ಶನಿವಾರ, ಜನವರಿ 28, 2023
13 °C

ಮೆಸ್ಕಾಂ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರಜಾವಾಣಿ ವಾರ್ತೆ

ಶಿಕಾರಿಪುರ: ಅಸಮರ್ಪಕ ವಿದ್ಯುತ್ ಪೂರೈಕೆ ಹಾಗೂ ಮೆಸ್ಕಾಂ ಅಧಿಕಾರಿಗಳು ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಸೋಮವಾರ ಮೆಸ್ಕಾಂ ಕಚೇರಿಯ ಎದುರು ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರು, ‘ರೈತರು ಸಾಲ ಮಾಡಿ ಬೆಳೆ ತೆಗೆಯುತ್ತಿದ್ದಾರೆ. ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಆದರೆ, ರೈತರ ಬೆಳೆಗೆ ಅಗತ್ಯವಾದ ವಿದ್ಯುತ್ ಪೂರೈಕೆ ಮಾಡುವಲ್ಲಿ ಮೆಸ್ಕಾಂ ನಿರ್ಲಕ್ಷ್ಯ ವಹಿಸಿದೆ. ರೈತರು ಬೆಳೆದ ಲಕ್ಷಾಂತರ ಬೆಳೆ ಹಾಳಾಗುತ್ತಿದೆ. ಲೋಡ್ ಶೆಡ್ಡಿಂಗ್ ನಿಲ್ಲಿಸಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು. ಅಕ್ರಮ–ಸಕ್ರಮದ ಅಡಿ 6000ಕ್ಕೂ ಹೆಚ್ಚು ರೈತರಿಗೆ ವಿದ್ಯುತ್ ಸಂಪರ್ಕ ನೀಡದೇ, ಹೆಚ್ಚು ಹಣ ನೀಡಿದವರಿಗೆ ಸಂಪರ್ಕ ನೀಡುವ ಮೂಲಕ ಭ್ರಷ್ಟಾಚಾರ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಸುಟ್ಟು ಹೋದ ಟಿಸಿಯನ್ನು 24 ಗಂಟೆಯೊಳಗೆ ಬದಲಾವಣೆ ಮಾಡಿಕೊಡುತ್ತೇವೆ ಎಂದು ಇಂಧನ ಸಚಿವ ವಿ. ಸುನೀಲ್‌ಕುಮಾರ್ ಭಾಷಣಗಳಲ್ಲಿ ಹೇಳುತ್ತಿದ್ದಾರೆ. ಆದರೆ, ತಾಲ್ಲೂಕಿನಲ್ಲಿ 15 ದಿನ ಕಳೆದರೂ ರೈತರಿಗೆ ಸುಟ್ಟು ಹೋದ ಟಿಸಿ ಬದಲಾವಣೆ ಮಾಡಿಕೊಟ್ಟಿಲ್ಲ. ರೈತರನ್ನು ಕಚೇರಿಗೆ ಅಲೆದಾಡಿಸುತ್ತಿದ್ದಾರೆ. ರೈತರ ವಿದ್ಯುತ್ ಸಮಸ್ಯೆ ನಿವಾರಿಸುವಲ್ಲಿ ಸ್ಥಳೀಯ ಶಾಸಕರಾದ ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ವಿಫಲರಾಗಿದ್ದಾರೆ’ ಎಂದು ಆರೋಪಿಸಿದರು. ಮುಖಂಡರಾದ ಎಚ್.ಎಸ್. ಶಾಂತವೀರಪ್ಪ ಗೌಡ್ರು, ಗೋಣಿ ಮಾಲತೇಶ್, ನಗರದ ಮಹಾದೇವಪ್ಪ, ಎಸ್.ಪಿ. ನಾಗರಾಜ್ ಗೌಡ್ರು, ಹುಲ್ಮಾರ್ ಮಹೇಶ್, ಗೋಣಿ ಪ್ರಕಾಶ್, ಎನ್. ಅರುಣಕುಮಾರ್, ಜಯಶ್ರೀ, ಉಳ್ಳಿ ದರ್ಶನ್, ಕಮಲಮ್ಮ ಹುಲ್ಮಾರ್‌, ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.