ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶಯದ ಸುಳಿಯಲ್ಲಿ ಪ್ರಕಾಶ್ ಟ್ರಾವೆಲ್ಸ್‌ ಮಾಲೀಕರ ಸಾವು

‘ಕಾಫಿ ಡೇ’ ಸಿದ್ಧಾರ್ಥ ಸಾವಿನ ಪ್ರಕರಣ ನೆನಪಿಸಿದ ಅವಘಡ
Last Updated 26 ಜನವರಿ 2022, 3:40 IST
ಅಕ್ಷರ ಗಾತ್ರ

ಸಾಗರ: ಪಟಗುಪ್ಪ ಸೇತುವೆಯ ಹಿನ್ನೀರಿನಲ್ಲಿ ಶವವಾಗಿ ಪತ್ತೆಯಾದ ತಾಲ್ಲೂಕಿನ ಪ್ರಕಾಶ್‌ ಟ್ರಾವೆಲ್ಸ್‌ ಮಾಲೀಕ ಪ್ರಕಾಶ್‌ಸಾವಿನ ಪ್ರಕರಣ ಸಂಶಯ ಹುಟ್ಟುಹಾಕಿದೆ.

ಕಳೆದ ಶುಕ್ರವಾರ ಸಂಜೆಯಿಂದ ಪ್ರಕಾಶ್ ಅವರು ನಾಪತ್ತೆಯಾಗಿದ್ದರು. ಅವರ ಕಾರು ಹಾಗೂ ಮೊಬೈಲ್ ಹೊಸನಗರ ರಸ್ತೆಯ ಪಟಗುಪ್ಪೆ ಸೇತುವೆ ಬಳಿ ಪತ್ತೆಯಾಗಿದ್ದವು. ಕಾಫಿ ಡೇ ಮಾಲೀಕ ಸಿದ್ಧಾರ್ಥ ಪ್ರಕರಣದ ರೀತಿಯಲ್ಲೆ ಮತ್ತೊಂದು ಅವಘಡ ಸಂಭವಿಸಿರಬಹುದೇ ಎಂಬ ಅನುಮಾನ ದಟ್ಟವಾಗಿದ್ದಾಗಲೇ ಭಾನುವಾರ ಬೆಳಿಗ್ಗೆ ಅವರ ಶವ ಸೇತುವೆ ಸಮೀಪ ಪತ್ತೆಯಾಗಿತ್ತು.

ಕಡಿಮೆ ಅವಧಿಯಲ್ಲೇ ಬಸ್ ಉದ್ಯಮದಲ್ಲಿ ಯಶಸ್ಸು ಗಳಿಸಿದ್ದ ವ್ಯಕ್ತಿಯೊಬ್ಬರು ದಾರುಣ ಅಂತ್ಯಕಂಡಿದ್ದನ್ನು ಹಲವರಿಗೆ ನಂಬಲಾಗುತ್ತಿಲ್ಲ.

ಹಾಸನದಿಂದ 20 ವರ್ಷಗಳ ಹಿಂದೆ ಇಲ್ಲಿಗೆ ಬಂದ ಅವರು ಬಸ್ ಕ್ಲೀನರ್ ಆಗಿ, ನಂತರ ತಮ್ಮ ಕುಟುಂಬ ಹಾಗೂ ಹತ್ತಿರದ ಸಂಬಂಧಿಗ
ಳೊಂದಿಗೆ ಸೇರಿ 50 ಬಸ್‌ಗಳ ಮಾಲೀಕರಾಗುವ ಹಂತಕ್ಕೆ ತಲುಪಿದ್ದರು.

ಇಲ್ಲಿನ ಮಲ್ಲಿಕಾರ್ಜುನ ಬಸ್‌ನಲ್ಲಿ ಕ್ಲೀನರ್ ಆಗಿದ್ದ ಪ್ರಕಾಶ್ ಅವರು ನಂತರ ಗುರುರೇಣುಕಾ ಬಸ್‌ ಹಾಗೂ ಲಾರಿ ಚಾಲಕರಾಗಿ ಕಾರ್ಯನಿರ್ವಹಿಸಿದ್ದರು. ಪರಿಶ್ರಮದಿಂದ ದುಡಿದು ಹಂತ ಹಂತವಾಗಿ ಬಸ್ ಉದ್ಯಮದಲ್ಲಿ ಯಶಸ್ಸು ಗಳಿಸಿ, ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಕಂಡಿದ್ದರು.

ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ಬಸ್‌ಗಳ ಸಂಚಾರ ನಿಲ್ಲಿಸಿದ್ದು ಪ್ರಕಾಶ್ ಟ್ರಾವೆಲ್ಸ್ ಸಂಸ್ಥೆಗೂ ಪೆಟ್ಟು ನೀಡಿತ್ತು.ಹಲವು ಬಸ್ ಮಾಲೀಕರು ಸಾಲದ ಸುಳಿಗೆ ಸಿಲುಕಿದ ರೀತಿಯಲ್ಲೆ ಪ್ರಕಾಶ್ ಅವರೂ ಸಾಲದ ಹೊರೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಸುದ್ದಿ ಇದೆ. ಆದರೆ ಅವರ ಕುಟುಂಬದವರು ಪ್ರಕಾಶ್ ಆತ್ಮಹತ್ಯೆ ಮಾಡಿಕೊಳ್ಳುವ ಸ್ವಭಾವದವರಲ್ಲ ಎಂದೇ ದೃಢವಾಗಿ ನಂಬಿದ್ದಾರೆ.

ಕೆಲವೇ ದಿನಗಳ ಹಿಂದೆ ಹೊಸನಗರದ ವ್ಯಕ್ತಿಯೊಬ್ಬರಿಗೆ ಪ್ರಕಾಶ್ ಬಸ್ ಮಾರಾಟ ಮಾಡಿದ್ದರು. ಅದರ ಹಣ ಬರಬೇಕಿದ್ದು, ಅದನ್ನು ತರಲು ಹೋಗಿದ್ದ ಸಂದರ್ಭದಲ್ಲಿ ಸಾವು ಸಂಭವಿಸಿರುವುದು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಅವರ ಶವದ ಮರಣೋತ್ತರ ಪರೀಕ್ಷೆ ವರದಿಯಲ್ಲಿ ದೇಹದ ಮೇಲೆ ನೀರಿನಲ್ಲಿ ಮುಳುಗಿ ಆಗಿರುವ ಗಾಯಗಳನ್ನು ಹೊರತುಪಡಿಸಿ ಉಳಿದ ಗಾಯಗಳು ಪತ್ತೆಯಾಗಿಲ್ಲ. ಹೀಗಾಗಿ ಇದೊಂದು ಕೊಲೆ ಎಂದು ನಂಬಲು ಕೂಡ ಕಷ್ಟವಾಗುತ್ತಿದೆ ಎನ್ನುವುದು ಪೊಲೀಸ್‌ ಮೂಲಗಳ ಹೇಳಿಕೆ.

ಪೊಲೀಸರು ಪ್ರಕಾಶ್ ಮೊಬೈಲ್‌ಗೆ ಬಂದ ಕರೆಗಳ ಜಾಡು ಹಿಡಿದು ತನಿಖೆ ನಡೆಸುತ್ತಿದ್ದು, ಈ ಮೂಲಕ ಸತ್ಯಾಸತ್ಯತೆ ಹೊರಬರಬೇಕಿದೆ.

ಅವರ ಸಾವಿಗೆ ಕಾರಣಗಳೇನೇ ಇದ್ದರೂ ದುಡಿಯುವ ಕೈಗೆ ಕೆಲಸ ನೀಡುವ ಮೂಲಕ ಹಲವರ ಬದುಕು ದಡ ಸೇರುವಂತೆ ಮಾಡಿದ್ದ ಪ್ರಕಾಶ್ ಸಾವು ಹಿನ್ನೀರಿನ ತಳದಲ್ಲಿ ಕಾಣುವಂತಾಗಿದ್ದು ವಿಪರ್ಯಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT