ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧ್ವಜ ಸಂಹಿತೆ ಸಡಿಲಿಕೆ; ಶೋಭಾ ಸಮರ್ಥನೆ

ಸರ್ಕಾರಿ ಜಾಹೀರಾತಿನಲ್ಲಿ ನೆಹರೂ ಭಾವಚಿತ್ರಕ್ಕೆ ಕೊಕ್: ಪ್ರತಿಕ್ರಿಯೆಗೆ ನಕಾರ
Last Updated 15 ಆಗಸ್ಟ್ 2022, 4:48 IST
ಅಕ್ಷರ ಗಾತ್ರ

ಈಸೂರು (ಶಿವಮೊಗ್ಗ): ದೇಶದ ಜನರ ಮನೆ, ಮನಗಳಲ್ಲಿ ತ್ರಿವರ್ಣ ಧ್ವಜ ಹಾರಿಸುವ ಪ್ರಧಾನಿ ಮೋದಿ ಅವರ ಕನಸು ನನಸಾಗಿಸಲು ಧ್ವಜ ಸಂಹಿತೆಯನ್ನು ಸಡಿಲಿಸಲಾಗಿದೆ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಕುವೆಂಪು ವಿಶ್ವವಿದ್ಯಾಲಯವು ಜಿಲ್ಲೆಯ ಈಸೂರಿನಲ್ಲಿ ಭಾನುವಾರ ಆಯೋಜಿಸಿದ್ದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ರಾಷ್ಟ್ರಧ್ವಜ ಎಲ್ಲರಿಗೂ ಲಭ್ಯವಂತಾಗಲು ಪಾಲಿಸ್ಟರ್ ಧ್ವಜ ಬಳಕೆಗೆ ಅವಕಾಶ ಮಾಡಿಕೊಡಲಾಗಿದೆ. ಕೇವಲ ಖಾದಿ ಬಟ್ಟೆಯಿಂದ ಮಾಡಿದ ಧ್ವಜ ಬಳಕೆ ಮಾಡಬೇಕು, ಕತ್ತಲಾಗುವುದರ ಒಳಗೆ ಧ್ವಜ ತೆಗೆಯಬೇಕು ಎಂಬ ಕಟ್ಟಳೆಗಳನ್ನು ತೆಗೆದು ಹಾಕಲಾಗಿದೆ’ ಎಂದು ಸಮರ್ಥಿಸಿಕೊಂಡರು.

ಪ್ರತಿಕ್ರಿಯೆಗೆ ನಕಾರ: ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನ ಮಾಡುವುದು ರಾಷ್ಟ್ರದ್ರೋಹದ ವಿಚಾರ. ಸ್ವಾತಂತ್ರ್ಯಕ್ಕಾಗಿ ಪ್ರಾಣ ಕೊಟ್ಟ ಸೇನಾನಿಗಳಿಗೆ ಅಪಮಾನ ಮಾಡುವವರಿಗೆ ಸರ್ಕಾರ ಉಗ್ರ ಶಿಕ್ಷೆ ನೀಡಬೇಕು ಎಂದು ಶೋಭಾ
ಹೇಳಿದರು

ಶಿವಮೊಗ್ಗದಲ್ಲಿ ಶನಿವಾರ ಸ್ವಾತಂತ್ರ್ಯ ಹೋರಾಟಗಾರ ವಿ.ಡಿ. ಸಾವರ್ಕರ್ ಅವರ ಭಾವಚಿತ್ರ ತೆರವುಗೊಳಿಸಲು ಕೆಲವರು ಒತ್ತಾಯಿಸಿದ್ದ ಬಗ್ಗೆ ಕೇಳಲಾದ ಪ್ರಶ್ನೆಗೆ ಶೋಭಾ ಮೇಲಿನಂತೆ ಪ್ರತಿಕ್ರಿಯಿಸಿದರು.

ಸಾವರ್ಕರ್ ಅವರನ್ನು ವಿರೋಧಿಸುವವರು ಅಂಡಮಾನ್ ಜೈಲಿಗೆ ತೆರಳಿ ವಾಸ್ತವ ಸಂಗತಿ ಅರಿತುಕೊಳ್ಳಲಿ. ಬ್ರಿಟಿಷರಿಂದ ಎರಡು ಬಾರಿ ಕರಿನೀರಿನ ಶಿಕ್ಷೆಗೆ ಒಳಗಾದ ಸಾವರ್ಕರ್ ಅವರ ಇಡೀ ಕುಟುಂಬವೇ ಸ್ವಾತಂತ್ರ್ಯ ಹೋರಾಟಕ್ಕೆ ಬಲಿದಾನ ಮಾಡಿದೆ. ಆಸ್ತಿಪಾಸ್ತಿ ಕಳೆದುಕೊಂಡಿದೆ. ಶಿವಮೊಗ್ಗದ ಘಟನೆ ಅದೊಂದು ಷಡ್ಯಂತ್ರ ಎಂದರು.

***

ದೇಶ ವಿಭಜನೆ ವಿಡಿಯೊ ಪ್ರದರ್ಶನ

ಈಸೂರಿನಲ್ಲಿ ಭಾನುವಾರ ಕುವೆಂಪು ವಿಶ್ವವಿದ್ಯಾಲಯದಿಂದ ಆಯೋಜಿಸಿದ್ದ ‘ನಮ್ಮ ನಡಿಗೆ ಈಸೂರು ಕಡೆಗೆ’ ಕಾರ್ಯಕ್ರಮದಲ್ಲಿ ದೇಶದ ವಿಭಜನೆಗೆ ಸಂಬಂಧಿಸಿದಂತೆ ವೇದಿಕೆಯಲ್ಲಿ ಒಂದು ನಿಮಿಷದ ವಿಡಿಯೊ ಪ್ರದರ್ಶಿಸಲಾಯಿತು.

1929ರಲ್ಲಿ ರಾವಿ ನದಿಯ ದಂಡೆಯಲ್ಲಿ ನಡೆದಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಅಖಂಡ ಭಾರತ ಹಾಗೂ ಸಂಪೂರ್ಣ ಸ್ವರಾಜ್ಯ ಪರ ನಿರ್ಣಯಗಳನ್ನು ಕೈಗೊಳ್ಳಲಾಗಿತ್ತು. ಆದರೆ, ಮುಂದಿನ 17 ವರ್ಷಗಳಲ್ಲಿ ಕಾಂಗ್ರೆಸ್ ಆ ನಿರ್ಣಯವನ್ನು ಮರೆತುಬಿಟ್ಟಿತು. ದೇಶದ ಕೋಟ್ಯಂತರ ಜನರ ವಿರೋಧವನ್ನು ಲೆಕ್ಕಿಸದೇ ದೇಶ ವಿಭಜನೆಗೆ ಒಪ್ಪಿ ಲಕ್ಷಾಂತರ ಜನ ಪ್ರಾಣ ತೆತ್ತರು ಎಂದು ವಿವರಿಸುವ ಜೊತೆಗೆ ಈ ಬಗ್ಗೆ ಮಹರ್ಷಿ ಅರವಿಂದರು, ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಸರಸಂಘ ಚಾಲಕ ಮೋಹನ್ ಭಾಗವತ್ ನೀಡಿರುವ ಹೇಳಿಕೆಗಳನ್ನು ವಿಡಿಯೊ ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT