ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವವೈವಿಧ್ಯ ಉಳಿಸಲು ಸ್ಥಳೀಯ ಸಂಸ್ಥೆ ಜನಪ್ರತಿನಿಧಿಗಳ ಪಾತ್ರ ಮಹತ್ವದ್ದು: ಶಾಸಕ

Last Updated 14 ಮೇ 2022, 2:22 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಸಾಗರ: ಜೀವವೈವಿಧ್ಯ ಒಳಗೊಂಡಂತೆ ಪರಿಸರವನ್ನು ಉಳಿಸುವಲ್ಲಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಜವಾಬ್ದಾರಿ ಮಹತ್ವದ್ದಾಗಿದೆ ಎಂದು ಶಾಸಕ ಎಚ್. ಹಾಲಪ್ಪ ಹರತಾಳು ಹೇಳಿದರು.

ಇಲ್ಲಿನ ಗಾಂಧಿ ಮೈದಾನದಲ್ಲಿ ತಾಲ್ಲೂಕು ಜೀವವೈವಿಧ್ಯ ನಿರ್ವಹಣಾ ಸಮಿತಿ, ರಾಜ್ಯ ಜೀವವೈವಿಧ್ಯ ಮಂಡಳಿಯು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳಿಗೆ ಶುಕ್ರವಾರ ಏರ್ಪಡಿಸಿದ್ದ ಜೀವವೈವಿಧ್ಯ ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜೀವವೈವಿಧ್ಯಗಳನ್ನು ಗುರುತಿಸಿ ದಾಖಲಿಸುವುದು ಸುಲಭದ ಕೆಲಸವಲ್ಲ. ಇದಕ್ಕಾಗಿ ವಿಶೇಷವಾದ ಸ್ಥಳೀಯ ಜ್ಞಾನ, ಅನುಭವ, ತಾಳ್ಮೆ ಇರಬೇಕಾಗುತ್ತದೆ. ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿಗೆ ಈ ವಿಷಯದಲ್ಲಿ ಪರಿಣಿತಿ ಇದ್ದರೆ ದಾಖಲಾತಿ ಕಾರ್ಯ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಹೇಳಿದರು.

ಪಶ್ಚಿಮಘಟ್ಟ ಕಾರ್ಯಪಡೆ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ‘ಪಶ್ಚಿಮಘಟ್ಟ ಪ್ರದೇಶದಲ್ಲಿ ಜೀವವೈವಿಧ್ಯ ತಾಣಗಳನ್ನು ಗುರುತಿಸಿ ರಕ್ಷಿಸಲು ಪ್ರತಿ ಪಂಚಾಯಿತಿ ಮಟ್ಟದಲ್ಲಿ ಜೀವವೈವಿಧ್ಯ ನಿರ್ವಹಣಾ ಸಮಿತಿ ರಚನೆಯಾಗಬೇಕು. ಈ ಸಮಿತಿಗಳು ಕ್ರಿಯಾಶೀಲವಾಗಿರಬೇಕು’ ಎಂದು ಅಭಿಪ್ರಾಯಪಟ್ಟರು.

ಪರಿಸರದ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಕೆ.ಸಿ. ಕನ್ನಪ್ಪ ಹುಣಸೂರು, ಅಶೋಕ ಸೂರೆಮನೆ, ಎಂ.ಜಿ. ರಾಮಚಂದ್ರ ಮರಡುಮನೆ, ಗಿರೀಶ್ ಹಕ್ರೆ, ಸುಬ್ರಮಣ್ಯ ನೀಚಡಿ ಅವರನ್ನು ಸನ್ಮಾನಿಸಲಾಯಿತು.

ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಮಲ್ಲಿಕಾರ್ಜುನ ಟಿ. ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ. ಮಹೇಶ್, ಡಾ.ಪ್ರಕಾಶ್ ಮೇಸ್ತ, ಬಿ.ಎಚ್. ರಾಘವೇಂದ್ರ, ಶ್ರೀಪಾದ ಬಿಚ್ಚುಗತ್ತಿ, ಕವಲಕೋಡು ವೆಂಕಟೇಶ್ ಹಾಜರಿದ್ದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪುಷ್ಪಾ ಕಮ್ಮಾರ್ ಸ್ವಾಗತಿಸಿದರು. ವಿ.ಟಿ. ಸ್ವಾಮಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT