ಗುರುವಾರ , ಜುಲೈ 29, 2021
21 °C

100 ಅಡಿ ರಸ್ತೆಯಲ್ಲಿ ಕಳಪೆ ಕಾಮಗಾರಿ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ವಿನೋಬನಗರ 100 ಅಡಿ ರಸ್ತೆಯಲ್ಲಿ ನಡೆಯುತ್ತಿರುವ ಸ್ಮಾರ್ಟ್‌ಸಿಟಿ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಕಾರ್ಯಕರ್ತರು ಶುಕ್ರವಾರ ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ವಿನೋಬನಗರದ ಸವಿ ಬೇಕರಿಯಿಂದ ಹಾಲ್ಕೊಳದವರೆಗೆ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ಅವೈಜ್ಞಾನಿಕವಾಗಿದೆ. ರಸ್ತೆ ಕಿರಿದಾಗಿ ಜನರ ಓಡಾಟಕ್ಕೂ ತೊಂದರೆಯಾಗಲಿದೆ. ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಹಲವು ಕಡೆ ಅನಗತ್ಯವಾಗಿ ಚರಂಡಿ ಎತ್ತರ ಮಾಡಲಾಗಿದೆ. ಇದರಿಂದ ನೀರು ಸರಾಗವಾಗಿ ಹೋಗಲು ಸಾಧ್ಯವಿಲ್ಲ ಎಂದು ದೂರಿದರು.

ರಸ್ತೆಯಲ್ಲಿ ಎರಡು ವರ್ಷಗಳ ಹಿಂದೆ ಕೋಟ್ಯಂತರ ಹಣ ಖರ್ಚು ಮಾಡಿ ಯುಜಿ ಕೇಬಲ್ ಅಳವಡಿಸಲಾಗಿದೆ. ಈಗ ಸ್ಮಾರ್ಟ್‌ಸಿಟಿ ಹೆಸರಲ್ಲಿ ಅದೇ ಕಾಮಗಾರಿ ಮುಂದುವರಿಸಲಾಗುತ್ತಿದೆ. ಈಗಿರುವ ಕಾಮಗಾರಿಯ ಪ್ರಕಾರ ವಾಣಿಜ್ಯ ಮತ್ತು ವಾಸದ ಕಟ್ಟಡಗಳಿಗೆ ಮೊದಲು ಯುಜಿಡಿ ಸಂಪರ್ಕವನ್ನು ನಗರಪಾಲಿಕೆ ಕಡ್ಡಾಯಗೊಳಿಸಬೇಕು. ನಂತರ ಕಾಮಗಾರಿ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ರಸ್ತೆ ಕಿರಿದಾದರೆ ವಾಹನಗಳ ಪಾರ್ಕಿಂಗ್‌ ವ್ಯವಸ್ಥೆಗೂ ಸಮಸ್ಯೆಯಾಗುತ್ತದೆ. ಜನರು ಅಂಗಡಿ, ಮನೆಗಳಿಂದ ಸರಾಗವಾಗಿ ಓಡಾಡಲು ಚರಂಡಿ ಎತ್ತರ ಕನಿಷ್ಠ 3 ಅಥವಾ 4 ಇಂಚು ತಗ್ಗಿಸಬೇಕು. ಈ ರಸ್ತೆಯಲ್ಲಿ ಬರುವ ಮನೆ, ಮಳಿಗೆಗಳಿಗೆ  24X7 ನೀರಿನ ಸಂಪರ್ಕ ಕಲ್ಪಿಸದೇ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಇದು ಅವೈಜ್ಞಾನಿಕ ಎಂದು ದೂರದಿರು.

ಒಕ್ಕೂಟದ ಕೆ.ವಿ.ವಸಂತಕುಮಾರ್, ಮುಖಂಡರಾದ ಎಸ್‌.ಬಿ.ಅಶೋಕ್‌ಕುಮಾರ್, ಸತೀಶ್‌ ಕುಮಾರ್ ಶೆಟ್ಟಿ, ರುದ್ರಪ್ಪ ಮತ್ತಿತರರು ಮನವಿ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.