ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆ ಬದಲಾವಣೆ ಆದೇಶ: ಸಾಗರ ಎಸಿಗೆ 10 ಸಾವಿರ ದಂಡ

Last Updated 9 ಸೆಪ್ಟೆಂಬರ್ 2022, 2:46 IST
ಅಕ್ಷರ ಗಾತ್ರ

ಬೆಂಗಳೂರು: ನ್ಯಾಯಾಲಯದ ಆದೇಶ ಇಲ್ಲದೇ ಇದ್ದರೂ ಕಂದಾಯ ದಾಖಲೆಗಳನ್ನು ಬದಲಾಯಿಸಲು ಆದೇಶಿಸಿದ ಆರೋಪಕ್ಕೆ ಗುರಿಯಾಗಿದ್ದ ಸಾಗರ ತಾಲ್ಲೂಕು ಉಪವಿಭಾಗಾಧಿಕಾರಿ (ಎಸಿ) ಡಾ.ನಾಗರಾಜ್‌ ಅವರಿಗೆ ಹೈಕೋರ್ಟ್‌ ₹ 10 ಸಾವಿರ ದಂಡ ವಿಧಿಸಿದೆ.

ಈ ಸಂಬಂಧ ಶಿಕಾರಿಪುರ ತಾಲ್ಲೂಕು ಮುದ್ದೇನಹಳ್ಳಿಯ ಕೆಂಗಟ್ಟೆ ಗ್ರಾಮದ ಪಿ.ಆರ್.ರಂಗಪ್ಪ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಜಿ.ನರೇಂದರ್‌ ಮತ್ತು ಸಿ.ಎಂ.ಜೋಷಿ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಕಳೆದ ವಿಚಾರಣೆ ವೇಳೆ ಉಪವಿಭಾಗಾಧಿಕಾರಿಯ ಖುದ್ದುಹಾಜರಿಗೆ ಆದೇಶಿಸಿದ್ದ ಹಿನ್ನೆಲೆಯಲ್ಲಿ ನಾಗರಾಜ್‌ ಕೋರ್ಟ್‌ಗೆ ಹಾಜರಾಗಿದ್ದರು. ‘ವ್ಯಾಜ್ಯ ಕೋರ್ಟ್ ವಿಚಾರಣೆಯಲ್ಲಿ ಇರುವಾಗ ಕಂದಾಯ ದಾಖಲೆ ತಿದ್ದಿದ ಕ್ರಮ ಕಾನೂನುಬಾಹಿರ’ ಎಂಬ ಅಭಿಪ್ರಾಯದೊಂದಿಗೆ ನ್ಯಾಯಪೀಠ, ₹ 50 ಸಾವಿರ ದಂಡ ವಿಧಿಸಲು ಮುಂದಾಯಿತು.

ಇದಕ್ಕೆ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಆರ್‌. ಸುಬ್ರಹ್ಮಣ್ಯ, ‘ಅಧಿಕಾರಿಯು ನ್ಯಾಯಾಲಯಕ್ಕೆ ಬೇಷರತ್ ಕ್ಷಮೆ ಯಾಚಿಸುತ್ತಾರೆ. ಆದ್ದರಿಂದ, ದಂಡದ ಮೊತ್ತವನ್ನು ಕಡಿಮೆ ಮಾಡಬೇಕು‘ ಎಂದು ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ದಂಡದ ಮೊತ್ತವನ್ನು ₹ 10 ಸಾವಿರಕ್ಕೆ ಇಳಿಸಿತಲ್ಲದೆ, ಖಾತೆ ಬದಲಾವಣೆ ಮಾಡಿದ್ದ ಆದೇಶವನ್ನು ರದ್ದುಗೊಳಿಸಿತು. ‘ದಂಡದ ಮೊತ್ತವನ್ನುಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಲ್ಲಿಸಬೇಕು‘ ಎಂದು ನಿರ್ದೇಶಿಸಿ ಅರ್ಜಿ ವಿಲೆವಾರಿ ಮಾಡಿತು.ಅರ್ಜಿದಾರರ ಪರ ಹಿರಿಯ ವಕೀಲ ಕೆ.ದಿವಾಕರ ವಾದ ಮಂಡಿಸಿದರು.

ಪ್ರಕರಣವೇನು?: ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಮೀಸಲು ವರ್ಗದಲ್ಲಿ1964ರಲ್ಲಿ ಮಂಜೂರಾಗಿದ್ದ ಎರಡು ಎಕರೆ ಜಮೀನಿನ ಖಾತೆಯನ್ನು ಬದಲಾಯಿಸಲಾಗಿದೆ’ ಎಂದು ಅರ್ಜಿದಾರರು ದೂರಿದ್ದರು.

‘ನಮ್ಮ ವಿರುದ್ಧ ಭೂ ಕಬಳಿಕೆ ಆರೋಪದಡಿ ಭೂ ಕಬಳಿಕೆ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಲಾಗಿದೆ. ಈ ಸಂಬಂಧ ನ್ಯಾಯಾಲಯ ಸಂಜ್ಞೇಯ ಅಪರಾಧ ಎಂದು ಪರಿಗಣಿಸಿ ನಮಗೆ ನೋಟಿಸ್ ಜಾರಿಗೆ ಆದೇಶಿಸಿದೆ. ಅಂತೆಯೇ ಉಪವಿಭಾಗಾಧಿಕಾರಿಗೆ ವರದಿ ಸಲ್ಲಿಸಲು ನಿರ್ದೇಶಿಸಿತ್ತು. ವರದಿ ನೀಡುವ ಸಮಯದಲ್ಲಿ ಉಪವಿಭಾಗಾಧಿಕಾರಿ ಸ್ವ ಇಚ್ಛೆಯಿಂದ ಖಾತೆ ಬದಲಾವಣೆಗೆ ಆದೇಶಿಸಿದ್ದು ಅವರ ವಿರುದ್ಧ ಕ್ರಮಕ್ಕೆ ನಿರ್ದೇಶಿಸಬೇಕು’ ಎಂದುಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT