ಸೋಮವಾರ, ಜೂನ್ 27, 2022
26 °C
ಅರಣ್ಯ ಇಲಾಖೆಯ ಏಕಪಕ್ಷೀಯ ಅಧಿಸೂಚನೆಗೆ ಸ್ಥಳೀಯರ ತಕರಾರು

ಕುವೆಂಪು ಜೈವಿಕ ಅರಣ್ಯ ವಿಸ್ತರಣೆಗೆ ವಿರೋಧ

ಶಿವಾನಂದ ಕರ್ಕಿ Updated:

ಅಕ್ಷರ ಗಾತ್ರ : | |

Prajavani

ತೀರ್ಥಹಳ್ಳಿ: ಕುವೆಂಪು ಜೈವಿಕ ಅರಣ್ಯ ಪ್ರದೇಶವನ್ನು ವಿಸ್ತರಿಸುವ ಉದ್ದೇಶದಿಂದ ತಾಲ್ಲೂಕಿನ ಮುತ್ತೂರು ಹೋಬಳಿ ವ್ಯಾಪ್ತಿಯ 2 ಗ್ರಾಮದ 342 ಎಕರೆ 8 ಗುಂಟೆ ಸರ್ಕಾರದ ಕಂದಾಯ ಭೂಮಿಯನ್ನು ಮೀಸಲು ಅರಣ್ಯವಾಗಿಸುವ ಸರ್ಕಾರದ ಕ್ರಮವನ್ನು ಸ್ಥಳೀಯರು ಖಂಡಿಸಿದ್ದಾರೆ.

ಮೀಸಲು ಅರಣ್ಯವಾಗಿಸುವ ಅಧಿಸೂಚನೆಯನ್ನು ರದ್ದುಪಡಿಸಿ ಮೀಸಲು ಅರಣ್ಯವನ್ನು ಹಿಂದೆ ಪಡೆಯುವಂತೆ ಸಾರ್ವಜನಿಕರು, ಸ್ಥಳೀಯರು, ಜನಪ್ರತಿನಿಧಿಗಳು ಶೇಡ್ಗಾರಿನಲ್ಲಿ ಸಭೆ ನಡೆಸಿ ಒತ್ತಾಯಿಸಿದ್ದಾರೆ. ಈ ನಡುವೆ ಸರ್ಕಾರ ಜನರ ಬೇಡಿಕೆಗೆ ಮನ್ನಣೆ ನೀಡದೆ ಮೀಸಲು ಅರಣ್ಯವಾಗಿಸುವ ಹಠಮಾರಿ ಧೋರಣೆ ಮುಂದುವರಿಸಿರುವುದು ನೂರಾರು ವರ್ಷಗಳಿಂದ ನೆಲೆ ಕಂಡುಕೊಂಡವರ ಬದುಕು ಕಿತ್ತುಕೊಂಡಂತಾಗುತ್ತದೆ ಎಂದು ಗ್ರಾಮದ ಹಿರಿಯರಾದ ಮಂಜಪ್ಪ ಅಳಲು ತೋಡಿಕೊಳ್ಳುತ್ತಾರೆ.

ಸರ್ಕಾರದ ಮೀಸಲು ಅರಣ್ಯ ನಿರ್ಧಾರ ಶೇಡ್ಗಾರು, ಮಾವಿನಕೊಪ್ಪ, ತುಂಬ್ರಮನೆ, ಕೊಳಗಿ ಗ್ರಾಮಗಳ ಜನರ ನೆಮ್ಮದಿ ಹಾಳುಮಾಡಿದೆ. ಈ ಪ್ರದೇಶದಲ್ಲಿ ಬಗರ್‌ಹುಕುಂ ಸಾಗುವಳಿ ಮಾಡಿಕೊಂಡು, ಮನೆ ನಿರ್ಮಿಸಿಕೊಂಡ ಕುಟುಂಬಗಳ ಸಂಖ್ಯೆ ಹೆಚ್ಚಿದ್ದು ಸಾಗುವಳಿ, ಮನೆ ನಿವೇಶನ ಸಕ್ರಮಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅಧಿಸೂಚನೆಯ ಕಾರಣ ಅರಣ್ಯ ಇಲಾಖೆ ವ್ಯವಸ್ಥಾಪನಾಧಿಕಾರಿ ಕರ್ನಾಟಕ ಅರಣ್ಯ ಕಾಯ್ದೆ 1963ರ 17ನೇ ಅಧಿನಿಯಮದಡಿ ಸೂಕ್ತ ಕ್ರಮಕ್ಕಾಗಿ 2021 ಜ. 21ರಂದು ಹೊರಡಿಸಿದ ಸಾರ್ವಜನಿಕ ಪ್ರಕಟಣೆ ಗ್ರಾಮದಲ್ಲಿ ವಿವಾದದ ಕಿಡಿ ಹೊತ್ತಿಸಿದೆ.

ಮುತ್ತೂರು ಹೋಬಳಿಯ ಮಾನಿಕೊಪ್ಪ, ಕೊಳಗಿ ಗ್ರಾಮದ 4 ಸರ್ವೆ ನಂಬರ್‌ಗಳ ವ್ಯಾಪ್ತಿಯ 342 ಎಕರೆ 8 ಗುಂಟೆ ಕಂದಾಯ ಪ್ರದೇಶವನ್ನು ಗುರುತಿಸಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವಾಲಯ 2019 ಆ. 20ರಂದು ಅಧಿಸೂಚನೆ ಆದೇಶ ಹೊರಡಿಸಿದೆ. 2019 ಸೆ. 12ರಂದು ಈ ಕುರಿತು ಸರ್ಕಾರ ಕರ್ನಾಟಕ ರಾಜ್ಯಪತ್ರದಲ್ಲಿ ಅಧಿಸೂಚನೆ ಪ್ರಕಟಿಸಿದೆ.

ಕರ್ನಾಟಕ ಅರಣ್ಯ ಕಾಯ್ದೆ 1963ರ ಕಲಂ 4(1) (ಎ) ಪ್ರಕಾರ ದೊರೆತ ಅಧಿಕಾರ ಬಳಸಿ ಮೀಸಲು ಅರಣ್ಯ ಪ್ರದೇಶಕ್ಕೆ ಸರ್ಕಾರಿ ಕಂದಾಯ ಭೂ ಪ್ರದೇಶ ಸೇರಿಸಲಾಗಿದೆ. ಮಾನಿಕೊಪ್ಪ ಗ್ರಾಮದ ಸರ್ವೆ ನಂ. 19ರಲ್ಲಿ 164 ಎಕರೆ 8 ಗುಂಟೆ, ಸರ್ವೆ ನಂ. 10ರಲ್ಲಿ 140 ಎಕರೆ, ಕೊಳಗಿ ಗ್ರಾಮದ ಸರ್ವೆ ನಂ. 33ರಲ್ಲಿ 200 ಎಕರೆ, ಸರ್ವೆ ನಂ. 29ರಲ್ಲಿ 2 ಎಕರೆ ಸರ್ಕಾರಿ ಕಂದಾಯ ಭೂ ಪ್ರದೇಶವನ್ನು ಮೀಸಲು ಅರಣ್ಯ ಪ್ರದೇಶವನ್ನಾಗಿಸಲಾಗಿದೆ.

ಅಧಿಸೂಚನೆ ಅಡಿಯಲ್ಲಿ ಕುವೆಂಪು ಜೈವಿಕ ಅರಣ್ಯ ವ್ಯಾಪ್ತಿಗೆ 933 ಎಕರೆ 5 ಗುಂಟೆ ಕಂದಾಯ ಭೂ ಪ್ರದೇಶ ಸೇರಿಸಲಾಗಿದೆ. 133 ಎಕರೆಗೂ ಹೆಚ್ಚು ಪ್ರದೇಶವನ್ನು ಮೀಸಲು ಅರಣ್ಯವಾಗಿಸುವ ಕುರಿತಂತೆ ಕಾನೂನು ಪ್ರಕ್ರಿಯೆ ನಡೆಯುತ್ತಿದೆ. ಮೀಸಲು ಅರಣ್ಯ ಸೇರ್ಪಡೆ ಕುರಿತಂತೆ ಅರಣ್ಯ ವ್ಯವಸ್ಥಾಪನಾ ಕಚೇರಿ ಆಕ್ಷೇಪ ಸಲ್ಲಿಕೆಗೆ 3 ತಿಂಗಳ ಗಡುವು ನೀಡಿ ಸಾರ್ವಜನಿಕ ಪ್ರಕಟಣೆ ಹೊರಡಿಸಿರುವುದು ಸ್ಥಳೀಯರ ನಿದ್ದೆಗೆಡಿಸುವಂತೆ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು