ಶಿವಮೊಗ್ಗ: ಚಿತ್ರದುರ್ಗದ ರೇಣಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ, ನಟ ದರ್ಶನ್ ಜೊತೆ ಸಹ ಆರೋಪಿಗಳಾಗಿರುವ ಜಗದೀಶ್ ಹಾಗೂ ಲಕ್ಷ್ಮಣ್‌ನನ್ನು ಗುರುವಾರ ಪರಪರಪನ ಅಗ್ರಹಾರ ಕಾರಾಗೃಹದಿಂದ ಇಲ್ಲಿನ ಸೋಗಾನೆಯ ಕೇಂದ್ರ ಕಾರಾಗೃಹಕ್ಕೆ ಕರೆತರಲಾಯಿತು.
ಬೆಂಗಳೂರು ನಗರ ಸಶಸ್ತ್ರ ಮೀಸಲು ಪಡೆಯ (ಸಿಎಆರ್) ಪೊಲೀಸರ ಬೆಂಗಾವಲಿನಲ್ಲಿ ಆರೋಪಿಗಳನ್ನು ಕರೆತರಲಾಯಿತು.
‘ಕೇಂದ್ರ ಕಾರಾಗೃಹದ ಕಾವೇರಿ ವಿಭಾಗದಲ್ಲಿ ಇಬ್ಬರೂ ವಿಚಾರಣಾಧೀನ ಕೈದಿಗಳನ್ನು ಉಳಿದ ಸಾಮಾನ್ಯ ಕೈದಿಗಳಂತೆಯೇ ಭದ್ರತೆಯಲ್ಲಿ ಇಡಲಾಗಿದೆ. ಏಳು ದಿನಗಳ ಕಾಲ ಅವರನ್ನು ಪ್ರತ್ಯೇಕವಾಗಿ (ಕ್ವಾರಂಟೈನ್) ಇರಿಸಿ ನಿಗಾ ವಹಿಸಬೇಕಿದೆ’ ಎಂದು ಕಾರಾಗೃಹದ ಮುಖ್ಯ ಅಧೀಕ್ಷಕಿ ಆರ್.ಅನಿತಾ ತಿಳಿಸಿದರು.
ಧಾರವಾಡ/ಬೆಳಗಾವಿ ವರದಿ: ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ಧನರಾಜ್‌ಗೆ ಗುರುವಾರ ಮಧ್ಯಾಹ್ನ 12.45ಕ್ಕೆ ಧಾರವಾಡ ಕೇಂದ್ರ ಕಾರಾಗೃಹಕ್ಕೆ ಪೊಲೀಸರು ಕರೆತಂದರು.
ಪ್ರಕರಣದ ಇನ್ನೊಬ್ಬ ಆರೋಪಿ ಪ್ರದೂಶ್‌ಗೆ ಬೆಳಗಾವಿ ಜಿಲ್ಲೆಯ ಹಿಂಡಲಗಾ ಕಾರಾಗೃಹಕ್ಕೆ ಗುರುವಾರ ಮಧ್ಯಾಹ್ನ ಪೊಲೀಸರು ಕರೆ ತಂದರು. ಇಬ್ಬರ ಬಳಿಯಿದ್ದ ಚೀಲ, ಪರಿಕರಗಳನ್ನು ಪರಿಶೀಲಿಸಿದರು. ಔಷಧಿ ಹೊರತುಪಡಿಸಿ, ಉಳಿದ ಸಾಮಗ್ರಿಗಳನ್ನು ಒಯ್ಯಲು ಅವಕಾಶ ನೀಡಲಿಲ್ಲ.
ಆರೋಗ್ಯದಲ್ಲಿ ವ್ಯತ್ಯಾಸ: ಆರೋಪಿಗಳ ಸ್ಥಳಾಂತರ ವಿಳಂಬ
ಮೈಸೂರು ವರದಿ: ಆರೋಗ್ಯದಲ್ಲಿ ವ್ಯತ್ಯಾಸವಾದ ಕಾರಣಕ್ಕೆ, ರೇಣುಕಸ್ವಾಮಿ ಕೊಲೆ ಪ್ರಕರಣದ ಮೂವರು ಆರೋಪಿಗಳನ್ನು ಗುರುವಾರ ಇಲ್ಲಿನ ಕೇಂದ್ರ ಕಾರಾಗೃಹಕ್ಕೆ ಕರೆತರಲಿಲ್ಲ. ಶುಕ್ರವಾರ ಬೆಳಿಗ್ಗೆ ಅವರನ್ನು ಕರೆತರುವ ಸಾಧ್ಯತೆ ಇದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಆರೋಪಿ ದರ್ಶನ್‌ಗೆ ವಿಶೇಷ ಆತಿಥ್ಯ ಪ್ರಕರಣದ ಬಳಿಕ ಪ್ರಕರಣದ ಆರೋಪಿಗಳಾದ ನಂದೀಶ್, ರಾಘವೇಂದ್ರ, ಪವನ್ ಎಂಬುವರನ್ನು ಅಲ್ಲಿಂದ ಮೈಸೂರು ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲು ಸರ್ಕಾರ ಆದೇಶಿಸಿತ್ತು.