ಗುರುವಾರ , ಜುಲೈ 29, 2021
27 °C
18,626 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು, ಶೇ 2.91ರಷ್ಟು ಗೈರು ಹಾಜರಿ

ಸುಗಮವಾಗಿ ಮುಗಿದ ಪಿಯು ಇಂಗ್ಲಿಷ್ ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಕೊರೊನಾ ಸಂಕಷ್ಟದ ಕಾರಣ ಮುಂದೂಡಲಾಗಿದ್ದ ದ್ವಿತೀಯ ಪಿಯು ಇಂಗ್ಲಿಷ್ ಪತ್ರಿಕೆಯ ಪರೀಕ್ಷೆ ಗುರುವಾರ ಸುಗಮವಾಗಿ ನಡೆಯಿತು.

ಹಿಂದಿನ ವಿಷಯಗಳ ಪತ್ರಿಕೆಗಳಿಗೆ ಹೋಲಿಸಿದರೆ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಾಗಿತ್ತು. ಇತರೆ ವಿಷಯಗಳಲ್ಲಿ ಶೇ 3.1ರಿಂದ ಶೇ 5ರವರೆಗೂ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಈ ವಿಷಯದಲ್ಲಿ ಶೇ 2.91ರಷ್ಟು ಗೈರು ಹಾಜರಿ ಕಂಡುಬಂತು. ಕೊರೊನಾ ವೈರಸ್‌ಗೆ ಪೋಷಕರು, ವಿದ್ಯಾರ್ಥಿಗಳು ಮಣೆ ಹಾಕುವುದಿಲ್ಲ ಎಂದು ಸಾಬೀತು ಮಾಡಿದರು.

ಜಿಲ್ಲೆಯ 19,171 ವಿದ್ಯಾರ್ಥಿಗಳಿಗೆ 33 ಕೇಂದ್ರಗಳಲ್ಲಿ ಪರೀಕ್ಷೆ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲೆ ಹಾಗೂ ಹೊರ ಜಿಲ್ಲೆಯ ಒಟ್ಟು 18,626 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 545 ಮಂದಿ ಗೈರು ಹಾಜರಾಗಿದ್ದರು. ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮೂಲಕ ಆರೋಗ್ಯ ತಪಾಸಣೆ ನಡೆಸಲಾಯಿತು. ಸ್ಯಾನಿಟೈಸರ್ ನೀಡಿದ ನಂತರ ಪರೀಕ್ಷಾ ಕೇಂದ್ರಕ್ಕೆ ಬಿಡಲಾಯಿತು.

ಜಿಲ್ಲೆಯ 18,380 ವಿದ್ಯಾರ್ಥಿಗಳಲ್ಲಿ 17,842 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 538 ವಿದ್ಯಾರ್ಥಿಗಳು ‌ಗೈರು ಹಾಜರಾಗಿದ್ದರು. ಬೇರೆ ಜಿಲ್ಲೆಗಳ 791 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಅವರಲ್ಲಿ 784 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 7 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.

ವಿದ್ಯಾರ್ಥಿಗಳು ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡು ಪರೀಕ್ಷೆ ಬರೆದರು. ಪರೀಕ್ಷಾ ಕೇಂದ್ರಗಳಿಗೆ ಬಂದು ಹೋಗಲು ಬಹುತೇಕ ವಿದ್ಯಾರ್ಥಿಗಳಿಗೆ 129 ಮಾರ್ಗಗಳಲ್ಲಿ 133 ಬಸ್‍ಗಳ ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ಬಸ್‍ನಲ್ಲೂ ನೋಡಲ್ ಅಧಿಕಾರಿ ನೇಮಕ ಮಾಡಲಾಗಿತ್ತು. ಅಲ್ಲಿಯೂ ಅಂತರ ಕಾಯ್ದುಕೊಳ್ಳಲಾಗಿತ್ತು.

ಶಿವಮೊಗ್ಗ ನಗರದಲ್ಲಿ 11 ಕೇಂದ್ರಗಳನ್ನು ತೆರೆಯಲಾಗಿತ್ತು. ವಿದ್ಯಾರ್ಥಿಗಳನ್ನು ಪೋಷಕರು ಬೈಕ್‍ಗಳಲ್ಲಿ ಕರೆ ತಂದಿದ್ದರು. ಪರೀಕ್ಷೆ ಮುಗಿಯುವವರೆಗೂ ಪರೀಕ್ಷಾ ಕೇಂದ್ರಗಳ ಹೊರಗೆ ನಿಂತು ಮುನ್ನೆಚ್ಚರಿಕೆ ಕ್ರಮಗಳನ್ನು ಅವಲೋಕಿಸಿದರು. ಕೆಲವು ಕಡೆ ಅಂಗವಿಕಲ ವಿದ್ಯಾರ್ಥಿಗಳನ್ನು ಕರೆ ತರಲು ಪೋಷಕರು ಶ್ರಮಿಸಿದರು.ಕಸ್ತೂರಬಾ ಬಾಲಕಿಯರ ಕಾಲೇಜಿನಲ್ಲಿ ಆದಿಚುಂಚನಗಿರಿ ಪಿಯು ಕಾಲೇಜಿನ ವಿದ್ಯಾರ್ಥಿ ಇಶಾನ್ ಕಾರಿನಲ್ಲಿ ಆಗಮಿಸಿದರು. ಇತ್ತೀಚೆಗೆ ನಡೆದ ಅಪಘಾತದಲ್ಲಿ ಇಶಾನ್ ಕಾಲು ಮುರಿದುಕೊಂಡಿದ್ದು, ಅವರಿಗೆ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ವಿಶೇಷ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.