ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು-ಶಿವಮೊಗ್ಗ ಚತುಷ್ಪಥ ಹೆದ್ದಾರಿಗೆ ₹ 6397 ಕೋಟಿ

Last Updated 5 ಏಪ್ರಿಲ್ 2021, 11:29 IST
ಅಕ್ಷರ ಗಾತ್ರ

ಶಿವಮೊಗ್ಗ: ತುಮಕೂರು-ಶಿವಮೊಗ್ಗ ಚತುಷ್ಪಥ ಹೆದ್ದಾರಿ ಕಾಮಗಾರಿಯ ₹ 6397.47 ಕೋಟಿ ಪರಿಷ್ಕೃತ ಅಂದಾಜಿಗೆ ಕೇಂದ್ರ ಭೂ ಸಾರಿಗೆ ಸಚಿವ ನಿತೀನ್ ಗಡ್ಕರಿ ಅನುಮೋದನೆ ನೀಡಿದ್ದಾರೆ. ಯೋಜನೆ ತ್ವರಿತಗತಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ನಗರದಲ್ಲಿ ಸೋಮವಾರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಈ ಯೋಜನೆಯಿಂದಾಗಿ ತುಮಕೂರು-ಶಿವಮೊಗ್ಗ ಮಧ್ಯೆ 5 ಬೃಹತ್‌ ಸೇತುವೆಗಳು, 66 ರೈಲ್ವೆ ಕೆಳ, ಮೇಲು ಸೇತುವೆಗಳು, 7 ಹೊರವಲಯಗಳ ನಿರ್ಮಾಣವಾಗಲಿವೆ. ಬೆಂಗಳೂರಿನಿಂದ ಮಲೆನಾಡು ಭಾಗದ ಸಂಪರ್ಕ ಇನ್ನಷ್ಟು ಸುಗಮವಾಗಲಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಪ್ರಯಾಣಕ್ಕೆ ಸಹಕಾರಿಯಾಗಲಿದೆ ಎಂದರು.

ಕೇಂದ್ರ ಸಚಿವರನ್ನು ಈಚೆಗೆ ಭೇಟಿಯಾಗಿ ಯೋಜನೆಗೆ ಈಗಾಗಲೇ ನೀಡಲಾಗಿರುವ ಅನುದಾನದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ, ಭೂಸ್ವಾಧಿನ ಹಾಗೂ ಇತರ ವೆಚ್ಚಗಳಿಗಾಗಿ ಹೆಚ್ಚುವರಿಯಾಗಿ ₹ 1,796.24 ಕೋಟಿ ಅನುದಾನಕ್ಕಾಗಿ ಬೇಡಿಕೆ ಸಲ್ಲಿಸಲಾಗಿತ್ತು. ಕೇಂದ್ರ ಸಚಿವರು ಭಾರತಮಾಲಾ ಯೋಜನೆಯಡಿ ಒಟ್ಟಾರೆ ಯೋಜನೆ ಅನುಷ್ಠಾನಕ್ಕೆ ₹ 6,397.47 ಕೋಟಿ ಮಂಜೂರು ಮಾಡಿದ್ದಾರೆ ಎಂದು ವಿವರ ನೀಡಿದರು.

ಒಟ್ಟು ನಾಲ್ಕು ಪ್ಯಾಕೇಜ್‌ಗಳಲ್ಲಿ ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತಿದೆ. ತರೀಕೆರೆ ತಾಲ್ಲೂಕು ಬೆಟ್ಟದಹಳ್ಳಿಯಿಂದ ಸಾಗರ ರಸ್ತೆಯ ಶ್ರೀರಾಂಪುರದವರೆಗಿನ 56 ಕಿ.ಮೀ ಅಭಿವೃದ್ಧಿಪಡಿಸಲಾಗುತ್ತಿದೆ. ಇದರೊಂದಿಗೆ 33 ಕಿ.ಮೀ. ಸೇವಾ ರಸ್ತೆ, ತುಂಗಾ ಮತ್ತು ಭದ್ರಾ ನದಿಗೆ 3 ಬೃಹತ್ ಸೇತುವೆಗಳು, 20 ಕೆಳ ಮತ್ತು ಮೇಲು ಸೇತುವೆಗಳು, ಶಿವಮೊಗ್ಗದ ನಗರದಲ್ಲಿ 14.74 ಕಿ.ಮೀ ಹಾಗೂ ತರೀಕೆರೆಯಲ್ಲಿ 9 ಕಿ.ಮೀ ಹೊರವಲಯ ರಸ್ತೆ, ರಂಗಾಪುರ ಗ್ರಾಮದಲ್ಲಿ ಟೋಲ್ ಪ್ಲಾಜಾ ನಿರ್ಮಾಣವಾಗಲಿದೆ. ಈ ಪ್ಯಾಕೇಜ್‌ಗೂ ₹ 1331.77 ಕೋಟಿ ಅಂದಾಜಿಸಲಾಗಿತ್ತು. ಇದೀಗ ಪರಿಷ್ಕೃತ ಅಂದಾಜಿನಲ್ಲಿ ₹ 2082.98 ಕೋಟಿ ನಿಗದಿ ಮಾಡಲಾಗಿದೆ ಎಂದರು.

ಹೆದ್ದಾರಿಗಳ ನಿರ್ಮಾಣದಿಂದ ದೇಶದ ಅಭಿವೃದ್ಧಿಗೆ ಹಾಗೂ ಪ್ರವಾಸೋಧ್ಯಮಕ್ಕೆ ಅನುಕೂಲವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅವರ ಕನಸಿನಂತೆ ಈ ಯೋಜನೆಗೆ ಅನುಮೋದನೆ ನೀಡಲು ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮ್‌ ಸಹಕರಿಸಿದ್ದಾರೆ. ಕೇಂದ್ರ ಸರ್ಕಾರದಿಂದ ಪರಿಷ್ಕೃತ ಅಂದಾಜಿಗೆ ಅನುಮೋದನೆ ದೊರಕಿಸಿಕೊಟ್ಟ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ಅಗತ್ಯ ಪ್ರಸ್ತಾವನೆ ಸಲ್ಲಿಸುವಲ್ಲಿ ಸಹಕರಿಸಿದ ಅಪರ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿ ಅವರ ಸಹಕಾರವನ್ನು ಸ್ಮರಿಸಿದರು.

ತುಮಕೂರಿನಿಂದ ಶಿವಮೊಗ್ಗದವರೆಗೂ ಸಿಗುವ ಪ್ರಮುಖ ನಗರಗಳಲ್ಲಿ ಹೊರವಲಯ ರಸ್ತೆಗಳು ನಿರ್ಮಾಣವಾಗುವ ಕಾರಣ ಸಂಚಾರದ ಸಮಯ ಗಣನೀಯವಾಗಿ ಉಳಿತಾಯವಾಗಲಿದೆ. ಜಿಲ್ಲೆಯ ಕೈಗಾರಿಕೆಗಳ ಅಭಿವೃದ್ಧಿಗೆ, ಪ್ರವಾಸೋದ್ಯಮದ ಪ್ರಗತಿಗೆ ಈ ಹೆದ್ದಾರಿ ವರದಾನವಾಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT