ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಗುಣಮಟ್ಟ ಹೆಲ್ಮೆಟ್ ಕಡ್ಡಾಯ, ಮಳಿಗೆಯಲ್ಲಿ ಹೆಚ್ಚಿದ ಬೇಡಿಕೆ

Published 2 ಆಗಸ್ಟ್ 2023, 11:35 IST
Last Updated 2 ಆಗಸ್ಟ್ 2023, 11:35 IST
ಅಕ್ಷರ ಗಾತ್ರ

ಶಿವಮೊಗ್ಗ: ಬೈಕ್‌ ಸವಾರರು ಐಎಸ್‌ಐ ಮಾರ್ಕ್‌ನ ಗುಣಮಟ್ಟದ ಹೆಲ್ಮೆಟ್ ಧರಿಸುವುದನ್ನು ‍ಪೊಲೀಸರು ಕಡ್ಡಾಯಗೊಳಿಸುತ್ತಿದ್ದಂತೆಯೇ ಶಿವಮೊಗ್ಗದಲ್ಲಿ ಹೆಲ್ಮೆಟ್ ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದಾರೆ.

ಜಿಲ್ಲೆಯಲ್ಲಿ ಸಂಚಾರ ಪೊಲೀಸರು ಕಳೆದೊಂದು ವಾರದಿಂದ ಬೈಕ್ ಸವಾರರಲ್ಲಿ ಹೆಲ್ಮೆಟ್ ಕುರಿತಾಗಿ ಜಾಗೃತಿ ಮೂಡಿಸುತ್ತಿದ್ದಾರೆ. ಬೈಕ್ ಸವಾರರು ಕಳಪೆ ಗುಣಮಟ್ಟದ ಇಲ್ಲವೇ ಅರ್ಧ ಹೆಲ್ಮೆಟ್ ಬಳಸಬೇಡಿ. ಬಳಸಿದರೆ ₹500 ದಂಡ ಕಟ್ಟಬೇಕು ಎಂದು ಮನವಿ ಮಾಡುತ್ತಿದ್ದಾರೆ.

ಅರ್ಧ ಹೆಲ್ಮೆಟ್‌ಗಳನ್ನು ಪೊಲೀಸರು ವಶ‍ಪಡಿಸಿಕೊಳ್ಳುತ್ತಿದ್ದಂತೆಯೇ ಬೈಕ್ ಸವಾರರು ಗುಣಮಟ್ಟದ ಹೆಲ್ಮೆಟ್ ಖರೀದಿಸಲು ಮುಗಿಬಿದ್ದಿದ್ದಾರೆ. ಇದರಿಂದ ಹೆಲ್ಮೆಟ್‌ಗಳಿಗೆ ಬೇಡಿಕೆ ಹೆಚ್ಚಿದೆ. 

ಹೀಗಾಗಿ ಈ ಹಿಂದೆ ಪ್ರತಿನಿತ್ಯ 10–20 ಹೆಲ್ಮೆಟ್ ಮಾರಾಟ ಮಾಡುತ್ತಿದ್ದ ಮಾರಾಟಗಾರರು ಕಳೆದೊಂದು ವಾರದಿಂದ ದಿನಕ್ಕೆ 50ಕ್ಕೂ ಹೆಚ್ಚು ಹೆಲ್ಮೆಟ್ ಮಾರಾಟ ಮಾಡುತ್ತಿದ್ದಾರೆ.

‘ಸರ್ಕಾರದ ಆದೇಶ ಪಾಲಿಸುವುದು ಬೈಕ್ ಸವಾರರ ಕರ್ತವ್ಯ. ₹ 1,000 ಉಳಿಸಲು ಹೋಗಿ, ಅಪಘಾತದಲ್ಲಿ ಜೀವಕ್ಕೇ ಅಪಾಯ ತಂದುಕೊಳ್ಳುವುದು ಬೇಡ. ಗುಣಮಟ್ಟದ ಹೆಲ್ಮೆಟ್ ಧರಿಸದೆ, ಅಪಘಾತಕ್ಕೀಡಾದ ಪ್ರಕರಣ ಹೆಚ್ಚುತ್ತಲೇ ಇವೆ. ಪೊಲೀಸ್ ಇಲಾಖೆ ಕೂಡ ಜಾಗೃತಿ ಮೂಡಿಸುತ್ತಲೇ ಇದೆ’ ಎಂದು ಸಂಚಾರಿ ಪೊಲೀಸ್ ವಿಭಾಗದ ಎಎಸ್ಐ ರಾಜೇಶ್ವರಿ ದೇವಿ ಹೇಳುತ್ತಾರೆ.

‘ಹೆಲ್ಮೆಟ್ ಮಾರಾಟದ ವೇಳೆ ಮಾರುಕಟ್ಟೆ ಬೆಲೆಗಿಂತ ಹೆಚ್ಚು ಹಣ ಗ್ರಾಹಕರಿಂದ ಪಡೆಯುತ್ತಿಲ್ಲ. ಹಿಂದಿನ ದರದಲ್ಲಿಯೇ ಹೆಲ್ಮೆಟ್ ಮಾರಾಟ ಮಾಡಲಾಗುತ್ತಿದೆ’ ಎಂದು ಬಿ.ಎಚ್.ರಸ್ತೆ, ಎಡಬ್ಲ್ಯು ಸ್ಟೋರ್ ಮಾಲೀಕ ಮಹಮ್ಮದ್ ಇಲಿಯಾಸ್ ಹೇಳುತ್ತಾರೆ.

ಹೊಸ ನಿಯಮ ಜಾರಿಯಾಗುತ್ತಿದ್ದಂತೆಯೇ ಹೆಲ್ಮೆಟ್ ಕಳುವಿನ ದೂರು ಕೂಡ ಕೇಳಿ ಬರುತ್ತಿವೆ. ಕಾರ್ಯನಿಮಿತ್ತ ರಸ್ತೆ ಬದಿ, ಅಂಗಡಿ ಮುಂದೆ ಬೈಕ್ ನಿಲ್ಲಿಸಿದರೆ ಕ್ಷಣಾರ್ಧಲ್ಲಿ ಹೆಲ್ಮೆಟ್ ಕಳವು ಮಾಡಲಾಗುತ್ತಿದೆ ಎಂಬುದು ಸವಾರರ ಅಳಲು.

ನಿಯಮ ಪಾಲನೆಯ ಆದೇಶ ಸವಾರರು ಗಂಭೀರವಾಗಿ ಪರಿಗಣಿಸಬೇಕು. ಗುಣಮಟ್ಟದ ಹೆಲ್ಮೆಟ್ ಕಡ್ಡಾಯವಾಗಿ ಖರೀದಿಸಬೇಕು. ಇಲ್ಲದಿದ್ದರೆ ಐಎಂವಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ದಂಡ ವಿಧಿಸಲಾಗುತ್ತದೆ.
ರಾಜೇಶ್ವರಿ ದೇವಿ ಎಎಸ್ಐ ಸಂಚಾರಿ ಪೊಲೀಸ್ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT