿ ಸಮೀಪದ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಸೋಮವಾರ ನವರಾತ್ರಿ ಉತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

‘ಸಮಾಜದಲ್ಲಿ ಏಕತೆ, ಸೇವಾ ಮನೋಭಾವ ಬಿತ್ತುವಲ್ಲಿ ಧಾರ್ಮಿಕ ಕ್ಷೇತ್ರಗಳ ಪಾತ್ರ ಮಹತ್ವದ್ದು. ನಾರಾಯಣ ಗುರುಗಳ ಜೀವನವೇ ಪ್ರಮುಖ ಸಂದೇಶ. ಅದನ್ನು ಪ್ರತಿಯೊಬ್ಬ ವ್ಯಕ್ತಿಯೂ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕಿದೆ. ಆಧುನಿಕತೆಯ ಆಡಂಬರಕ್ಕೆ ಒಳಗಾಗದೇ ಸಿಗಂದೂರು ಕ್ಷೇತ್ರ ಸದಾ ಪ್ರಕೃತಿಯ ಮಡಿಲಲ್ಲಿ ಮೆರುಗು ನೀಡುತ್ತಿರುವುದು ದೇವಿಯ ಮೂಲ ಶಕ್ತಿಯ ಭಾಗವೇ ಸರಿ’ ಎಂದು ಅಭಿಪ್ರಾಯಪಟ್ಟರು.

‘ನವರಾತ್ರಿ ಆಚರಣೆ ಸಮಾಜದಲ್ಲಿನ ನಕಾರಾತ್ಮಕ ಶಕ್ತಿಯನ್ನು ತೊಲಗಿಸಲು ಸಹಕಾರಿಯಾಗಿದೆ. ಸಮಾಜದಲ್ಲಿ ಸಾತ್ವಿಕ ಚಿಂತನೆಯ ಮೂಲಕ ನವ ಸಮಾಜ ನಿರ್ಮಾಣ ಸಾಧ್ಯ’ ಎಂದು ಸಿಗಂದೂರು ದೇವಸ್ಥಾನದ ಧರ್ಮಾಧಿಕಾರಿ ಡಾ.ಎಸ್.ರಾಮಪ್ಪ ತಿಳಿಸಿದರು.

ಶ್ರೀಗಳಿಗೆ ಅದ್ಧೂರಿ ಸ್ವಾಗತ: ನವರಾತ್ರಿ ಉತ್ಸವದ ಉದ್ಘಾಟನೆಗೆ ಬಂದ ಸತ್ಯಾನಂದತೀರ್ಥ ಶ್ರೀಗಳನ್ನು ಪೂರ್ಣ ಕುಂಭ ಕಳಶದ ಮೂಲಕ ಹಾಗೂ ಸ್ಥಳೀಯ ಅವ್ವರಸಿ ಚೆಂಡೆ ತಂಡದ ಮಂಗಳವಾದ್ಯದೊಂದಿಗೆ ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಸ್ವಾಗತಿಸಲಾಯಿತು.

ಗುರು ಪೂಜೆಯೊಂದಿಗೆ ಚೌಡೇಶ್ವರಿ ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳಲ್ಲಿ ಶ್ರೀಗಳು ಪಾಲ್ಗೊಂಡರು. ಬೆಳಿಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತ ಭಕ್ತರು ದೇವಿಯ ಮುಡಿ ಗಂಧ ಪ್ರಸಾದ ಸ್ವೀಕರಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು