ಮಂಗಳವಾರ, ಸೆಪ್ಟೆಂಬರ್ 27, 2022
27 °C

ಸಂತೆಕಡೂರು: ಪಂಚಾಯಿತಿ ಆವರಣದಲ್ಲಿ ಶವಸಂಸ್ಕಾರಕ್ಕೆ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ತಾಲ್ಲೂಕಿನ ಸಂತೆ ಕಡೂರಿನಲ್ಲಿ ಸ್ಮಶಾನ ಇಲ್ಲದ ಕಾರಣ ಗ್ರಾಮ ಪಂಚಾಯಿತಿ ಆವರಣದಲ್ಲೇ ಶವ ಸಂಸ್ಕಾರ ನಡೆಸಲು ಗ್ರಾಮಸ್ಥರು ಸಿದ್ಧತೆ ಮಾಡಿಕೊಂಡಿದ್ದರು. ವಿಷಯ ತಿಳಿದ ಗ್ರಾಮದ ಹಿರಿಯರು ಮುಂದಾಗಿ ಸಮಸ್ಯೆ ಪರಿಹರಿಸಿದರು.

ಸಂತೆಕಡೂರಿನ ಎ.ಕೆ.ಕಾಲೊನಿಯ ವೃದ್ಧೆ ರಂಗಮ್ಮ ಗುರುವಾರ ಮೃತಪಟ್ಟಿದ್ದರು. ಅವರ ಸಂಸ್ಕಾರಕ್ಕೆ ಜಾಗವಿಲ್ಲದ ಕಾರಣ ಶವವನ್ನು ಊರಿನವರು ಗ್ರಾಮ ಪಂಚಾಯ್ತಿ ಆವರಣಕ್ಕೆ ತಂದಿದ್ದರು. ಅಂಗಳದಲ್ಲಿಯೇ ಗುಂಡಿ ತೆಗೆದು ಅಂತ್ಯಕ್ರಿಯೆ ನೆರವೇರಿಸಲು ಮುಂದಾಗಿದ್ದರು.

ಸಂತೆ ಕಡೂರು ಗ್ರಾಮದಲ್ಲಿ ಸ್ಮಶಾನಕ್ಕೆಂದು ಮೂರು ಎಕರೆ ಜಾಗ ಮಂಜೂರಾಗಿತ್ತು. ಆದರೆ ಆ ಜಾಗದಲ್ಲಿ ಕೆಲವರು ಮನೆ ಕಟ್ಟಿಕೊಂಡಿದ್ದಾರೆ. ಉಳಿದ ಜಾಗವನ್ನು ಕಳೆದ ವಾರ ಸಮೀಕ್ಷೆ ಮಾಡಲು ಹೋದ ಸರ್ವೆ ಅಧಿಕಾರಿಗಳನ್ನು ಅಲ್ಲಿನ ಮನೆಯವರು ಪ್ರತಿಭಟನೆ ಮಾಡಿ ವಾಪಸ್ ಕಳುಹಿಸಿದ್ದಾರೆ. ಹೀಗಾಗಿ ಆ ಜಾಗ ವಿವಾದಾತ್ಮಕವಾಗಿ ಉಳಿದಿದೆ ಎಂದು ತಿಳಿದುಬಂದಿದೆ.

ಅದೇ ಜಾಗದಲ್ಲಿ ವೃದ್ಧೆ ರಂಗಮ್ಮನ ಶವ ಸಂಸ್ಕಾರ ನಡೆಸಲು ಕುಟುಂಬದವರು ಕೊಂಡೊಯ್ದಿದ್ದರು. ಆದರೆ ಆ ಜಾಗದಲ್ಲಿ ಶವಸಂಸ್ಕಾರಕ್ಕೆ ಅಲ್ಲಿನ ಕೆಲವರು ಅವಕಾಶ ನೀಡಿರಲಿಲ್ಲ. ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಗ್ರಾಮ ಪಂಚಾಯಿತಿ ಆವರಣದ ಒಳಗೆ ಗುಂಡಿ ತೆಗೆದು ಶವಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಆಗ ಗ್ರಾಮದ ಹಿರಿಯರು ಮಧ್ಯಪ್ರವೇಶಿಸಿ ವಿವಾದ ತಿಳಿಗೊಳಿಸಿದರು. ಅದೇ ಜಾಗದಲ್ಲಿ ಶವ ಸಂಸ್ಕಾರಕ್ಕೆ ಅವಕಾಶ ಮಾಡಿಕೊಟ್ಟು ತಾತ್ಕಾಲಿಕವಾಗಿ ಸಮಸ್ಯೆ ಪರಿಹರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು