ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ರಾಂತಿ ಎಂದರೆ ಸಮೃದ್ಧಿ: ಮೋಹನ್ ಚಂದ್ರಗುತ್ತಿ

Last Updated 14 ಜನವರಿ 2023, 6:22 IST
ಅಕ್ಷರ ಗಾತ್ರ

ಶಿವಮೊಗ್ಗ: ಬೆಳೆದ ಬೆಳೆಯನ್ನು ಮನುಷ್ಯ ಒಬ್ಬನೇ ಭಕ್ಷಣೆ ಮಾಡದೆ, ಪ್ರಕೃತಿಯೊಂದಿಗೆ ಹಂಚಿ ತಿನ್ನುವ ದ್ಯೋತಕವಾಗಿ ಅದೇ ಕಾರಣಕ್ಕೆ ಸುಗ್ಗಿ ಹಬ್ಬ ಆಚರಣೆಗೆ ಬಂತು ಎಂದು ಸಹ್ಯಾದ್ರಿ ಕಲಾ ಕಾಲೇಜು ಸಹ ಪ್ರಾಧ್ಯಾಪಕ ಮೋಹನ್ ಚಂದ್ರಗುತ್ತಿ ತಿಳಿಸಿದರು.

ಇಲ್ಲಿನ ಕುವೆಂಪು ಶತಮಾನೋತ್ಸವ ಶಿಕ್ಷಣ ವಿದ್ಯಾಲಯದಲ್ಲಿ ಶುಕ್ರವಾರ ಸಂಕ್ರಾಂತಿ ಸುಗ್ಗಿ ಸಂಭ್ರಮ ಮತ್ತು ಸಾಂಪ್ರದಾಯಿಕ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯ ಸಂತೋಷ, ಸಂಭ್ರಮದಿಂದ ಇರುವಾಗ ಹಬ್ಬಗಳು ಸೃಷ್ಟಿಯಾದವು. ಆದಿ ಮನುಷ್ಯರು ಬದಲಾವಣೆ ಯುಗಕ್ಕೆ ಕಾಲಿಟ್ಟಂತೆ, ಆಹಾರ ಕೂಡಿಡುವ ಜೊತೆಗೆ ಭೇಟೆ ಆಡಲು ಆರಂಭಿಸಿದರು‌. ಬದುಕುತ್ತಿರುವ ನೆಲೆಯನ್ನು ವಾಸಸ್ಥಳ ಮಾಡಿಕೊಂಡು ಪಶುಸಂಗೋಪನೆ ಆರಂಭಿಸಿದರು. ಗುಹೆಯಿಂದ ಮುಂದುವರೆದು ಮನೆ ನಿರ್ಮಿಸಿಕೊಂಡು ಅಲ್ಲಿ ಪ್ರಾಣಿಗಳ ಸಾಕಲು ಆರಂಭಿಸಿದರು. ಅದೇ ಆಹಾರದ ಮೂಲವೂ ಆಯಿತು ಎಂದರು.

ಕಾಲ ಕಳೆದಂತೆ ಕೃಷಿ ಆರಂಭಿಸಿದರು. ಅದೇ ಕೃಷಿಯಿಂದ ಆಹಾರ ಬೆಳೆ ಬೆಳೆದು ಅದರಿಂದ ಹಸಿವು ನೀಗಿಸಿಕೊಳ್ಳುತ್ತಿದ್ದರು. ಜೊತೆಗಿರುವ ಸಂಗಡಿಗರಿಗೂ ಕೊಟ್ಟು ಹಬ್ಬದ ರೀತಿ ಸಂತೋಷ ಪಡುತ್ತಿದ್ದರು. ಆಗ ಜನ್ಮ ತಾಳಿದ್ದೇ ಈ ಸುಗ್ಗಿ ಸಂಭ್ರಮ ಎಂದರು.

ಸಂಕ್ರಾಂತಿ ಎಂದರೆ ಸಮೃದ್ಧಿಯ ಸಂಕೇತ. ಕೃಷಿಯ ಪ್ರತಿಯೊಂದು ಆಚರಣೆಗಳು ಮನುಷ್ಯನ, ಸಂವೇದನೆ, ಜೀವನ ಪ್ರೀತಿಯನ್ನು ತೋರುತ್ತದೆ. ಕೂರಿಗೆಯಲ್ಲಿ ಬೀಜ ಬಿತ್ತುವಾಗ ಪೂಜೆ ಸಲ್ಲಿಸಲಾಗುತ್ತದೆ. ಅದು ನಮ್ಮ ಸಂಸ್ಕೃತಿಯನ್ನು ತೋರುತ್ತದೆ ಎಂದರು.

ಕಾಲ ಬದಲಾದಂತೆ ನಮ್ಮ ಸಂವೇದನೆಗಳು ನಾಶವಾಗುತ್ತಿವೆ. ಒತ್ತಡದ ಜೀವನ ಶೈಲಿಯಲ್ಲಿ ಸಣ್ಣ ಆನಂದವನ್ನೂ ಅನುಭವಿಸುವ ಕ್ಷಣ ನಮ್ಮ ನಡುವೆ ಇಲ್ಲ. ಮನುಷ್ಯ ಬದುಕನ್ನು ವಿನಾಶದ ಅಂಚಿನಲ್ಲಿ ಕಟ್ಟಿಕೊಳ್ಳುತ್ತಿದ್ದಾನೆ ಎಂದರು.

ಗಾಯಕಿ ಸಾಧ್ವಿನಿ ಕೊಪ್ಪ ಅವರು ಮಾತನಾಡಿ, ‘ನಮ್ಮ ಸಂಸ್ಕೃತಿ, ಸಂಪ್ರದಾಯ ಉಳಿಸುವ ಕೆಲಸ ಆಗಬೇಕಿದೆ. ಅದು ಕೇವಲ ಆಚರಣೆಯಿಂದ ಮಾತ್ರ ಸಾಧ್ಯವಿಲ್ಲ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಾಧ್ಯ’ ಎಂದು ತಿಳಿಸಿದರು.

ಸಂಸ್ಕೃತಿಯನ್ನು ಉಳಿಸಲು ಮೊದಲು ಅಧ್ಯಯನಶೀಲರಾಗಬೇಕಿದೆ. ಅದಕ್ಕಾಗಿ ನಮ್ಮಲ್ಲಿ ಸಾಧಕರ ಮಹಾನ್ ಗ್ರಂಥಗಳಿವೆ. ಅವುಗಳ ಅಧ್ಯಯನ ಮಾಡುವುದು ಮುಖ್ಯ ಎಂದರು.

ಜಿಲ್ಲಾ ಒಕ್ಕಲಿಗ ಸಂಘದ ಅಧ್ಯಕ್ಷ ಎಚ್. ಬಿ ಆದಿಮೂರ್ತಿ, ಪ್ರಾಚಾರ್ಯ ಮಧು ಜಿ, ಸುಮಿತ್ರ ಕೇಶವಮೂರ್ತಿ, ಟಿ.ಪಿ ನಾಗೇಶ್, ಭಾರತಿ, ಪ್ರಫುಲ್ ಚಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT