ಬುಧವಾರ, ಮೇ 18, 2022
24 °C
ಸಾಗರ ತಾಲ್ಲೂಕಿನಲ್ಲಿ ಅಕಾಲಿಕ ಮಳೆ

ಭತ್ತ ಬೆಳೆಗಾರರ ನೆರವಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಗರ: ಅಕಾಲಿಕ ಮಳೆಯಿಂದ ತಾಲ್ಲೂಕಿನ ವಿವಿಧೆಡೆ ಬೆಳೆ ನಷ್ಟ ಅನುಭವಿಸಿರುವ ಭತ್ತ ಹಾಗೂ ಜೋಳದ ಬೆಳೆಗಾರರಿಗೆ ರಾಜ್ಯ ಸರ್ಕಾರ ಕೂಡಲೇ ಪರಿಹಾರ ಒದಗಿಸಬೇಕು ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ದಿನೇಶ್ ಶಿರವಾಳ ಒತ್ತಾಯಿಸಿದ್ದಾರೆ.

ತಾಲ್ಲೂಕಿನ ತಾಳಗುಪ್ಪ ಹೋಬಳಿಯ ಸೈದೂರು ಗ್ರಾಮದಲ್ಲಿ ಅಕಾಲಿಕ ಮಳೆಯಿಂದಾಗಿ ಭತ್ತದ ಬೆಳೆಗೆ ಹಾನಿ ಉಂಟಾಗಿರುವ ಪ್ರದೇಶಕ್ಕೆ ರೈತ ಸಂಘದ ಪ್ರಮುಖರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಅಕಾಲಿಕ ಮಳೆ ಎಂಬುದು ರೈತರ ಪಾಲಿಗೆ ಶಾಪವಾಗಿದೆ’ ಎಂದರು.

ತಾಲ್ಲೂಕಿನಲ್ಲಿ 13 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ, 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬೆಳೆಯಲಾಗುತ್ತಿದೆ. ಈ ಎರಡೂ ಬೆಳೆಗಳು ಕಟಾವಿಗೆ ಬಂದ ಸಂದರ್ಭದಲ್ಲಿ ಅಕಾಲಿಕ ಮಳೆ ಸುರಿಯುತ್ತಿರುವುದರಿಂದ ಕೊಯ್ಲು ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಕೆಲವೆಡೆ ಭತ್ತ ಕೊಯ್ಲು ಮಾಡಿದ್ದರೂ ಬೆಳೆಗೆ ಮುಗ್ಗಲು ಬಂದಿದ್ದು ಬಳಕೆಗೆ ಬಾರದಂತಾಗಿದೆ ಎಂದು ಹೇಳಿದರು.

ಕಳೆದ ಒಂದು ವಾರದಿಂದ ಅಕಾಲಿಕ ಮಳೆ ಸುರಿಯುತ್ತಿದ್ದು, ಬೆಳೆ ನಷ್ಟವಾಗುತ್ತಿದ್ದರೂ ಯಾವುದೇ ಅಧಿಕಾರಿಗಳು ನಷ್ಟದ ಕುರಿತು ಸಮೀಕ್ಷೆ ನಡೆಸಲು ಮುಂದಾಗದಿರುವುದು ಬೇಸರದ ಸಂಗತಿ. ವಿಧಾನ ಪರಿಷತ್ ಚುನಾವಣೆಯ ನೀತಿ ಸಂಹಿತೆ ನೆಪದಲ್ಲಿ ರೈತರ ಸಂಕಷ್ಟವನ್ನು ಮರೆಯುವುದು ಸರಿಯಲ್ಲ ಎಂದರು.

ರೈತ ಸಂಘದ ಸಂಚಾಲಕ ರಮೇಶ್ ಕೆಳದಿ, ‘ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಬೆಳೆ ರೈತರ ಕಣ್ಣೆದುರೇ ಮಳೆಯ ಕಾರಣಕ್ಕೆ ಹಾಳಾಗುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ರೈತರ ನೋವಿಗೆ ತಾಲ್ಲೂಕು ಆಡಳಿತ ಕೂಡಲೇ ಸ್ಪಂದಿಸಬೇಕು’ ಎಂದು ಒತ್ತಾಯಿಸಿದರು.

ರೈತ ಸಂಘದ ಪ್ರಮುಖರಾದ ಸೂರಜ್, ಗುರುಮೂರ್ತಿ ಮಂಡಗಳಲೆ, ಲಕ್ಷ್ಮಮ್ಮ, ಸುರೇಶ್ ಬಾವಿಕಟ್ಟೆ, ಗಿರೀಶ್ ಕಾಗೋಡು, ಉಮೇಶ್, ಸುರೇಶ್, ಲಕ್ಷ್ಮಣ್ ಇದ್ದರು.

ಅಕಾಲಿಕ ಮಳೆ: ಸಂಕಷ್ಟದಲ್ಲಿ ರೈತರು

ತ್ಯಾಗರ್ತಿ ವರದಿ: ಸಮೀಪದ ಬರೂರು, ತ್ಯಾಗರ್ತಿ, ಹಿರೇಬಿಲಗುಂಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಟಾವಿಗೆ ಬಂದಿದ್ದ ಭತ್ತ, ಮೆಕ್ಕೆಜೋಳ, ಅಡಿಕೆ, ರಬ್ಬರ್, ಶೇಂಗಾ, ಶುಂಠಿ, ಮತ್ತಿತರ ಬೆಳೆಗಳು ಚಂಡಮಾರುತದ ಅಬ್ಬರದಿಂದಾಗಿ  ಹಾನಿಗೀಡಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಎರಡು ಎಕರೆ ವಿಸ್ತಿರ್ಣದ ಭತ್ತದ ಗದ್ದೆಯನ್ನು ಕೊಯ್ಲು ಮಾಡಿದ ಮರುದಿನವೇ ಭಾರಿ ಮಳೆಯಿಂದಾಗಿ ಗದ್ದೆಯಲ್ಲಿ ನೀರು ತುಂಬಿ ಭತ್ತ ಒಗ್ಗೂಡಿಸಲಾಗದೇ ಮೊಳಕೆ ಬಂದಿದೆ. ಬೆಳೆದ ಬೆಳೆ ಕೈಗೆ ಸಿಗದಂತಾಗಿದೆ ಎಂದು ರೈತ ನಾಗರಾಜ್ ಕಳ್ಳಿಮಟ್ಟಿ ಅಳಲು ತೋಡಿಕೊಂಡರು.

ಪ್ರಕೃತಿ ವಿಕೋಪದಿಂದ ರೈತರು ಸಂಕಷ್ಟಕ್ಕೀಡಾಗಿದ್ದು. ಸಂಭಂಧಪಟ್ಟ ಅಧಿಕಾರಿಗಳು ಸಮೀಕ್ಷೆ ನೆಡೆಸಿ ರೈತರಿಗೆ ಸರ್ಕಾರದಿಂದ ಪರಿಹಾರ ಕೊಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ತ್ಯಾಗರ್ತಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಇಸಾಕ್ ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು