ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ತುಂಗಾ ತೀರಕ್ಕೆ ಸಾಬರಮತಿ ಸ್ಪರ್ಶ, ಒಡಲಿಗೆ ಕಲ್ಮಶ

ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿ ನದಿ ತಟ, ಸಕಲ ಮೂಲ ಸೌಕರ್ಯ ಅನುಷ್ಠಾನ
Last Updated 24 ಡಿಸೆಂಬರ್ 2021, 2:29 IST
ಅಕ್ಷರ ಗಾತ್ರ

ಶಿವಮೊಗ್ಗ: ನಗರದ ಮಧ್ಯೆ ಹಾದುಹೋಗಿರುವ ತುಂಗಾ ನದಿಯ ಉತ್ತರ ತಟವನ್ನು ಗುಜರಾತ್‌ನ ಸಾಬರಮತಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ನದಿ ತೀರ ಅಂದವಾಗುತ್ತಿದ್ದರೂ, ನಗರದ ಕಲ್ಮಶ ನದಿ ಒಡಲನ್ನು ಕಲುಷಿತಗೊಳಿಸುತ್ತಿದೆ.

ಸ್ಮಾರ್ಟ್‌ ಸಿಟಿ ಯೋಜನೆಯ ಆರಂಭದಲ್ಲಿ ₹ 130 ಕೋಟಿ ವೆಚ್ಚದಲ್ಲಿ ನದಿ ತೀರ ಅಭಿವೃದ್ಧಿ ಪಡಿಸಲು ಯೋಚಿಸಲಾಗಿತ್ತು. ನಂತರ ಈ ಬಜೆಟ್‌ ₹ 103.22 ಕೋಟಿಗೆ ನಿಗದಿಯಾಯಿತು. ಈ ಮೊತ್ತದಲ್ಲಿ ₹ 80.79 ಕೋಟಿ ಕಾಮಗಾರಿ, ಉಳಿದ ಹಣ 10 ವರ್ಷಗಳ ನಿರ್ವಹಣಾ ವೆಚ್ಚ, ಹೈದರಾಬಾದ್‌ ಮೂಲದ ಕೆಎಂಬಿ ಪ್ರಾಜೆಕ್ಟ್‌ ಲಿಮಿಟೆಡ್‌ ಕಂಪನಿ ಕಾಮಗಾರಿ ಗುತ್ತಿಗೆ ಪಡೆದಿದೆ.

ಹೊರವಲಯ ರಸ್ತೆಯ ಹೊಸ ಸೇತುವೆಯಿಂದ ಹೊಳೆ ನಿಲ್ದಾಣದ ಬೆಕ್ಕಿನ ಕಲ್ಮಠದವರೆಗೆ 2.7 ಕಿ.ಮೀ. ಅಭಿವೃದ್ಧಿಪಡಿಸಲಾಗುತ್ತಿದೆ. ಒಟ್ಟು 6.5 ಹೆಕ್ಟೇರ್ ವ್ಯಾಪ್ತಿಯಲ್ಲಿ ವಿವಿಧ ಜಲ ಕ್ರೀಡಾ ಚಟುವಟಿಕೆ, ವಾಯುವಿಹಾರ ಪಥ, ವಾಣಿಜ್ಯ ಸಂಕೀರ್ಣಗಳು, ಸೈಕಲ್ ಟ್ರ್ಯಾಕ್, ಮಾಹಿತಿ ಕೇಂದ್ರ, ಗಣಪತಿ ವಿಸರ್ಜನೆಯ ತಾಣ, ಬಯಲು ರಂಗಮಂದಿರ, ವೀಕ್ಷಣಾ ಗೋಪುರ, ಮಕ್ಕಳ ಆಟಿಕೆ ತಾಣಗಳು, ಉದ್ಯಾನ, ಶಿವಮೊಗ್ಗ ನಗರದ ಇತಿಹಾಸ ಬಿಂಬಿಸುವ ಗೋಡೆ ಚಿತ್ರಗಳು, ಬೆಳಕಿನ ವ್ಯವಸ್ಥೆ, ದಾಟು ಸೇತುವೆ, ಜಿಮ್ ಸೌಲಭ್ಯ ಒದಗಿಸಲಾಗುತ್ತಿದೆ. ಸಾಬರಮತಿ ಸೇರಿ ಹಲವು ಪ್ರಸಿದ್ಧ ನಗರಗಳ ಮಾದರಿಯ ಸ್ಪರ್ಶ ನೀಡುವ ಕಾರ್ಯ ಭರದಿಂದ ಸಾಗಿದೆ.

ಐದು ವರ್ಷಗಳ ಹಿಂದೆಯೇ ತಡೆಗೋಡೆ: ಐದು ವರ್ಷಗಳ ಹಿಂದೆ ನದಿ ಪ್ರವಾಹದ ಪರಿಣಾಮವಾಗಿ ಕುಂಬಾರಗುಂಡಿ, ಸೀಗೆಹಟ್ಟಿ, ಇಮಾಂಬಾಡ, ಮಂಡಕ್ಕಿಭಟ್ಟಿ, ಮುರಾದ್‌ ನಗರ, ಸೀಗೆಹಟ್ಟಿ, ಮದಾರಿಪಾಳ್ಯ, ಬಿ.ಬಿ. ರಸ್ತೆ ಮತ್ತಿತರ ಭಾಗಗಳ ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತಿತ್ತು. ಕೆಲವು ಭಾಗಗಳಲ್ಲಿ ನೀರಿನ ಕೊರೆತದಿಂದ ದಂಡೆ ಕಳಚಿ ಬೀಳುತ್ತಿತ್ತು. ಹೆಚ್ಚಿನ ಮಳೆ ಸುರಿದ ಎಲ್ಲ ವರ್ಷಗಳಲ್ಲೂ ಇದೇ ಗೋಳು ಸಾಮಾನ್ಯವಾಗಿತ್ತು. ಅದಕ್ಕಾಗಿ ಸಣ್ಣ ನೀರಾವರಿ ಇಲಾಖೆಯ ₹ 66 ಕೋಟಿ ಅನುದಾನದಲ್ಲಿ ಸವಾಯಿ ಪಾಳ್ಯದ ಹೊಸ ಸೇತುವೆಯಿಂದ ಹಳೇ ಸೇತುವೆಯವರೆಗೆ ನದಿಯ ಉತ್ತರದ ದಂಡೆಯ ಉದ್ದಕ್ಕೂ 2.7 ಕಿ.ಮೀ. ಕಾಂಕ್ರೀಟ್ ತಡೆಗೋಡೆ ನಿರ್ಮಿಸಲಾಗಿತ್ತು. ಈಗ ಅದೇ ತಡೆಗೋಡೆ ಬಳಸಿಕೊಂಡು ನದಿ ತೀರವನ್ನು ಜಿಲ್ಲೆಯ ಪ್ರಮಖ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.

11 ಪ್ರವೇಶ ದ್ವಾರಗಳು: ಸಾರ್ವಜನಿಕರು ನದಿ ತೀರ ಪ್ರವೇಶಿಸಲು 11 ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗುತ್ತಿದೆ. ಪ್ರವೇಶ ದರ ನಿಗದಿ ಮಾಡಲಾಗುತ್ತಿದೆ. ತೀರದ ಉದ್ದಕ್ಕೂ ಇರುವ ಸ್ಥಳೀಯರೂ ಹಣ ತೆತ್ತು ಒಳ ಪ್ರವೇಶಿಸಬೇಕಿದೆ.

ನದಿಗೆ ತಾಗಿಕೊಂಡಂತೆಪ್ಲಾಂಟರ್ ಬಾಕ್ಸ್‌ಗಳನ್ನು ಅಳವಡಿಸಲಾಗಿದೆ. ಸಿಮೆಂಟ್‌ನಿಂದ ನಿರ್ಮಿಸಿದ ಈ ಬಾಕ್ಸ್ ಒಳಗೆ ವಿವಿಧ ಜಾತಿಯ ಸಸ್ಯ, ಬಳ್ಳಿಗಳನ್ನು ಬೆಳೆಸಲಾಗುತ್ತಿದೆ. ಶಿವಪ್ಪ ನಾಯಕ ಅರಮನೆ ಆವರಣದ ಮಾದರಿಯಲ್ಲಿ ಪ್ರತಿ 10 ಮೀಟರ್‌ಗೆ ಒಂದು ಆಕರ್ಷಕ ದೀಪದ ಕಂಬ ನಿಲ್ಲಿಸಲಾಗಿದೆ. 400 ಕಂಬಗಳಲ್ಲಿ 200 ಕಂಬಗಳಿಗೆ ವಿದ್ಯುತ್ ದೀಪ ಅಳವಡಿಸಲಾಗುತ್ತಿದೆ. ತೀರದ ಮೂರು ಕಡೆ ಶೌಚಾಲಯ, ನಾಲ್ಕು ಕಡೆ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಬಯಲು ರಂಗಮಂದಿರ‌, ರೆಸ್ಟೋರೆಂಟ್, ಸಭೆ–ಸಮಾರಂಭಗಳಿಗೆ ಸ್ಥಳಾವಕಾಶ, ವಾಲಿಬಾಲ್, ಬಾಸ್ಕೆಟ್ ಬಾಲ್ ಕೋರ್ಟ್‌ಗಳು, ಒಳಾಂಗಣ ಕ್ರೀಡಾಂಗಣಗಳು ತಲೆಎತ್ತುತ್ತಿವೆ. ನದಿ ವೀಕ್ಷಣೆಗೆ ವೀಕ್ಷಣಾ ಗೋಪುರ ನಿರ್ಮಿಸಲಾಗುತ್ತಿದೆ. ನದಿ ತೀರದಲ್ಲೇ ಕುಳಿತು ಜನರು ಊಟ ಮಾಡಲು, ಉಪಾಹಾರ ಸೇವಿಸಲು ವಿಶ್ರಾಂತಿ ತಾಣಗಳನ್ನು
ಕಟ್ಟಲಾಗಿದೆ.

ನದಿ ಒಡಲು ಸೇರುವ ಕಲ್ಮಶಕ್ಕೆ ಬೇಸಿಗೆಯಲ್ಲಿ ತಡೆ: ನದಿ ತೀರದ 2.7 ಕಿ.ಮೀನಲ್ಲಿ 7 ಕಡೆ ನಗರದ ರಾಜಕಾಲುವೆಗಳ ಮಲಿನ ನೀರು ನದಿ ಒಡಲು ಸೇರುತ್ತಿದೆ. ಬೇಸಿಗೆಯಲ್ಲಿ ನದಿ ನೀರು ಕಡಿಮೆ ಇರುವ ಕಾರಣ ಕಲ್ಮಶದ ವಾಸನೆ ಹೆಚ್ಚಾಗಿರುತ್ತದೆ. ಹಾಗಾಗಿ,
ಬೇಸಿಗೆ ಸಮಯದಲ್ಲಿ ಕಲ್ಮಶವನ್ನು ಶುದ್ಧೀಕರಣ ಘಟಕದತ್ತ ತಿರುಗಿಸಲು ಯೋಜನೆ ರೂಪಿಸಲಾಗುತ್ತಿದೆ. ಮಳೆಗಾಲದಲ್ಲಿ ನೇರ ನದಿಗೆ ಬಿಡುವ ಚಿಂತನೆ ನಡೆದಿದೆ.

ಸವಾಯಿಪಾಳ್ಯ, ಕುರುಬರ ಪಾಳ್ಯ, ಕುಂಬಾರಗುಂಡಿ, ಸೀಗೆಹಟ್ಟಿ, ಮಂಡಕ್ಕಿ ಬಟ್ಟಿ, ಮದಾರಿ ಪಾಳ್ಯ, ಬಿ.ಬಿ. ರಸ್ತೆ, ಮಲ್ಲೇಶ್ವರ ನಗರ, ಗುಂಡಪ್ಪಶೆಡ್, ಪಂಚವಟಿ ಕಾಲೊನಿ, ಎಂ.ಕೆ.ಕೆ. ರಸ್ತೆ, ಗಾಂಧಿ ಬಜಾರ್, ಪೆನ್ಷನ್ ಮೊಹಲ್ಲಾ, ಓಲ್ಡ್ ಬಾರ್ ಲೈನ್ ರಸ್ತೆ, ಕೋಟೆ ರಸ್ತೆ ಯುಜಿಡಿ ತ್ಯಾಜ್ಯಗಳು ನೇರವಾಗಿ ನದಿಯ ಒಡಲು ಸೇರುತ್ತವೆ. ನದಿ ತಟದ ಅಂದಕ್ಕೆ ಒತ್ತು ನೀಡಿರುವ ಸ್ಮಾರ್ಟ್‌ ಸಿಟಿ ಅಧಿಕಾರಿಗಳು ನದಿ ಒಡಲು ಸೇರುವ ಕಲ್ಮಶ ತಡೆಗೆ ಮಹತ್ವ ನೀಡದಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ನದಿ ತೀರವೇ ಒತ್ತುವರಿ:

ನದಿಯ ಉತ್ತರ ತಟದಲ್ಲಿ ತಡೆಗೋಡೆ, ಪಾದಚಾರಿ ಮಾರ್ಗ ನಿರ್ಮಿಸುವಾಗ ನದಿಯ ಜಾಗವನ್ನೇ ಬಳಕೆ ಮಾಡಲಾಗಿದೆ. 2.7 ಕಿ.ಮೀ. ದೂರದವರೆಗೂ ಸ್ಥಳೀಯರು ಸುಮಾರು 100–200 ಅಡಿ ನದಿ ಜಾಗ ಒತ್ತುವರಿ ಮಾಡಿದ್ದಾರೆ. ಒತ್ತುವರಿ ತೆರವುಗೊಳಿಸದೇ ಈಗ ಇರುವ ಹಾಗೆಯೇ ಅಭಿವೃದ್ಧಿ ಮಾಡಲಾಗುತ್ತಿದೆ. ಇದರಿಂದ ಕೆಲವು ಭಾಗಗಳಲ್ಲಿ ನದಿ ಪತ್ರ ಅಗಲವಾಗಿದ್ದರೆ, ಕೆಲವು ಭಾಗಗಳಲ್ಲಿ ತೀರ ಚಿಕ್ಕದಾಗಿದೆ.

ದಕ್ಷಿಣ ತೀರ ಕಡೆಗಣನೆ

ಉತ್ತರ ತೀರದಲ್ಲಿ ತಡೆಗೋಡೆ ನಿರ್ಮಿಸಿದ್ದರೂ, ದಕ್ಷಿಣ ಭಾಗದಲ್ಲಿ ತಡೆಗೋಡೆ ಇಲ್ಲ. ಉತ್ತರ ತೀರ ಎತ್ತರವಾಗಿರುವ ಕಾರಣ ನದಿ ನೀರು ಸಹಜವಾಗಿ ದಕ್ಷಿಣ ಭಾಗದ ಬಡಾವಣೆಗಳಿಗೆ ನುಗ್ಗುತ್ತದೆ. ಶಾಂತಮ್ಮ ಲೇಔಟ್‌, ರಾಜೀವ್‌ ಗಾಂಧಿ ಬಡಾವಣೆ, ವಿದ್ಯಾನಗರ, ಗುರುಪುರ, ಚಿಕ್ಕಲ್‌ ಪ್ರದೇಶಗಳು ಮಳೆಗಾಲದಲ್ಲಿ ನದಿ ಪ್ರವಾಹಕ್ಕೆ ಜಲಾವೃತವಾಗುತ್ತವೆ.

ತುಂಗಾ ನದಿ ತೀರದ ಬಳಿ ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ. ನದಿ ಒಡಲು ಸೇರುವ ಕಲ್ಮಶ ತಡೆಗೆ ಪಾಲಿಕೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಿದೆ. ಅದಕ್ಕಾಗಿ ಹಲವು ಸುತ್ತಿನ ಸಭೆ ನಡೆಸಲಾಗಿದೆ.

- ಗನ್ನಿ ಶಂಕರ್,ಉಪ ಮೇಯರ್, ನಗರ ಪಾಲಿಕೆ.

ನದಿ ತೀರದ ಅಭಿವೃದ್ಧಿ ಉತ್ತಮ ಯೋಜನೆ. ಆದರೆ, ಅನುಷ್ಠಾನದಲ್ಲೇ ನ್ಯೂನತೆಗಳಿವೆ. ನದಿ ತೀರ ಒತ್ತುವರಿ ಮಾಡಿದ ಬಡವರನ್ನು ಒಕ್ಕಲೆಬ್ಬಿಸಿದ ಪಾಲಿಕೆ ಆಡಳಿತ ಶ್ರೀಮಂತರ ಕಟ್ಟಡಗಳ ತೆರವಿಗೆ ಮನಸ್ಸು ಮಾಡಲಿಲ್ಲ. ನದಿ ಒಡಲು ಸೇರುವ ಕಲ್ಮಶ ತಡೆಗೆ ಸೂಕ್ತ ಕ್ರಮ ಕೈಗೊಂಡಿಲ್ಲ. ಬೇಸಿಗೆಯಲ್ಲಿ ನೀರಿಲ್ಲದ ನದಿಯಲ್ಲಿ ಹೇಗೆ ಬೋಟಿಂಗ್ ನಡೆಸುತ್ತಾರೆ ಎಂಬುದಕ್ಕೆ ಉತ್ತರವಿಲ್ಲ.

- ನಾಗರಾಜ ಕಂಕಾರಿ,​ಮಾಜಿ ಮೇಯರ್, ನಗರ ಪಾಲಿಕೆ.

ಉತ್ತರ ತೀರ ಅಭಿವೃದ್ಧಿ ಮಾಡುತ್ತಿರುವುದು ಸ್ಥಳೀಯರಿಗೆ ಪ್ರಯೋಜನವಿಲ್ಲ. ಪ್ರವಾಸಿಗರ ಜಂಗುಳಿಯಿಂದ ತೊಂದರೆಯೇ ಹೆಚ್ಚು. ಸ್ಥಳೀಯರೂ ಹಣ ನೀಡಿ ಒಳಗೆ ಹೋಗಬೇಕಿರುವುದು ನಮ್ಮ ದುರದೃಷ್ಟ.

- ಇನಾಯತ್ ಉಲ್ಲಾ, ಇಮಾಂಬಾಡ.

ನದಿ ತೀರದ ಉದ್ದಕ್ಕೂ 400 ಆಕರ್ಷಕ ದೀಪದ ಕಂಬಗಳನ್ನು ಅಳವಡಿಸಲಾಗುತ್ತಿದೆ. ಎಲ್ಲ ಕಾಮಗಾರಿ ಪೂರ್ಣಗೊಂಡರೆ ವಿದ್ಯುತ್‌ ದೀಪದ ಬೆಳಕಿನಲ್ಲಿ ನದಿ ತಟ ನೋಡುವುದೇ ಚಂದ.

- ನಾಗರಾಜ್‌, ಕೆತ್ತನೆ ಕೆಲಸಗಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT