ಮಂಗಳವಾರ, ಸೆಪ್ಟೆಂಬರ್ 27, 2022
27 °C
ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ

ರೈತರ ಉತ್ಪನ್ನಗಳಿಗೆ ಬೆಲೆ ಚಳವಳಿ ನಾಳೆ: ಬಸವರಾಜಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯಿಂದ ಆಗಸ್ಟ್ 12ರಂದು ‘ರೈತರ ಉತ್ಪನ್ನಗಳಿಗೆ ಬೆಲೆ ಸ್ವಾತಂತ್ರ್ಯದ ಚಳವಳಿ’ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 11 ಗಂಟೆಗೆ ಆಯಾ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಚಳವಳಿ ಆರಂಭಿಸಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಹೇಳಿದರು.‌

ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆಯಾದರೂ ಸಿಗಲಿ ಎಂಬ ನಿಟ್ಟಿನಲ್ಲಿ ಬೆಲೆ ಸ್ವಾತಂತ್ರ್ಯ ಚಳವಳಿ ಆರಂಭಿಸಿದ್ದೇವೆ. ಇದರ ಅಂಗವಾಗಿ ರಾಜ್ಯದ ಎಲ್ಲೆಡೆ ಜಿಲ್ಲಾ ಮತ್ತು ತಾಲ್ಲೂಕು ಕಚೇರಿಗಳ ಮುಂದೆ ರೈತ ಚಳವಳಿ ನಡೆಯಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

76ನೇ ಸ್ವಾತಂತ್ರ್ಯೋತ್ಸವಕ್ಕೆ ದೇಶ ಸಜ್ಜಾಗಿದೆ. ಇದನ್ನು ರೈತರು ಬಿಟ್ಟು ರಾಜಕಾರಣಿಗಳು, ರಾಜಕೀಯ ಕೃಪಾಪೋಷಿತರು, ಕೈಗಾರಿಕೆ ಮಾಲೀಕರು, ವರ್ತಕರು, ನೌಕರಶಾಹಿಗಳು ಸಂಭ್ರಮಿಸುತ್ತಿದ್ದಾರೆ. ಅವರ ಅಗತ್ಯಗಳನ್ನು ರೈತ ಅಗ್ಗದ ಬೆಲೆಯಲ್ಲಿ ಪೂರೈಸಿ ಸಾಲದ ಸುಳಿಗೆ ಸಿಲುಕಿದ್ದಾನೆ. ಆದರೆ ರೈತರಿಗೆ ಮಾತ್ರ ಇದುವರೆಗೂ ನಿಜವಾದ ಸ್ವಾತಂತ್ರ್ಯ ಸಿಕ್ಕಿಲ್ಲ. ರೈತರನ್ನು ಹೊರತುಪಡಿಸಿ ಎಲ್ಲರೂ ಬೆಲೆಗಳ ಲಾಭ ಪ್ರಯೋಜನ ಪಡೆಯುತ್ತಿ‌ದ್ದಾರೆ ಎಂದರು.

ಕಾರ್ಖಾನೆಯ ಉತ್ಪಾದನೆಗಿಂತ ರೈತರ ಉತ್ಪನ್ನಗಳಿಗೂ ಬೆಲೆ ಭದ್ರತೆ ಕಾಯ್ದೆ ಜಾರಿಯಾಗಬೇಕು. ಕೃಷಿ ಬೆಲೆ ಆಯೋಗದ ಮಾರ್ಗದರ್ಶಿಯಲ್ಲಿಯೇ ಬೆಲೆ ಭದ್ರತೆ ಕಾಯ್ದೆ ಇರಬೇಕು. ಇಲ್ಲಿವರೆಗೂ ಬೆಲೆಯ ಮೋಸದಿಂದಾಗಿ ರೈತರ ಮೇಲೆ ಬಂದಿರುವ ಎಲ್ಲಾ ಸಾಲಗಳ ಹೊಣೆಯನ್ನು ಸರ್ಕಾರವೇ ಹೊರಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಹಿಟ್ಟೂರು ರಾಜು, ಟಿ.ಎಂ.ಚಂದ್ರಪ್ಪ, ಬಿ.ಎಂ.ಚಿಕ್ಕಸ್ವಾಮಿ, ಕೆ.ರಾಘವೇಂದ್ರ, ಎಸ್.ಶಿವಮೂರ್ತಿ, ರುದ್ರೇಶ್, ಸಿ.ಚಂದ್ರಪ್ಪ ಇದ್ದರು.

***

ಶುಲ್ಕದ ಬದಲಿಗೆ ಕೃಷಿ ಉತ್ಪನ್ನ ಪಾವತಿ

ಶಿವಮೊಗ್ಗ: ಬ್ಯಾಂಕ್‌ ಸಾಲ, ವಿದ್ಯುತ್ ಬಿಲ್‌ ಹಾಗೂ ಭೂ ಕಂದಾಯ ಸೇರಿ ಸರ್ಕಾರದ ಎಲ್ಲ ಶುಲ್ಕಗಳನ್ನೂ ಇನ್ನು ಮುಂದೆ ಹಣದ ರೂಪದ ಬದಲು ರೈತರು ಬೆಳೆದ ಉತ್ಪನ್ನಗಳ ರೂಪದಲ್ಲೇ ಪಾವತಿ ಮಾಡಲಾಗುವುದು ಎಂದು ಎಚ್.ಆರ್. ಬಸವರಾಜಪ್ಪ ತಿಳಿಸಿದರು.

‘ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಸೂಕ್ತ ಬೆಲೆ ದೊರಕಿಸಲೂ ಸರ್ಕಾರವೂ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿಲ್ಲ. ಇದರಿಂದ ಬೇಸತ್ತು ಬೆಳೆ ಪಾವತಿಯನ್ನೇ ‘ಚಳವಳಿ’ ರೂಪದಲ್ಲಿ ಕೊಂಡೊಯ್ಯಲು ನಿರ್ಧರಿಸಿದ್ದೇವೆ. ರೈತರ ಬೆಳೆಗೆ ನ್ಯಾಯಯುತ ಬೆಲೆ ದೊರೆಯುವವರೆಗೂ ಇದನ್ನು ಮುಂದುವರಿಸಲಿದ್ದೇವೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು