ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಯ ಆರ್ಭಟ: ಕೊಚ್ಚಿಹೋದ ರಸ್ತೆ, ಸೇತುವೆ

ವಾಡಿಕೆಗಿಂತ ದುಪ್ಪಟ್ಟು ವರ್ಷಧಾರೆ: ನಲುಗಿದ ಮಲೆನಾಡು
Last Updated 19 ಸೆಪ್ಟೆಂಬರ್ 2022, 4:50 IST
ಅಕ್ಷರ ಗಾತ್ರ

ಶಿವಮೊಗ್ಗ: ಈ ಬಾರಿಯ ವರ್ಷಧಾರೆಗೆ ಮಲೆನಾಡು ಅಕ್ಷರಶಃ ನಲುಗಿ ಹೋಗಿದೆ. ಅತಿಹೆಚ್ಚು ಮಳೆ ಸುರಿದಿರುವ ಹೊಸನಗರ, ಸಾಗರ, ತೀರ್ಥಹಳ್ಳಿ ತಾಲ್ಲೂಕುಗಳಲ್ಲಿ ವ್ಯಾಪಕ ನಷ್ಟ ಆಗಿದೆ.

ಮನೆಗಳು, ಕೊಟ್ಟಿಗೆ, ಬೆಳೆ ಮಾತ್ರವಲ್ಲ ರಸ್ತೆ, ಸೇತುವೆ, ತಡೆಗೋಡೆಗಳು, ಕುಡಿಯುವ ನೀರು ಪೂರೈಕೆ ವ್ಯವಸ್ಥೆ, ವಿದ್ಯುತ್ ಕಂಬಗಳು, ಸರ್ಕಾರಿ ಶಾಲಾ ಕಟ್ಟಡಗಳು, ಕೆರೆಗಳು, ಸರ್ಕಾರಿ ಕಟ್ಟಡಗಳು ಸೇರಿದಂತೆ ಸರ್ಕಾರಿ ಆಸ್ತಿಪಾಸ್ತಿಗೆ ಸಾಕಷ್ಟು ಹಾನಿಯಾಗಿದೆ. ನೆರೆಯಿಂದ ಗ್ರಾಮೀಣ ಭಾಗದ ಸಂಪರ್ಕ ರಸ್ತೆಗಳು ತೀವ್ರ ಪ್ರಮಾಣದಲ್ಲಿ ಹಾನಿಗೀಡಾಗಿದ್ದು, ಅವುಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ಹೀಗಾಗಿ ಇನ್ನೂ ಜನರ ಸಂಕಷ್ಟ ಕಳೆದಿಲ್ಲ.

ಜಿಲ್ಲೆಯಲ್ಲಿ ಪ್ರವಾಹಕ್ಕೆ ಸಿಲುಕಿ ಆರು ಕಡೆ ಕುಡಿಯುವ ನೀರು ಪೂರೈಕೆ ಪೈಪ್‌ಲೈನ್‌ಗಳು ಕೊಚ್ಚಿಹೋಗಿವೆ. 1,896 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. 38 ಕಿ.ಮೀ ದೂರ ವಿದ್ಯುತ್ ಲೈನ್ ಹಾಳಾಗಿದೆ. 61 ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳು ಹಾನಿಗೀಡಾಗಿವೆ. ಒಟ್ಟು 226 ಸರ್ಕಾರಿ ಶಾಲೆಗಳ ಕಟ್ಟಡಗಳು, ಅಂಗನವಾಡಿ ಸೇರಿದಂತೆ 219 ಸರ್ಕಾರಿ ಕಟ್ಟಡಗಳು ಹಾಗೂ 82 ಕೆರೆಗಳು ಮಳೆಯ ಆರ್ಭಟಕ್ಕೆ ಹಾನಿಗೊಳಗಾಗಿವೆ. ಮಳೆಯಿಂದ ಕರೆ ತುಂಬಿದರೂ ಅವುಗಳ ಏರಿಗಳಲ್ಲಿ ಬಿರುಕು ಮೂಡಿರುವುದು, ತೂಬುಗಳು ಹಾನಿಗೀಡಾಗಿ ನೀರು ಹರಿದುಹೋಗುತ್ತಿರುವುದು ಗ್ರಾಮೀಣರಲ್ಲಿ ಆತಂಕ ಮೂಡಿಸಿದೆ.

ನಗರ ಪ್ರದೇಶದಲ್ಲಿ ಹಾನಿಗೀಡಾದ ರಸ್ತೆಗಳಿಗೆ ತೇಪೆ ಹಾಕುವ ಕಾರ್ಯವನ್ನು ಆಯಾ ಸ್ಥಳೀಯ ಸಂಸ್ಥೆಗಳು ಕೈಗೆತ್ತಿಕೊಂಡಿವೆ. ಗ್ರಾಮೀಣ ರಸ್ತೆಗಳ ತಾತ್ಕಾಲಿಕ ದುರಸ್ತಿ ಕಾರ್ಯ ಲೋಕೋಪಯೋಗಿ ಇಲಾಖೆಯಿಂದ ನಡೆದಿದೆ.

ಜಿಲ್ಲೆಯಲ್ಲಿ ಈ ಬಾರಿಯ ಮಳೆಗೆ 323 ಮನೆಗಳು ಪೂರ್ಣ ಪ್ರಮಾಣದಲ್ಲಿ, 1,479 ಭಾಗಶಃ ಹಾಗೂ 698 ಅಲ್ಪಸ್ವಲ್ಪ ಸೇರಿದಂತೆ ಒಟ್ಟು 2,500 ಮನೆಗಳು ಹಾನಿಗೀಡಾಗಿವೆ. ನೆರೆಯಿಂದ ಸಂತ್ರಸ್ತವಾಗಿರುವ ಒಟ್ಟು 417 ಕುಟುಂಬಗಳಿಗೆ ₹ 10,000 ಪರಿಹಾರ ನೀಡಲಾಗಿದೆ. ಮನೆ ಹಾನಿಗೆ ಪರಿಹಾರ ಮೊತ್ತ ನೀಡಲು ರಾಜೀವಗಾಂಧಿ ವಸತಿ ನಿಗಮದ ತಂತ್ರಾಂಶದಲ್ಲಿ ದಾಖಲು ಮಾಡುವ ಕಾರ್ಯ ನಡೆದಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಸಿಗದ ಪರಿಹಾರ

ನಿರಂಜನ ವಿ.

ತೀರ್ಥಹಳ್ಳಿ: 3 ತಿಂಗಳಿಂದ ವಾಡಿಕೆಗಿಂತ ಹೆಚ್ಚು ಸುರಿದ ಬಾರಿ ಮಳೆಗೆ ತಾಲ್ಲೂಕಿನ ಬಹುತೇಕ ಪ್ರದೇಶದಲ್ಲಿ ಮನೆ, ಸಾಗುವಳಿ ಜಮೀನು, ರಸ್ತೆಗಳಿಗೆ ಹಾನಿಯಾಗಿದೆ.

ತಾಲ್ಲೂಕಿನಲ್ಲಿ ಅತಿಯಾದ ಮಳೆಗೆ 39 ಕೊಟ್ಟಿಗೆ, ಆರು ಸೇತುವೆ, ಆರು ರಸ್ತೆ ಹಾನಿಗೀಡಾಗಿವೆ. 197 ಮನೆಗಳಿಗೆ ಗಂಭೀರ ಸ್ವರೂಪದ ಹಾನಿಯಾಗಿದ್ದು ಕುಟುಂಬಗಳು ಸಕಾಲಕ್ಕೆ ಪರಿಹಾರ ಸಿಗದೆ ಸಂಕಷ್ಟಕ್ಕೆ ಸಿಲುಕಿದೆ. ದಾಖಲೆಗನ್ನು ಆಡಳಿತಕ್ಕೆ ಸಲ್ಲಿಸಿದ್ದರು ಈವರೆಗೆ ಪೂರ್ಣ ಪ್ರಮಾಣದ ಪರಿಹಾರ ಸಿಕಿಲ್ಲ ಎನ್ನುತ್ತಾರೆ ಮನೆ ಕಳೆದುಕೊಂಡ ಸಂತ್ರಸ್ತ ಪಡುವಳ್ಳಿ ರಾಘವೇಂದ್ರ.

