ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಧಾನಸಭೆ, ಲೋಕಸಭೆಗೆ ಒಂದೇ ಬಾರಿ ಚುನಾವಣೆ ಅಗತ್ಯ’-ಚಕ್ರವರ್ತಿ ಸೂಲಿಬೆಲೆ

Last Updated 28 ಮಾರ್ಚ್ 2021, 4:45 IST
ಅಕ್ಷರ ಗಾತ್ರ

ಶಿವಮೊಗ್ಗ: ಆರ್ಥಿಕ ವೆಚ್ಚ, ಸಮಯದ ಉಳಿತಾಯ, ಅಭಿವೃದ್ಧಿ ಕಾರ್ಯಗಳ ದೃಷ್ಟಿಯಿಂದ ದೇಶದ ಲೋಕಸಭೆ ಹಾಗೂ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಒಟ್ಟಿಗೆ ನಡೆಯುವ ವ್ಯವಸ್ಥೆ ರೂಪುಗೊಳ್ಳಬೇಕಿದೆ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ನಗರದ ನೆಹರೂ ಕ್ರೀಡಾಂಗಣದಲ್ಲಿ ನರೇಂದ್ರ ಮೋದಿ ವಿಚಾರ ಮಂಚ್‌ ‘ಒಂದು ದೇಶ, ಒಂದು ಚುನಾವಣೆ’ ಕುರಿತು ಶನಿವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂವಿಧಾನ ಶಾಸಕ, ಸಂಸದರಿಗೆ ಐದು ವರ್ಷ ಅವಧಿ‌ ನಿಗದಿ ಮಾಡಿದೆ. 1952ರಿಂದ 1962ರವರೆಗೆ ಇಡೀ ದೇಶಕ್ಕೆ ಒಮ್ಮೆಗೇ ಚುನಾವಣೆ ನಡೆಯುತ್ತಿತ್ತು. ನಂತರ ಸಂವಿಧಾನದತ್ತ ಅಧಿಕಾರ ದುರುಪಯೋಗಪಡಿಸಿಕೊಂಡ ಅಂದಿನ ಕೇಂದ್ರ ಸರ್ಕಾರಗಳು ತಮಗಾಗದ ರಾಜ್ಯಗಳ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರಲು ಆರಂಭಿಸಿದವು. ಇದರಿಂದ ಒಂದು ದೇಶ ಒಂದು ಚುನಾವಣಾ ವ್ಯವಸ್ಥೆ ಮರಿದುಬಿತ್ತು. ಈಗ ಚರ್ಚೆಗೂ ಕಾಂಗ್ರೆಸ್‌ ಸಿದ್ಧವಿಲ್ಲ. ಕೇಂದ್ರದಲ್ಲಿನ ಒಬ್ಬರ ಮುಖ ನೋಡಿಕೊಂಡು ರಾಜ್ಯದಲ್ಲೂ ಮತ ಹಾಕಿಬಿಟ್ಟಾರು ಎಂದು‌ ಆತಂಕ ಅವರಿಗಿರಬಹುದು ಎಂದು ದೂರಿದರು.

‘ಸುಳ್ಳು ಹೇಳುವುದು ಕೆಲವರಿಗೆ ಅಭ್ಯಾಸವಾಗಿದೆ. ರೈತ ಕಾಯ್ದೆ, ಎಂಎಸ್‌ಪಿ, ಎಪಿಎಂಸಿ ಕುರಿತು ಚರ್ಚೆಗೆ ಅವಕಾಶವನ್ನೇ ನೀಡುತ್ತಿಲ್ಲ. ವಾಪಸ್ ತೆಗೆಸುವ‌ ಮೂಲಕ ಮೋದಿ ಸೋಲಿಸಲು ಕುತಂತ್ರ ನಡೆಸಿದ್ದಾರೆ. ಹಿಂದೆ ಬಾಬರಿ ಮಸೀದಿ ಕೆಳಗೆ ಮಂದಿರವೇ ಇರಲಿಲ್ಲ ಎಂದರು. ಈಗ‌ ದುಡ್‌ ಯಾಕೆ‌ ಕಲೆಕ್ಟ್ ಮಾಡ್ತೀರಾ ಅಂತಾರೆ’ ಎಂದು ಕುಟುಕಿದರು.

‘ತ್ರಿವಳಿ ತಲಾಖ್‌, ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಸೇರಿ ಹಲವು ವಿಚಾರಗಳ ಕುರಿತು ನಿರಂತರ ಚರ್ಚೆ ನಡೆಸಿದ ಬಳಿಕ ನಿರ್ಧಾರ ತೆಗೆದುಕೊಳ್ಳಲಾಯಿತು. ಶ್ರೇಷ್ಠ ಸಂವಿಧಾನ, ಪ್ರಜಾಪ್ರಭುತ್ವದ ರಕ್ಷಕ ಮೋದಿ’ ಎಂದು ಬಣ್ಣಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ‘ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡದೇ ಸಮಯ ವ್ಯರ್ಥ ಮಾಡಿದ್ದು ನಾಚಿಕೆಗೇಡಿನ ಸಂಗತಿ. ಕೆಲವರಿಗೆ ದೇಶ ಒಂದು ತುಂಡು. ನಮಗೆ ಅದು ಒಂದು ದೇಶ. ಪ್ರತಿ ವರ್ಷವೂ ಚುನಾವಣೆ ನಡೆಯುತ್ತಿದ್ದರೆ. ಆರ್ಥಿಕ‌ ನಷ್ಟವಾಗುತ್ತದೆ. ಸರ್ಕಾರಗಳು ಸ್ಥಿರತೆ ಕಾಣುವುದಿಲ್ಲ. ರಾಜ್ಯದಲ್ಲಿ ಈಚೆಗೆ 17 ಶಾಸಕರು ರಾಜೀನಾಮೆ ನೀಡುವ ಮೂಲಕ ಸರ್ಕಾರ ಬೀಳಿಸಿದರು. ಇಂತಹ ಪ್ರವೃತ್ತಿಗೆ ಕಡಿವಾಣ ಹಾಕಲು ಒಂದು ದೇಶ ಒಂದು ಚುನಾವಣಾ ವ್ಯವಸ್ಥೆ ಅಗತ್ಯ’ ಎಂದರು.

ವಿಧಾನಪರಿಷತ್ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ, ‘ಎಲ್ಲದಕ್ಕೂ ಪ್ರಧಾನಿ ಮೋದಿ ಅವರನ್ನು ಟೀಕಿಸುವ ಪರಿಪಾಠ ಆರಂಭವಾಗಿದೆ. ಅವರು ಬಾಂಗ್ಲಾಕ್ಕೆ ಹೋದರೂ ಟೀಕಿಸುತ್ತಾರೆ. ಡಾ.ಸ್ವಾಮಿನಾಥನ್ ವರದಿ ಆಧಾರದ ಮೇಲೆ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದರೂ ರೈತರು ವಿರೋಧಿಸುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ನರೇಂದ್ರ ಮೋದಿ ವಿಚಾರ ಮಂಚ್‌ನ ಜಿಲ್ಲಾ ಘಟಕದ ಅಧ್ಯಕ್ಷ ಹರಿಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ನರೇಂದ್ರ ಮೋದಿ ವಿಚಾರ ಮಂಚ್‌ನ ರವಿ ಚಾಣಕ್ಯ, ನಟೇಶ್, ಬಳ್ಳೇಕೆರೆ ಸಂತೋಷ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT