ಮಂಗಳವಾರ, ಸೆಪ್ಟೆಂಬರ್ 28, 2021
22 °C
ನೈಸರ್ಗಿಕ ಕಾಡಿಗೆ ಕುತ್ತು ತಂದರೆ ಪ್ರತಿಭಟನೆಯ ಎಚ್ಚರಿಕೆ

ಶಿವಮೊಗ್ಗ | ಮಲೆನಾಡಿನ ಗುಡ್ಡಗಳಲ್ಲಿ ಯಂತ್ರ ಬಳಕೆಗೆ ವಿರೋಧ

ಶಿವಾನಂದ ಕರ್ಕಿ Updated:

ಅಕ್ಷರ ಗಾತ್ರ : | |

Prajavani

ತೀರ್ಥಹಳ್ಳಿ: ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಒಣಗಿದ ಗೇರು ಮರಗಳನ್ನು ತೆರವುಗೊಳಿಸಿ ಹೊಸ ಸಸಿಗಳನ್ನು ನೆಡಲು ಯಂತ್ರ ಬಳಸಿ ನೈಸರ್ಗಿಕ ಅರಣ್ಯ ಸಂಪತ್ತನ್ನು ನಾಶಪಡಿಸಿರುವುದಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ.

ತಾಲ್ಲೂಕಿನ ಹೊದಲ ಅರಳಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂ– 147ರಲ್ಲಿನ ಯಡಗುಡ್ಡೆ, ತುಪ್ಪದಮನೆ, ಒಡ್ಡಿನಬೈಲು, ಹುಣಸೆಬೈಲು, ಹೊದಲ, ಅರಳಾಪುರ ಗ್ರಾಮದ ಸುತ್ತಮುತ್ತಲಿನ ಗುಡ್ಡಗಳಲ್ಲಿ ಬೇಕಾಬಿಟ್ಟಿಯಾಗಿ ಅರಣ್ಯ ಸಂಪತ್ತನ್ನು ಯಂತ್ರಗಳಿಗೆ ಬಲಿಕೊಡಲಾಗುತ್ತಿದೆ.

ಯಂತ್ರ ಬಳಸಲು ಅವಕಾಶ ಇಲ್ಲದಿದ್ದರೂ ಮಲೆನಾಡಿನ ಗುಡ್ಡಗಳಲ್ಲಿ ಜೆಸಿಬಿ, ಹಿಟಾಚಿ ಯಂತ್ರ ಬಳಸುವುದರಿಂದ ಮಣ್ಣಿನ ಸವಕಳಿಯಾಗುತ್ತದೆ. ಅಮೂಲ್ಯ ಜಾತಿಯ ಸಸ್ಯ ಪ್ರಬೇಧಗಳು ನಾಶವಾಗುತ್ತವೆ. ಶ್ರೀಗಂಧ, ಔಷಧೀಯ ಸಸ್ಯಗಳು, ಕಾಡುಜಾತಿಯ ಮರಗಳು ಹಾಳಾಗಿವೆ. ಗೇರು ಬೆಳೆಸುವ ಭರದಲ್ಲಿ ಹುಲುಸಾಗಿ ಬೆಳೆದ ಕಾಡು ಯಂತ್ರಗಳ ಸುಳಿಗೆ ಸಿಲುಕಿದೆ. ಯಂತ್ರವನ್ನು ಬಳಸಬಾರದು ಎಂದು ಗೇರು ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ತಾಲ್ಲೂಕಿನಲ್ಲಿ 320 ಹೆಕ್ಟೇರ್ ಪ್ರದೇಶದಲ್ಲಿ ಗೇರು ಬೆಳೆಯಲಾಗುತ್ತಿದೆ. ಬಹುತೇಕ ನಡುತೋಪುಗಳಲ್ಲಿನ ಮರಗಳು ಸೊರಗಿವೆ. ಸಮರ್ಪಕ ನೀರು, ಗೊಬ್ಬರದ ನಿರ್ವಹಣೆ ಇಲ್ಲದೇ ಇರುವುದರಿಂದ ಮರಗಳು ಸತ್ತಿವೆ.

‘ಮಲೆನಾಡಿನ ವಾತಾವರಣಕ್ಕೆ ಹೊಂದಿಕೆಯಾಗುವ ಹೆಚ್ಚು ಇಳುವರಿ ನೀಡುವ ಸಸಿಗಳನ್ನು ನೆಡಲು ಕ್ರಮ ತೆಗೆದುಕೊಳ್ಳದೇ ಇರುವುದರಿಂದ ಗೇರು ಅಭಿವೃದ್ಧಿಗೆ ಹಿನ್ನಡೆಯಾಗಿದೆ. 20-30 ವರ್ಷಗಳ ಹಿಂದೆ ನೆಟ್ಟ ಗಿಡಗಳು ಬಹುತೇಕ ರೋಗಪೀಡಿತವಾಗಿ ಸತ್ತಿದ್ದು, ಬೋಳು ಗುಡ್ಡಗಳು ನೈಸರ್ಗಿಕ ಕಾಡಾಗಿ ಪರಿವರ್ತನೆಗೊಂಡಿವೆ. ಇಂತಹ ಗುಡ್ಡಗಳಲ್ಲಿ ಗಿಡಗಳನ್ನು ನೆಡಲು ಯಂತ್ರಗಳನ್ನು ಬಳಸುವುದು ಸೂಕ್ತವಲ್ಲ’ ಎನ್ನುತ್ತಾರೆ ಗ್ರಾಮಸ್ಥ ಕೊಪ್ಪಲು ಶ್ರೀನಾಥ್.

‘ಅನೇಕ ವರ್ಷಗಳಿಂದ ಗೇರು ಮರಗಳು ಸೊರಗಿ ಹೋಗಿವೆ. ಕೆಲವಷ್ಟು ಸತ್ತಿವೆ. ಈ ಪ್ರದೇಶದಲ್ಲಿ ಈಗ ಹಣ್ಣಿನ ಗಿಡಗಳು, ದೊಡ್ಡ ದೊಡ್ಡ ಮರಗಳು ತಲೆ ಎತ್ತಿವೆ. ಕಾಡು ಪ್ರಾಣಿಗಳು ಆಶ್ರಯ ಪಡೆದಿವೆ. ನವಿಲು, ಮೊಲಗಳ ಸಂಖ್ಯೆ ಹೆಚ್ಚಿದೆ. ಇಂತಹ ಪ್ರದೇಶದಲ್ಲಿನ ನೈಸರ್ಗಿಕ ಕಾಡನ್ನು ನಾಶಪಡಿಸಿದರೆ ಕಾಡು ಪ್ರಾಣಿಗಳು ಎಲ್ಲಿಗೆ ಹೋಗಬೇಕು’ ಎಂದು ಯಡಗುಡ್ಡೆ ಶ್ರೀವತ್ಸ ಪ್ರಶ್ನಿಸುತ್ತಾರೆ.

‘ರಾಷ್ಟ್ರೀಯ ತೋಟಗಾರಿಕಾ ಮಿಷನ್ ಅನುದಾನದಲ್ಲಿ ಗೇರು ಅಭಿವೃದ್ಧಿ ಪಡಿಸಲು ಅನುದಾನ ನೀಡಿದೆ. ಹೊಸ ಸಸಿಗಳನ್ನು ನೆಟ್ಟು, ಉಳಿದ ಮರಗಳಿಗೆ ಗೊಬ್ಬರ ಹಾಕಿ, ಮರದ ಸುತ್ತ ಕಳೆ ತೆಗೆಯುವ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ. ಬೀಜ ಸಂಗ್ರಹಿಸಲು ಕಳೆ ತೊಡಕಾಗಿದೆ. ಗುತ್ತಿಗೆ ಪಡೆದವರು ಕಳೆ ಇದ್ದರೆ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಇದರಿಂದ ಯಂತ್ರವನ್ನು ಬಳಸಲಾಗಿದೆ’ ಎನ್ನುತ್ತಾರೆ ಗೇರು ಅಭಿವೃದ್ಧಿ ನಿಗಮದ ಅಧಿಕಾರಿಗಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು