ಸೊರಬ: ತಾಲ್ಲೂಕಿನ ತಾಳಗುಪ್ಪ ಗ್ರಾಮದಲ್ಲಿ ಸೋಮವಾರ ಅರಣ್ಯ ಇಲಾಖೆಯ ಅಧಿಕಾರಿಗಳು ಪೊಲೀಸ್ ಬಿಗಿ ಭದ್ರತೆಯಲ್ಲಿ ಕಾರ್ಯಾಚರಣೆ ನಡೆಸಿ ಬಗರ್‌ಹುಕುಂ ಸಾಗುವಳಿದಾರರ ವಿರೋಧದ ನಡುವೆಯೂ ಬಗರ್‌ಹುಕುಂ ಜಮೀನನ್ನು ತೆರವುಗೊಳಿಸಿದರು.
ತಾಳಗುಪ್ಪ ಗ್ರಾಮದ ಸರ್ವೆ ನಂ. 20ರಲ್ಲಿ ಹೈಕೋರ್ಟ್ ಆದೇಶದ ಮೇರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಜಮೀನಿನ ಸುತ್ತ ಟ್ರಂಚ್ ಹೊಡೆಯುವ ಮೂಲಕ ಜಮೀನನ್ನು ವಶಕ್ಕೆ ಪಡೆದರು.
ಅನಧಿಕೃತವಾಗಿ ಸಾಗುವಳಿ ಮಾಡುತ್ತಿದ್ದ ಆರು ಮಂದಿಯ ಪೈಕಿ ಇಬ್ಬರು ರೈತರು ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಗುರುವಾರಕ್ಕೆ ತೀರ್ಪುನ್ನು ಕಾಯ್ದಿರಿಸಲಾಗಿದೆ. ಉಳಿದ ನಾಲ್ಕು ರೈತರ ಸುಮಾರು 20 ಎಕರೆ ಜಮೀನಿನ ಸುತ್ತ ಟ್ರಂಚ್ ಹೊಡೆಯಲಾಯಿತು.
ರೈತರು ವಾಸವಾಗಿರುವ ಮನೆ ಅಥವಾ ಕೃಷಿಗೆ ಬಳಸುವ ಕೊಟ್ಡಿಗೆ ಇತರೆ ಗುಡಿಸಲುಗಳನ್ನು ಹೊರತುಪಡಿಸಿ ಜಮೀನು ತೆರವುಗೊಳಿಸು
ವಂತೆ ನ್ಯಾಯಾಲಯ ಆದೇಶಿಸಿದ್ದರಿಂದ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿದರು. ಇದೇ ವೇಳೆ ಸ್ಥಳಕ್ಕೆ ಬಂದ ಕಾಂಗ್ರೆಸ್ ಹಾಗೂ ನಮೋ ವೇದಿಕೆ ಮುಖಂಡರು, ರೈತರು ತೆರವು ಕಾರ್ಯಾಚರಣೆ ಕೈ ಬಿಡುವಂತೆ ಪಟ್ಟು ಹಿಡಿದರು.
‘ಅಕ್ರಮ ಸಾಗುವಳಿ ಮಾಡಿದ ಬಡ ರೈತರ ಹಿತ ಕಾಯುವಲ್ಲಿ ಮತ್ತು ಬಗರ್‌ಹುಕುಂ ಸಾಗುವಳಿ
ದಾರರಿಗೆ ರಕ್ಷಣೆ ನೀಡುವಲ್ಲಿ ಸ್ಥಳೀಯ ಶಾಸಕ ಕುಮಾರ್ ಬಂಗಾರಪ್ಪ ವಿಫಲರಾಗಿದ್ದಾರೆ. ರೈತರನ್ನು ಒಕ್ಕಲೆಬ್ಬಿಸಿ ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಲಾಗುತ್ತಿದೆ. ಮಧು ಬಂಗಾರಪ್ಪ ಅವರು ಶಾಸಕರಾಗಿದ್ದ ಅವಧಿಯಲ್ಲಿ ಬಗರ್‌ಹುಕುಂ ರೈತರಿಗೆ ರಕ್ಷಣೆ ನೀಡಿದ್ದರು. ಮುಂದಿನ ದಿನಗಳಲ್ಲಿ ವಿವಿಧ ಹಂತದ ಹೋರಾಟವನ್ನು ಪಕ್ಷಾತೀತವಾಗಿ ಹಮ್ಮಿಕೊಳ್ಳಲಾಗುವುದು’ ಎಂದು ಕಾಂಗ್ರೆಸ್ ಮುಖಂಡ ಎಚ್. ಗಣಪತಿ ಹುಲ್ತಿಕೊಪ್ಪ ಎಚ್ಚರಿಕೆ ನೀಡಿದರು.
‘ಬಗರ್‌ಹುಕುಂ ರೈತರನ್ನು
ಒಕ್ಕಲೆಬ್ಬಿಸುತ್ತಿರುವುದು ಖಂಡನೀಯ. ಈ ಹಿಂದೆಯೂ ಬಗರ್‌ಹುಕುಂ ಸಾಗುವಳಿದಾರರ ಭೂಮಿಯನ್ನು ವಶಕ್ಕೆ ಪಡೆಯಲಾಗಿತ್ತು. ಸುಮಾರು 45ರಿಂದ 50 ವರ್ಷಗಳ ಹಳೆಯ ಅಡಿಕೆ ಮರಗಳು ಧರೆಗೆ ಉರುಳುವ ಆತಂಕ ಎದುರಾಗಿದೆ. ಸರ್ಕಾರ ಮಧ್ಯೆ ಪ್ರವೇಶಿಸಿ ಬಡ ರೈತರಿಗೆ ನ್ಯಾಯ ಕೊಡಿಸಬೇಕು’ ಎಂದು ಸಾಗುವಳಿದಾರ ರೈತರು ಆಗ್ರಹಿಸಿದರು. ರೈತರ ಮನವಿಗೆ ಸ್ಪಂದಿಸದ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿದರು.
ಶಿವಮೊಗ್ಗ ಸಿಸಿಎಫ್ ಡಾ. ಕೆ.ಟಿ. ಹನುಮಂತಪ್ಪ ಮಾರ್ಗದರ್ಶನದಲ್ಲಿ ಸಾಗರ ವಿಭಾಗದ ಡಿಎಫ್‍ಒ ರಾಮಕೃಷ್ಣ, ಸೊರಬ ಎಸಿಎಫ್ ಪ್ರವೀಣ್ ಕುಮಾರ್ ಬಸ್ರೂರ್, ಹೊಸನಗರ ಎಸಿಎಫ್ ಕೆ.ಜಿ. ಪ್ರಕಾಶ್, ಸಾಗರ ಎಸಿಎಫ್ ಶ್ರೀಧರ್, ಆನವಟ್ಟಿ ವಲಯ ಅರಣ್ಯಾಧಿಕಾರಿ ಪ್ರಭುದೇವ ಪಾಟೀಲ್, ಜಾವಿದ್ ಬಾಷಾ ಅಂಗಡಿ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸಿಪಿಐ ಭಾಗ್ಯವತಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.