ಭಾನುವಾರ, ನವೆಂಬರ್ 27, 2022
20 °C

ತಳಕಳಲೆ ಮುಳುಗಡೆ ಸಂತ್ರಸ್ತರಿಂದ ರಸ್ತೆ ತಡೆದು ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರ್ಗಲ್: ಹಿರೇಭಾಸ್ಕರ, ಲಿಂಗನಮಕ್ಕಿ, ತಳಕಳಲೆ ಜಲಾಶಯದ ಮುಳುಗಡೆ ಸಂತ್ರಸ್ತರು ರಸ್ತೆ ಸೌಲಭ್ಯಕ್ಕಾಗಿ ಆಗ್ರಹಿಸಿ ರಸ್ತೆ ತಡೆದು ಮಂಗಳವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ತಳಕಳಲೆವರೆಗಿನ ದೇವರಮಕ್ಕಿ, ಕುಡುಗುಂಜಿ, ಸುಂಕದಮನೆ, ಹೆರಕಣಿ, ತಾಸೊಳ್ಳಿ, ಜಬ್ಬುಗದ್ದೆ, ಐತೋಳ್ ಮನೆ, ವಟ್ಟಕ್ಕಿ, ಕಲ್ಲೊಟ್ಟಿಗೆ ಮತ್ತು ಬೆಣ್ಣೆಮನೆ, ಚಪ್ಪಗಾರು, ಮಲ್ಲಕ್ಕಿ, ಇರಿಗೆಗದ್ದೆ, ಶನಿಗದ್ದೆ, ಬಾಳೆಗದ್ದೆಯ ಶಾಲಾ ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

‘ನಾಡಿಗೆ ಬೆಳಕು ನೀಡಲು ಸರ್ವವನ್ನೂ ಕಳೆದುಕೊಂಡ ಮುಳುಗಡೆ ಸಂತ್ರಸ್ತರ ಕುಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾದ ತಳಕಳಲೆ ರಸ್ತೆಯನ್ನು ಕೆಪಿಸಿ ನಿಗಮ ನಿರ್ವಹಣೆ ಮಾಡುತ್ತಿತ್ತು. ಆದರೆ, 5 ವರ್ಷಗಳಿಂದ ನಿಗಮರಸ್ತೆ ನಿರ್ವಹಣೆ ಮಾಡದೇ ಇರುವುದರಿಂದ ಅತ್ಯಂತ ದುಸ್ಥಿತಿಗೆ ತಲುಪಿದೆ. ಈ ರಸ್ತೆಯಲ್ಲಿ ಅನೇಕ ಅಪಘಾತಗಳು, ಅನಾಹುತಗಳು ಸಂಭವಿಸುತ್ತಲೇ ಇರುತ್ತವೆ. ಆದರೆ, ಈವರೆಗೂ ಸಂಬಂಧಪಟ್ಟ ಕೆಪಿಸಿ ನಿಗಮ, ಪಟ್ಟಣ ಪಂಚಾಯಿತಿ ಗಮನಹರಿಸಿಲ್ಲ. ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಉಗ್ರ ಪ್ರತಿಭಟನೆಯ ಮೂಲಕ ನೆಲದ ಮೂಲ ಸೌಕರ್ಯಗಳ ಹಕ್ಕಿಗಾಗಿ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ’ ಎಂದು ಶ್ರೀಪಾದ್ ಭಟ್ ಚೆಂಡೇಮನೆ ಎಚ್ಚರಿಸಿದರು.

‘ತಳಕಳಲೆ ಜಲಾಶಯಕ್ಕೆ ಹೋಗುವ ಈ ಮಾರ್ಗದ ರಸ್ತೆಯ ಅಭಿವೃದ್ಧಿಯನ್ನು ಸ್ಥಳೀಯ ಆಡಳಿತ ಕೂಡಲೇ ಸರಿ ಪಡಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ರೂಪುಗೊಳ್ಳಲಿದೆ’ ಎಂದು ಸಾಮಾಜಿಕ ಕಾರ್ಯಕರ್ತ ವಿ.ಸಂತೋಷ್‍ಕುಮಾರ್ ಎಚ್ಚರಿಸಿದರು.

ಸ್ಥಳಕ್ಕೆ ಬಂದ ಕೆಪಿಸಿ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಉಮಾಪತಿ ಮತ್ತು ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಚಂದ್ರಶೇಖರ್, ಶೀಘ್ರದಲ್ಲಿಯೇ ರಸ್ತೆ ದುರಸ್ತ ಮಾಡುವ ಭರವಸೆಯನ್ನು ನೀಡಿದರು. ಜೋಗ ನಿರ್ವಹಣಾ ಪ್ರಾಧಿಕಾರದಿಂದ ಸುಮಾರು ₹ 6 ಕೋಟಿ ಮಂಜೂರಾಗಿದ್ದು, ಸಮರ್ಪಕವಾಗಿ ಆಧುನಿಕ ಮಾದರಿಯಲ್ಲಿ ರಸ್ತೆ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಗುತ್ತಿಗೆ ಪಡೆದಿರುವ ಶಂಕರನಾರಾಯಣ ಕಂಪನಿಯ ವ್ಯವಸ್ಥಾಪಕ ಪಿ.ಸಂದೀಪ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಾಸಂತಿ ರಮೇಶ್ ಮತ್ತು ಮುಖ್ಯಾಧಿಕಾರಿ ಜಗದೀಶ್ ನಾಯ್ಕ ಪ್ರತಿಭಟನಕಾರರ ಮನವೊಲಿಸಿ ಪ್ರತಿಭಟನೆಯನ್ನು ಹಿಂಪಡೆಯುವಲ್ಲಿ ಯಶಸ್ವಿಯಾದರು.

ಗ್ರಾಮಸ್ಥರಾದ ಭೀಮನಾಯ್ಕ ದೇವರಮಕ್ಕಿ, ಬೈರಾನಾಯ್ಕ್ ದೇವರಮಕ್ಕಿ, ನಾಗರಾಜ್ ಜೈನ್ ಮಲ್ಲಕ್ಕಿ, ಪಾಯಪ್ಪ ಜೈನ್ ಇರಿಗಿಗದ್ದೆ, ಜಟ್ಟನಾಯ್ಕ್ ಶನಿಗದ್ದೆ, ಲೋಕೇಶ್ ಬೆಣ್ಣೆಮನೆ, ಚಂದ್ರು ದೇವರಮಕ್ಕಿ, ರಮೇಶ ಇರಿಗೆಗದ್ದೆ, ಸತೀಶ್ ಮಲ್ಲಕ್ಕಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು