ಭಾನುವಾರ, ಸೆಪ್ಟೆಂಬರ್ 19, 2021
30 °C
ಪತ್ರಿಕಾ ವಿತರಕರ ದಿನಾಚರಣೆಯಲ್ಲಿ ಪ್ರೆಸ್‌ಟ್ರಸ್ಟ್‌ ಅಧ್ಯಕ್ಷ ಎನ್‌.ಮಂಜುನಾಥ್

ಶಿವಮೊಗ್ಗ: ಪತ್ರಿಕಾ ವಿತರಣೆಗೂ ಸಂಕಷ್ಟ ತಂದ ಕೊರೊನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಕೊರೊನಾ ಸಂಕಷ್ಟಗಳು ಪತ್ರಿಕಾ ವಿತರಣೆಯ ಜಾಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿವೆ. ಪತ್ರಿಕಾ ವಿತರಣೆಗೆ ಬರುವ ವಿದ್ಯಾರ್ಥಿಗಳ ಸಂಖ್ಯೆಯೂ ಕ್ಷೀಣಿಸುತ್ತಿದೆ ಎಂದು ಪ್ರೆಸ್‌ ಟ್ರಸ್ಟ್‌ ಅಧ್ಯಕ್ಷ ಎನ್‌.ಮಂಜುನಾಥ್ ಕಳವಳ ವ್ಯಕ್ತಪಡಿಸಿದರು.

ಶಿವಮೊಗ್ಗ ಪ್ರೆಸ್‌ಟ್ರಸ್ಟ್‌ ಸಭಾಂಗಣದಲ್ಲಿ ಭಾನುವಾರ ದಿನಪತ್ರಿಕೆ ಉಪ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ದಿನಪತ್ರಿಕೆ ವಿತರಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೊರೊನಾ ಸಂಕಷ್ಟದ ಜತೆಗೆ ದೃಶ್ಯ ಮಾಧ್ಯಮ, ವೆಬ್ ಮೀಡಿಯಾ, ಸಾಮಾಜಿಕ ಜಾಲತಾಣಗಳ ಆರ್ಭಟ ಸೇರಿ ಹಲವು ಸವಾಲುಗಳ ಮಧ್ಯೆ ಮುದ್ರಣ ಮಾಧ್ಯಮ ಮೇರು ಸ್ಥಾನದಲ್ಲೇ ಇದೆ ಎನ್ನುವುದು ಸಮಾಧಾನದ ಸಂಗತಿ. ಬಹುತೇಕರು ಜೀವನ ನಿರ್ವಹಣೆಗಾಗಿ ಅರೆಕಾಲಿಕವಾದ ಪತ್ರಿಕೆ ಹಂಚುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರೂ, ಆ ಕಾಯಕ ಆರೋಗ್ಯಕ್ಕೂ ಸಹಕಾರಿಯಾಗಿದೆ. ಪ್ರತಿ ದಿನ ಬೇಗನೆ ಏಳುವುದು, ಸೈಕಲ್‌ ತುಳಿಯುವುದು ಆರೋಗ್ಯ ನಿರ್ವಹಣೆಗೂ ಸಹಕಾರಿಯಾಗಿದೆ ಎಂದು ವಿಶ್ಲೇಷಿಸಿದರು.

ಒಂದು ಕಾಲದಲ್ಲಿ ಪತ್ರಿಕಾ ವಿತರಣೆಗೂ ಪೈಪೋಟಿ ಇತ್ತು. ಹಲವರು ಪ್ರದೇಶವಾರು ಪತ್ರಿಕೆ ವಿತರಣೆಯ ಪ್ರಭುತ್ವ ಸಾಧಿಸುತ್ತಿದ್ದರು. ಬದಲಾದ ಕಾಲಘಟ್ಟದಲ್ಲಿ ಪತ್ರಿಕಾ ವಿತರಣೆ ಕಷ್ಟಕರ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.

ಪತ್ರಿಕಾ ವಿತರಕರು ಸಂಘಟಿತರಾಗದ ಹೊರತು ಸೌಲಭ್ಯ ಪಡೆಯಲು ಸಾಧ್ಯವಿಲ್ಲ. ಸರ್ಕಾರ ಪತ್ರಿಕಾ ವಿತರಕರನ್ನು ಅಸಂಘಟಿತ ಕಾರ್ಮಿಕರು ಎಂದು ಘೋಷಿಸಿರುವುದು ಸಮಾಧಾನದ ಸಂಗತಿ ಎಂದರು.

ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ಎನ್.ಡಿ.ಶಾಂತಕುಮಾರ್ ಮಾತನಾಡಿ, ‘ಭಾರತದ ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರು ಪತ್ರಿಕೆ ಹಂಚುವ ಕೆಲಸ ಮಾಡುತ್ತಲೇ ದೇಶದ ಉನ್ನತ ಸ್ಥಾನಕ್ಕೆ ಏರಿದವರು. ಪತ್ರಿಕೆ ವಿತರಣೆ ವೃತ್ತಿ ಕೀಳಾಗಿ ಕಾಣುವ ಮನೋಸ್ಥಿತಿ ಇಂದು ಕಾಣುತ್ತಿದ್ದೇವೆ. ಅಂತಹ ಕೀಳರಿಮೆ ತೊರೆಯಬೇಕು’ ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಮುಖ್ತಾರ್ ಅಹಮ್ಮದ್, ‘ಅಸಂಘಟಿತ ವಲಯಕ್ಕೆ ಸೇರಿಸುವ ಸರ್ಕಾರದ ನಿರ್ಧಾರ ಘೋಷಣೆಗೆ ಸೀಮಿತವಾಗಬಾರದು. ಕಾರ್ಯರೂಪಕ್ಕೆ ಬರಬೇಕು’ ಎಂದು ವಿನಂತಿಸಿದರು.

ಕೊರೊನಾ ಸಮಯದಲ್ಲಿನ ಅಪಪ್ರಚಾರ ಪತ್ರಿಕಾ ವಿತರಣೆ ಕಡಿಮೆಯಾಗಲು ಕಾರಣವಾಯಿತು. ಓದುಗರ ಸಂಖ್ಯೆ ಕ್ಷೀಣಿಸಿತು. ನಂತರ ಎಲ್ಲ ಮಾಧ್ಯಮಗಳು ಪತ್ರಿಕೆಗಳಿಂದ ಕೊರೊನಾ ಹರಡುವುದಿಲ್ಲ ಎಂದು ತಿಳಿವಳಿಕೆ ವರದಿ ಪ್ರಚಾರ ಮಾಡಿದ ಮೇಲೆ ಮತ್ತೆ ಜನರು ಪತ್ರಿಕೆ ಓದಲು ಆರಂಭಿಸಿದ್ದಾರೆ ಎಂದು ಹೇಳಿದರು.

‘ಪ್ರಜಾವಾಣಿ’ ಹಿರಿಯ ವರದಿಗಾರ ಚಂದ್ರಹಾಸ ಹಿರೇಮಳಲಿ, ವಿಜಯ ಕರ್ನಾಟಕ ಪ್ರಸರಣ ವಿಭಾಗದ ವ್ಯವಸ್ಥಾಪಕ ಕೆ.ಎಸ್.ಸತೀಶ್ ಉಪಸ್ಥಿತರಿ ದ್ದರು. ಮಂಜುನಾಥ್ ಸ್ವಾಗತಿಸಿದರು. ಸತೀಶ್‌ ನಿರೂಪಣೆ ಮಾಡಿದರು. ಧನಂಜಯ್ ವಂದಿಸಿದರು.

ದಿನಪತ್ರಿಕೆ ವಿತರಕರಾದ ಜಯರಾಮ್, ಕೆ.ಸೀತಾರಾಮ್, ಎಸ್‌.ಪರಮೇಶ್ವರಪ್ಪ, ಬಿ.ಮಂಜುನಾಥ್‌, ನಾಗರಾಜ್ ನಾಯ್ಕ್, ರಾಮಚಂದ್ರ, ‘ಪ್ರಜಾವಾಣಿ’ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್‌ ಅವರನ್ನು ಸನ್ಮಾನಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.