ಕಳಪೆ ಕಾಮಗಾರಿ ಯಡವಟ್ಟು:

ತಾಲ್ಲೂಕಿನಲ್ಲಿ ತರಾತುರಿಯಲ್ಲಿ ಕಳೆಯಿಂದಾಗಿ ನಿರ್ಮಾಣ ಮಾಡಿರುವ ಬಹುತೇಕ ಕಾಮಗಾರಿ ವರುಣನ ಆಕ್ರೋಶಕ್ಕೆ ಬಲಿಯಾಗಿವೆ. ₹50 ಲಕ್ಷ ಅನುದಾನದಲ್ಲಿ 3 ತಿಂಗಳ ಹಿಂದೆ ನಿರ್ಮಾಣವಾದ ಹಣಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳ್ಳಿಗದ್ದೆ ಸೇತುವೆ, ರಸ್ತೆ ತಡೆಗೋಡೆ ಆಗಸ್ಟ್‌ ಉರುಳಿರುವುದು ಜನ ಸಾಮಾನ್ಯರ ಗೆಂಗಣ್ಣಿಗೆ ಗುರಿಯಾಗಿದೆ. ಇದರಿಂದಾಗಿ ಬಸವನಗದ್ದೆ – ಸಂಕ್ಲಾಪುರ – ಅಲಸೆ - ಹುಂಚ ಮಾರ್ಗದ ಸಂಪರ್ಕ ವ್ಯತ್ಯಯಗೊಂಡಿದೆ. ₹10 ಲಕ್ಷ ವೆಚ್ಚದಲ್ಲಿ ಆಗಿದ್ದ ಪಟ್ಟಣದ ಮುಖ್ಯ ಬಸ್‌ ನಿಲ್ದಾಣದ ಡಾಂಬರೀಕರಣ ನೀರಿನಲ್ಲಿ ತೇಲಿ ಹೋಗಿದೆ.

ಹೊಸನಗರ ತಾಲ್ಲೂಕು ₹ 320 ಕೋಟಿ ಹಾನಿ

ರವಿ ನಾಗರಕೂಡಿಗೆ

ಹೊಸನಗರ: ಮಳೆಯಿಂದ ತಾಲ್ಲೂಕಿನಲ್ಲಿ ₹ 320 ಕೋಟಿ ಹಾನಿ ಸಂಭವಿಸಿದೆ. ತಾಲ್ಲೂಕಿನಲ್ಲಿ 90 ದಿನಗಳ ಕಾಲ ಸುರಿದ ಭಾರೀ ಮಳೆಗೆ ಮಳೆಕಾಡು ಆಗಿರುವ ಹೊಸನಗರ ತಾಲ್ಲೂಕು ನಲುಗಿ ಹೋಗಿದೆ. ಜುಲೈ ತಿಂಗಳಲ್ಲಿ 22 ದಿನಗಳ ಕಾಲ ದಿನವೂ 10 ಸೆ.ಮೀ ಮಳೆ ಆಗಿದೆ. ಸಹಜವಾಗಿಯೇ ಮನೆ, ಕೊಟ್ಟಿಗೆ ಕುಸಿತ, ರಸ್ತೆ ಕುಸಿತ, ಧರೆ ಕುಸಿತ, ರೈತರ ಜಮೀನು ಕೊಚ್ಚಿ ಹೋಗಿದೆ.

ತಾಲ್ಲೂಕಿನಲ್ಲಿ ಒಟ್ಟು 107 ಮನೆ ಭಾಗಶಃ ಹಾನಿ ಆಗಿದೆ. 66 ಕೊಟ್ಟಿಗೆ ಕುಸಿತ ಕಂಡಿದೆ. ಸಾರ್ವಜನಿಕ ಆಸಿಪಾಸ್ತಿ ನಷ್ಟವಾಗಿದ್ದು ₹202 ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ. 107 ಮನೆಗಳಲ್ಲಿ 77 ಮನೆಗಳಿಗೆ ಪರಿಹಾರ ಕೊಡಲಾಗಿದ್ದು ಬಾಕಿ ಉಳಿದ ಮನೆಗಳಿಗೆ ಸದ್ಯದಲ್ಲೇ ಪರಿಹಾರ ಕೊಡಲಾಗುವುದು ಎಂದು ತಹಸೀಲ್ದಾರ್ ಎಸ್.ವಿ. ರಾಜೀವ್ ಪತ್ರಿಕೆಗೆ ಮಾಹಿತಿ ನೀಡಿದರು.

ಕುಸಿದ ಸೇತುವೆಗಳು

ಎಂ. ರಾಘವೇಂದ್ರ

ಸಾಗರ: ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಜೊತೆಗೆ ಕಡಿಮೆ ಅವಧಿಯಲ್ಲಿ ಭಾರಿ ಮಳೆ ಸುರಿದ ಕಾರಣ ತಾಲ್ಲೂಕಿನಲ್ಲಿ ರಸ್ತೆ ಹಾಗೂ ಸೇತುವೆಗಳಿಗೆ ವ್ಯಾಪಕ ಪ್ರಮಾಣದ ಹಾನಿ ಉಂಟಾಗಿದೆ.

ಇಲ್ಲಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆ ಹಾಗೂ ಸೇತುವೆಗಳಿಗೆ ಒಟ್ಟು ₹7.90 ಕೋಟಿ ಮೊತ್ತದ ಹಾನಿ ಸಂಭವಿಸಿದೆ ಎಂದು ಇಲಾಖೆ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ತಾಲ್ಲೂಕಿನಲ್ಲಿ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗಕ್ಕೆ ಸೇರಿದ 20 ಕಿ.ಮೀ ದೂರದ ರಸ್ತೆಗೆ ಹಾನಿಯಾಗಿದ್ದು, ₹36 ಲಕ್ಷ ನಷ್ಟ ಉಂಟಾಗಿದೆ ಎಂದು ಅಂದಾಜು ಮಾಡಲಾಗಿದೆ. ಈ ವಿಭಾಗಕ್ಕೆ ಬರುವ ಮೂರು ಸೇತುವೆಗಳು ಕುಸಿದಿದ್ದು ₹ 30 ಲಕ್ಷ ನಷ್ಟವಾಗಿದೆ.

ಎ,ಬಿ,ಸಿ, ವರ್ಗಗಳಾಗಿ ಗುರುತಿಸಿರುವ ಹಾನಿ ಸಂತ್ರಸ್ತರ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಎ ಮತ್ತು ಬಿ ವರ್ಗದ ಬಹುತೇಕ ಸಂತ್ರಸ್ತರಿಗೆ ಎನ್‌ಡಿಆರ್‌ಎಫ್‌ ಅನುದಾನದಲ್ಲಿ ಪರಿಹಾರ ಬಂದಿದೆ. ತಾಲ್ಲೂಕಿನಲ್ಲಿ ಶೇ‌ 60ರಷ್ಟು ಸಂತ್ರಸ್ತರಿಗೆ ಈಗಾಗಲೇ ಪೂರ್ಣ ಪರಿಹಾರ ನೀಡಲಾಗಿದೆ.
–ಅಮೃತ್‌ ಅತ್ರೇಶ್‌, ತಹಶೀಲ್ದಾರ್‌, ತೀರ್ಥಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT