ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಭಾಗಕ್ಕಿಲ್ಲ ‘ಬಸ್ ಭಾಗ್ಯ’

ಕಾಡಿನ ದಾರಿಯಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ವಿದ್ಯಾರ್ಥಿಗಳ ಕಾಲ್ನಡಿಗೆ
Last Updated 28 ಜನವರಿ 2021, 3:09 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಕೊರೊನಾ ಕಾರಣ ಸ್ಥಗಿತಗೊಂಡಿದ್ದ ಶಾಲೆ, ಕಾಲೇಜುಗಳು ಆರಂಭವಾಗಿದ್ದರೂ ಗ್ರಾಮಾಂತರ ಭಾಗದ ವಿದ್ಯಾರ್ಥಿಗಳಿಗೆ ಶಾಲೆ, ಕಾಲೇಜಿಗೆ ತೆರಳಲು ಬಸ್‌ ಸೌಲಭ್ಯ ಮಾತ್ರ ಆರಂಭವಾಗಿಲ್ಲ.

ವಿದ್ಯಾರ್ಥಿಗಳು ಕಾಡುದಾರಿಯಲ್ಲಿ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸಾರಿಗೆ ಸೌಕರ್ಯವಿಲ್ಲದೇ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಶಾಲಾ, ಕಾಲೇಜಿನಿಂದ ಮನೆ ತಲುಪಲು ಕಾಡು ಹಾದಿಯಲ್ಲಿ ಸುಮಾರು 10 ಕಿ.ಮೀ. ಕಾಲ್ನಡಿಗೆಯಲ್ಲಿ ಕ್ರಮಿಸಬೇಕಾಗಿದೆ.

8 ತಿಂಗಳಿನಿಂದ ತಾಲ್ಲೂಕಿನ ದೇಮ್ಲಾಪುರ-ಹುಂಚದಕಟ್ಟೆ, ಕೋಣಂದೂರು ಮಾರ್ಗ, ಬಾಳಗಾರು-ಮಹಿಷಿ-ದಬ್ಬಣಗದ್ದೆ ಮಾರ್ಗ, ಆಗುಂಬೆ-ಮಲ್ಲಂದೂರು-ಆಲಗೇರಿ ಮಾರ್ಗ, ಕಟ್ಟೆಹಕ್ಕಲು-ಮೃಗವಧೆ, ಶೇಡ್ಗಾರು-ಸಾಲ್ಗಡಿ ಮಾರ್ಗ, ಬಾಂಡ್ಯ-ಕುಕ್ಕೆ-ಬೆಜ್ಜವಳ್ಳಿ-ದತ್ತರಾಜಪುರ-ಸಾಲೇಕೊಪ್ಪ ಮಾರ್ಗ, ಸಾಲೂರು-ಕೊಂಡ್ಲೂರು ಮಾರ್ಗ, ಆಗುಂಬೆ-ಮಲ್ಲಂದೂರು-ಹೊನ್ನೇತಾಳು-ಶೀರೂರು ಮಾರ್ಗ, ದೇಮ್ಲಾಪುರ-ಯೋಗಿಮಳಲಿ–ಕಾರಕೋಡ್ಲು-ಮಳಲೀಮಕ್ಕಿ-ಆಲೂರು ಹೊಸಕೊಪ್ಪ-ಹುತ್ತಳ್ಳಿ ಮಾರ್ಗ ಸೇರಿ ಬಹುತೇಕ ಕಡೆಗೆ ಬಸ್ ಸೌಲಭ್ಯ ಇಲ್ಲದಂತಾಗಿದೆ.

ಪ್ರತಿ ನಿತ್ಯ ವಿದ್ಯಾರ್ಥಿಗಳು ಸುಮಾರು 8ರಿಂದ 10 ಕಿ.ಮೀ. ದೂರ ಕಾಲ್ನಡಿಗೆ ಮೂಲಕ ಕಾಡುದಾರಿಯಲ್ಲಿ ಕ್ರಮಿಸಿ
ಮುಖ್ಯ ರಸ್ತೆ ತಲುಪಿ ಶಾಲಾ, ಕಾಲೇಜಿಗೆ ಹೋಗಬೇಕಿದೆ. ಮಂಗನ ಕಾಯಿಲೆ ಪ್ರತಿ ಬೇಸಿಗೆಯಲ್ಲಿ ತೀವ್ರವಾಗಿ ಬಾಧಿಸುವ ಪ್ರದೇಶಗಳಿಗೂ ಬಸ್ ಸೌಕರ್ಯವನ್ನು ನೀಡದೇ ಗ್ರಾಮೀಣ ಭಾಗದ ಜನರನ್ನು ನಿರ್ಲಕ್ಷಿಸಲಾಗಿದೆ ಎಂಬುದು ಸ್ಥಳೀಯರ ಆರೋಪ.

ಗ್ರಾಮೀಣ ಭಾಗಕ್ಕೆ ಬಸ್ ಸೌಕರ್ಯ ಇಲ್ಲದೇ ಇರುವುದರಿಂದ ಕೆಲ ಪೋಷಕರಿಗೆ ಮಕ್ಕಳನ್ನು ಪ್ರತಿ ನಿತ್ಯ ಮುಖ್ಯ ರಸ್ತೆಗೆ ದ್ವಿಚಕ್ರ ವಾಹನದಲ್ಲಿ ಬಿಟ್ಟು ಸಂಜೆ ವಾಪಸ್‌ ಕೆರೆದುಕೊಂಡು ಹೋಗುವುದೇ ಕೆಲಸವಾಗಿದೆ. ಬೈಕ್‌ ಇಲ್ಲದಿದ್ದವರ ಮಕ್ಕಳು ನಡೆದುಕೊಂಡು ಹೋಗಬೇಕಾಗಿದೆ ಎನ್ನುತ್ತಾರೆ ರೈತ ಮುಖಂಡ ಕೃಷ್ಣಪ್ಪ ಕೊರೋಡಿ.

‘ಮಲೆನಾಡಿನ ಕಾಡಿನ ನಡುವೆ ವಿದ್ಯಾರ್ಥಿನಿಯರು ಪ್ರತಿ ನಿತ್ಯ ಕಾಲ್ನಡಿಗೆಯಲ್ಲಿ ಶಾಲೆಗೆ ಹೋಗಬೇಕಿದ್ದು, ಸುರಕ್ಷತೆಯ ದೃಷ್ಟಿಯಿಂದ ಕಷ್ಟ ಎಂಬ ಕಾರಣಕ್ಕೆ ಕೆಲ ಹೆಣ್ಣು ಮಕ್ಕಳು ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದಾರೆ. ಮಳೆಗಾಲದಲ್ಲಿ ಶಾಲಾ, ಕಾಲೇಜಿಗೆ ಹೋಗುವುದು ಕಷ್ಟವಾಗಿದೆ. ನಮ್ಮ ಭಾಗಕ್ಕೆ ಬಸ್‌ ಸೌಕರ್ಯ ಕಲ್ಪಿಸಬೇಕು’ ಎಂದು ಒತ್ತಾಯಿಸುತ್ತಾರೆ ವಿದ್ಯಾರ್ಥಿ
ಪ್ರಸನ್ನಕುಮಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT