ಶುಕ್ರವಾರ, ಸೆಪ್ಟೆಂಬರ್ 24, 2021
27 °C

ಶಿವಮೊಗ್ಗ: ​ನಾಳೆಯಿಂದ ಪವಿತ್ರ ವಸ್ತ್ರ ಅಭಿಯಾನ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಸಾಗರ ತಾಲ್ಲೂಕು ಭೀಮನಕೋಣೆಯ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘ ಸೆ.6 ರಿಂದ ಒಂದು ತಿಂಗಳು ರಾಜ್ಯದ ವಿವಿಧೆಡೆ ಕೈ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟಕ್ಕೆ 'ಪವಿತ್ರ ವಸ್ತ್ರ ಅಭಿಯಾನ' ಹಮ್ಮಿಕೊಂಡಿದೆ.

ಸಂಘದ ಅಸಾಧಾರಣಾ ಸಾಧನೆ ಗುರುತಿಸಿ, ಉದ್ಯೋಗಾವಕಾಶ ದೊರಕಿಸಲು ರಾಜ್ಯ ಸರ್ಕಾರ ₹ 33 ಲಕ್ಷ  ಅನುದಾನ ಘೋಷಣೆ ಮಾಡಿತ್ತು. 3 ವರ್ಷಗಳ ಹಿಂದೆ ಬ್ಯಾಂಕಿಗೆ ಹಣ ಸಂದಾಯವಾಗಿತ್ತು. ಈ ಹಣ ಪಡೆಯಲು ಸಾಕಷ್ಟು ಬಾರಿ ಅಲೆದಾಡಿದರೂ ಪ್ರಯೋಜನವಾಗಲಿಲ್ಲ. ಎಲ್ಲ ಹಣವನ್ನೂ ದಾಖಲೆ ಸಮೇತ ವಾಪಸ್‌ ನೀಡಿದ್ದೇವೆ. ಸಂಘದಿಂದ ₹ 60 ಲಕ್ಷ ವೆಚ್ಚದಲ್ಲಿ ಉತ್ಪಾದಿಸಿದ ಉತ್ಪನ್ನಗಳನ್ನು ಮಾರಾಟ ಮಾಡಿ ಹಣ ಮರುಪಡೆಯಲು ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಕಾರ್ಯದರ್ಶಿ ಪ್ರತಿಭಾ ರಾಘವೇಂದ್ರ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರೈತರು, ಕುಶಲಕರ್ಮಿಗಳು ಹಾಗೂ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಕೋವಿಡ್ ನಂತರವಂತೂ ಮಗ್ಗಗಳು, ಕಾರ್ಯಾಗಾರಗಳು, ಸಣ್ಣ ಕೈಗಾರಿಕೆಗಳು ನಿಂತು ಹೋಗಿವೆ. ಲಕ್ಷಾಂತರ ಮೀಟರ್‌ ಬಟ್ಟೆ, ಸೀರೆ, ಚಾಪೆ, ಮಡಕೆ ಇತ್ಯಾದಿ ಸುಂದರ ವಸ್ತುಗಳು ಮಾರಾಟವಾಗದೆ ಉಳಿದಿವೆ. ಸರ್ಕಾರ ಸಹಾಯಹಸ್ತ ಚಾಚುತ್ತಿಲ್ಲ. ಚಾಚಿದಾಗಲೂ ಫಲಾನುಭವಿಗಳನ್ನು ತಲುಪುತ್ತಿಲ್ಲ ಎಂದು ದೂರಿದರು.

ಸಂಕಷ್ಟದ ಪರಿಸ್ಥಿತಿಯಲ್ಲಿ ಗ್ರಾಹಕರು ಕಾಯಕದ ಮಹಾನ್ ಮರಂಪರೆ ಉಳಿಸಬಲ್ಲರು. ಮಾರಾಟದಲ್ಲಿ ನೈಸರ್ಗಿಕ ಬಣ್ಣ ಹಾಕಿದ ಪರಿಶುದ್ಧ ಹತ್ತಿ ಕೈಮಗ್ಗದ ಉತ್ಪನ್ನಗಳು ಹಾಗೂ ಇತರೆ ಕೈ ಉತ್ಪನ್ನಗಳು ಇರುತ್ತವೆ. ರಾಜ್ಯದ ಹೆಸರಾಂತ ಕೈಮಗ್ಗ ಹಾಗೂ ಕರಕುಶಲ ಸಂಸ್ಥೆಗಳು ಅಭಿಯಾನದಲ್ಲಿ ಭಾಗವಹಿಸಲಿವೆ. ರಾಜ್ಯದ ಪ್ರಮುಖ ಮಠಗಳು, ಸ್ವಾಮೀಜಿಗಳು ಕೈಉತ್ಪನ್ನಗಳನ್ನು ಕೊಂಡುಕೊಳ್ಳಲು ಭರವಸೆ ನೀಡಿದ್ದಾರೆ ಎಂದರು.

ಈ ಅಭಿಯಾನ ಶಿವಮೊಗ್ಗದಿಂದಲೇ ಆರಂಭವಾಗಲಿದೆ. ದುರ್ಗಿಗುಡಿಯ ಕಟೀಲ್ ಅಶೋಕ್ ಪೈ ಮೆಮೋರಿಯಲ್ ಇನ್ ಸ್ಟಿಟ್ಯೂಟ್‌ನಲ್ಲಿ ಸೆ. 6ರಂದು ಸಂಜೆ 6ರಿಂದ ರಾತ್ರಿ 10 ರ ವರೆಗೆ ಮತ್ತು 7ರಂದು ಬೆಳಗ್ಗೆ 10ರಿಂದ ಸಂಜೆ 6ವರೆಗೆ ಉತ್ನನ್ನಗಳ ಪ್ರದರ್ಶನ ಹಾಗೂ ಮಾರಾಟ ಇರುತ್ತದೆ ಎಂದು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾರುಕಟ್ಟೆ ವ್ಯವಸ್ಥಾಪಕಿ ಪದ್ಮಶ್ರೀ, ಸಾಮಾಜಿಕ ಕಾರ್ಯದರ್ಶಿ ಮಹಾಲಕ್ಷ್ಮಿ, ಸಂಧ್ಯಾ ಕಾವೇರಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.