ಆಶಾ, ಅಂಗನವಾಡಿ ಮೂಲಕ ದುರ್ಬಲರಿಗೆ ನೆರವು:ಸಿಇಒ ವೈಶಾಲಿ ಸಲಹೆ

ಶಿವಮೊಗ್ಗ: ಶಿಕ್ಷಕಿಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರ ರೂಪಿಸಿದ ಕಾನೂನು, ಯೋಜನೆಗಳ ಮಾಹಿತಿಯನ್ನು ಮಹಿಳೆಯರು, ಮಕ್ಕಳು ಹಾಗೂ ದುರ್ಬಲ ವರ್ಗಗಳಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್. ವೈಶಾಲಿ ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಹಿಳಾ ಆಯೋಗ, ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಸೋಮವಾರ ಹಮ್ಮಿಕೊಂಡಿದ್ದ ಮಹಿಳಾ ಹಕ್ಕುಗಳು, ಕಾನೂನು ಅರಿವು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
‘ನಮ್ಮ ಸಂವಿಧಾನ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದೆ. ಮಹಿಳೆಯರು ಸಮಾನ ವೇತನ, ಹೆರಿಗೆ ರಜೆ, ಇತರೆ ಸೌಲಭ್ಯ ಸದುಪಯೋಗಪಡಿಸಿಕೊಂಡು ಎಲ್ಲ ಕ್ಷೇತ್ರಗಳಲ್ಲೂ ಮುಂದೆ ಬರುತ್ತಿದ್ದಾರೆ. ಮಹಿಳೆಯರು, ಮಕ್ಕಳು ಸೇರಿ ದುರ್ಬಲ ವರ್ಗಗಳಿಗಾಗಿ ರೂಪಿಸಿದ ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ತಲುಪಿಸಿದರೆ ಸಾರ್ಥಕವಾಗುತ್ತದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್. ಸರಸ್ವತಿ, ‘ಮಹಿಳೆಯರು, ಮಕ್ಕಳು ಮತ್ತು ದುರ್ಬಲ ವರ್ಗದ ರಕ್ಷಣೆಗಾಗಿ ಇರುವ ಕಾನೂನುಗಳ ಕುರಿತು ಸುಶಿಕ್ಷಿತರಿಗೂ ಪೂರ್ಣ ಅರಿವಿಲ್ಲ. ರಾಷ್ಟ್ರೀಯ ಮಹಿಳಾ ಆಯೋಗ, ಕಾನೂನು ಸೇವೆಗಳ ಪ್ರಾಧಿಕಾರ ಇಂತಹ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಸುಶಿಕ್ಷಿತರು ಸೂಕ್ತ ಮಾಹಿತಿ ಪಡೆದು ಹೆಣ್ಣುಮಕ್ಕಳು, ದುರ್ಬಲರಿಗೆ ತಲುಪಿಸುವ ಕೆಲಸ ಮಾಡಬೇಕು. ದೌರ್ಜನ್ಯಕ್ಕೆ ಒಳಗಾದವರಿಗೆ ಸ್ಪಂದಿಸಬೇಕು’ ಎಂದರು.
ಪ್ರತಿ ಹಳ್ಳಿಯ ಜನರಿಗೆ ಕಾನೂನು ಅರಿವು ಮೂಡಿಸುವುದು. ಮಹಿಳೆಯರು, ಮಕ್ಕಳು, ಹಿಂದುಳಿದವರು, ಪರಿಶಿಷ್ಟರು, ಆರ್ಥಿಕವಾಗಿ ಹಿಂದುಳಿದವರು ಮತ್ತು ಇತರರಿಗೆ ಉಚಿತ ಕಾನೂನು ನೆರವು ನೀಡಲಾಗುತ್ತಿದೆ. ಲೋಕ ಅದಾಲತ್, ಮಧ್ಯಸ್ಥಿಕೆ ಕೇಂದ್ರಗಳ ಮೂಲಕ ಉಚಿತ ಮತ್ತು ಶೀಘ್ರ ನ್ಯಾಯ ಒದಗಿಸುವ ಕೆಲಸ ಮಾಡಲಾಗುತ್ತಿದೆ. ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ವಿಲೇವಾರಿ ಮಾಡಿ ಶೀಘ್ರ ನ್ಯಾಯದಾನ ಮಾಡಲಾಗುತ್ತಿದೆ’ ಎಂದರು.
ಅಗತ್ಯವಿದ್ದವರು ಜಿಲ್ಲಾ ನ್ಯಾಯಾಲಯದ ಆವರಣದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಚೇರಿಗೆ ಭೇಟಿ ನೀಡಿ, ಉಚಿತ ಕಾನೂನು ನೆರವು ಮತ್ತು ಸೇವೆ ಪಡೆಯಬಹುದು ಎಂದು ಸಲಹೆ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ಎನ್. ದೇವೇಂದ್ರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಗಂಗೂಬಾಯಿ ಮಾತನಾಡಿದರು. ವಕೀಲರಾದ ಈ. ಪ್ರೇಮಾ ‘ಪ್ರಸ್ತುತ ಸಾಮಾಜಿಕ ಚೌಕಟ್ಟಿನಲ್ಲಿ ಲಿಂಗ ಸಮಾನತೆಯ ಅನ್ವೇಷಣೆ’ ಕುರಿತು, ಬಿ.ಎಸ್. ರೂಪಾರಾವ್ ‘ವೈವಾಹಿಕ ಸಮಸ್ಯೆಗಳ ನಿರ್ವಹಣೆ-ಕಾನೂನಾತ್ಮಕ ಪರಿಹಾರ’ ಕುರಿತು ಮಾಹಿತಿ
ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.