ಗುರುವಾರ , ಮೇ 26, 2022
30 °C

ಆಧುನಿಕ ಕೃಷಿಗೆ ತೆರೆದುಕೊಂಡ ಕಂಬಳಗೆರೆ ದಿನೇಶ್‌

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಮಲೆನಾಡಿನಲ್ಲಿ ಕಾಡುತ್ತಿರುವ ಕೃಷಿ ಕೂಲಿ ಕಾರ್ಮಿಕರ ಸಮಸ್ಯೆಗೆ ಪರಿಹಾರವಾಗಿ ಆಧುನಿಕ ಕೃಷಿ ತಂತ್ರಜ್ಞಾನ ಅಳವಡಿಸಿಕೊಂಡು ಸಮೃದ್ಧ ಬೆಳೆ ಕಂಡವರು ತೀರ್ಥಹಳ್ಳಿ ತಾಲ್ಲೂಕು ಕೋಣಂದೂರು ಸಮೀಪದ ಕಂಬಳಗೆರೆಯ ಜಿ.ಎಸ್‌. ದಿನೇಶ್‌.

ತಲೆಮಾರುಗಳಿಂದಲೂ ಕೃಷಿ ನಂಬಿ ಬದುಕು ಕಟ್ಟಿಕೊಂಡಿರುವ ಕುಟುಂಬದಲ್ಲಿ ಬೆಳೆದ ದಿನೇಶ್ ಅವರಿಗೂ ಬಾಲ್ಯದಿಂದಲೂ ಕೃಷಿ ಬಗ್ಗೆ ಅಪಾರ ಪ್ರೀತಿ. ಅರ್ಧದಲ್ಲೇ ಶಿಕ್ಷಣ ತೊರೆದು ಕೃಷಿ ಭೂಮಿಯಲ್ಲೇ ಪ್ರಯೋಗಕ್ಕೆ ಇಳಿದು ಯಶಸ್ಸು ಕಂಡಿದ್ದಾರೆ. ತಂದೆ ಶ್ರೀನಿವಾಸ ಗೌಡ, ಚಿಕ್ಕಪ್ಪ ಮಂಜಪ್ಪ ಗೌಡ ಸೇರಿ ಖರೀದಿಸಿದ 35 ಎಕರೆ ಕೃಷಿ ಭೂಮಿಯೇ ಅವರ ಕೃಷಿ ಪ್ರಯೋಗಶಾಲೆ. ಸಹೋದರ ರಾಜೇಂದ್ರ ಅವರ ಜತೆ ಸೇರಿ ಭತ್ತದ ಗದ್ದೆಯಾಗಿದ್ದ ಭೂಮಿಯಲ್ಲಿ ಹಲವು ವೈವಿಧ್ಯದ ಬೆಳೆ ತೆಗೆಯುತ್ತಿದ್ದಾರೆ. ಅಡಿಕೆ, ತೆಂಗು, ಕಾಳು ಮೆಣಸು, ಜಾಯಿಕಾಯಿ, ಲವಂಗ, ಕಾಫಿ, ಸಿಲ್ವರ್‌ ಮತ್ತಿತರ ವಾಣಿಜ್ಯ ಬೆಳೆಗಳನ್ನು ತೋಟದಲ್ಲಿ ಸಮೃದ್ಧವಾಗಿ ಬೆಳೆಯಲಾಗಿದೆ.

ತೋಟದ ಸುತ್ತ, ಒಳ ಭಾಗಗಳಲ್ಲೂ ಹಲವು ಸುವ್ಯವಸ್ಥಿತ ರಸ್ತೆಗಳನ್ನು ನಿರ್ಮಿಸಲಾಗಿದೆ. ಇದರಿಂದ ಟ್ರ್ಯಾಕ್ಟರ್‌, ಲಾರಿ ಸೇರಿ ಕೃಷಿ, ಸರಕು ಸಾಗಣೆ ವಾಹನಗಳು ಸರಾಗವಾಗಿ ಸಾಗಲು ಅನುಕೂಲವಾಗಿದೆ. ಕಾರ್ಮಿಕರನ್ನು ಮರ ಹತ್ತಿಸದೇ ದೋಟಿಗಳನ್ನು ಬಳಸಿ, ಅಡಿಕೆ ಗೊನೆ ಇಳಿಸಲಾಗುತ್ತಿದೆ. ಯಂತ್ರಗಳಿಂದ ಅಡಿಕೆ ಸುಲಿಯುವುದು, ಒಣಗಿಸುವ ಕೆಲಸ ನಡೆಯುತ್ತಿದೆ. ಏಕ ಕಾಲಕ್ಕೆ 8 ಕ್ವಿಂಟಲ್‌ ಅಡಿಕೆ ಬೇಯಿಸುವ ವ್ಯವಸ್ಥೆ ಇದೆ. ಪ್ರತಿ ಹಂತದಲ್ಲೂ ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡ ಕಾರಣ ಕೃಷಿ ಕಾರ್ಮಿಕರ ಮೇಲಿನ ಅಲವಲಂಬನೆ ಕಡಿಮೆಯಾಗಿದೆ.

ದಿನೇಶ್‌ ಅವರ ಈ ಕಾರ್ಯಕ್ಕೆ ಪತ್ನಿ ಪರಿಣಿತಾ, ಪುತ್ರಿ ಶಿವಂತಿ ಸಾಥ್‌ ನೀಡುತ್ತಿದ್ದಾರೆ. ಪುತ್ರ ವಿಶ್ವಜಿತ್‌ ಸ್ನಾತಕೋತ್ತರ ಪದವಿ ಪಡೆದಿದ್ದರೂ, ಉದ್ಯೋಗ ತೊರೆದು ಅಪ್ಪನ ಜತೆ ಕೃಷಿ ಚಟುವಟಿಕೆಯಲ್ಲೇ ತೊಡಗಿಸಿಕೊಂಡಿದ್ದಾರೆ. ಅವರ ಪತ್ನಿ ಪ್ರತೀಕ್ಷಾ ಮೆಕ್ಯಾನಿಕಲ್‌ ಎಂಜಿನಿಯರ್‌ ವೃತ್ತಿ ತೊರೆದು ಪತಿ, ಮಾವನ ಜತೆ ಕೃಷಿ ಜಮೀನಿನಲ್ಲೇ ನೆಲೆಸಿದ್ದಾರೆ.

‘ತಲೆ ಮಾರುಗಳಿಂದಲೂ ನಮ್ಮದು ಕೃಷಿ ಕುಟುಂಬ. ಹಾಗಾಗಿ, ಕೃಷಿ ಎಂದರೆ ತುಂಬಾ ಇಷ್ಟವಾದ ಕ್ಷೇತ್ರ. ಅದರಲ್ಲೇ ಪ್ರಯೋಗ ಮಾಡುತ್ತಾ ಬದುಕನ್ನೂ ಗಟ್ಟಿ ಮಾಡಿಕೊಂಡಿದ್ದೇವೆ. ಮಗನಲ್ಲೂ ಅದೇ ಪ್ರೀತಿ ಬೆಳೆದಿದೆ. ಬರಡಾಗಿದ್ದ ಭೂಮಿಯನ್ನು ಸಮೃದ್ಧಗೊಳಿಸುವಲ್ಲಿ ಕುಟುಂಬದ ಎಲ್ಲರ ಸಹಕಾರ, ಶ್ರಮವಿದೆ’ ಎಂದು ಸ್ಮರಿಸುತ್ತಾರೆ ದಿನೇಶ್.

ಶೂನ್ಯ ಬೇಸಾಯ; ಕಳೆನಾಶಕ

ದಿನೇಶ್ ‌ಅವರ ವಿಶಾಲ ತೋಟದಲ್ಲಿ ಗಮನ ಸೆಳೆಯುವುದು ಶೂನ್ಯ ಬೇಸಾಯ ಪದ್ಧತಿ ಹಾಗೂ ಕಳೆನಾಶಕ ಬಳಕೆ ಮಾಡದೇ ನಿರ್ವಹಣೆ ಮಾಡಿರುವುದು.

ಹುಲ್ಲು ಕತ್ತರಿಸುವ ಯಂತ್ರ ಬಳಸಿ ತೋಟದ ಕಳೆ ತೆಗೆಯಲಾಗುತ್ತಿದೆ. ತೋಟದ ಪ್ರತಿ ಎರಡು ಸಾಲಿಗೆ ಒಂದರಂತೆ ಬಸಿಕಾಲುವೆ ನಿರ್ಮಿಸಲಾಗಿದೆ. ಬಹುತೇಕ ಕಾಲುವೆಗಳಿಗೆ ಕಲ್ಲು ಕಟ್ಟಲಾಗಿದೆ. ಪ್ರತಿ ಗಿಡಕ್ಕೂ ಬಿಡುವ ತುಂತುರು ನೀರಾವರಿಯ ನೀರು ಹರಿದು ಒಂದೇ ಬಾವಿಗೆ ಸೇರುವುದು. ನಂತರ ಆ ನೀರು ಮರುಬಳಕೆ ಮಾಡುವುದು ವಿಶೇಷ.

ಕೋಟ್‌...

ನವಿಲು, ಏಡಿ, ಮಂಗಗಳು, ಕಾಡುಕೋಣ, ಕಾಡು ಹಂದಿ ಸೇರಿ ಕಾಡು ಪ್ರಾಣಿಗಳ ಹಾವಳಿ ಮಧ್ಯೆ ಬೆಳೆ ಸಂರಕ್ಷಣೆ ಮಾಡಿಕೊಳ್ಳುವುದೇ ದೊಡ್ಡ ಸವಾಲು. ಇಲ್ಲದಿದ್ದರೆ ಇನ್ನಷ್ಟು ವೈವಿಧ್ಯಮಯ ಬೆಳೆ, ಹಣ್ಣುಹಂಪಲಿನ ಸಸ್ಯಸಂಪತ್ತು ಬೆಳೆಸುತ್ತಿದ್ದೆವು.
ಜಿ.ಎಸ್‌. ದಿನೇಶ್, ಕೃಷಿಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.