ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರ: ಸೀರೆ ಮರೆಯಲ್ಲಿ ಶಾಲೆ ಶೌಚಾಲಯ

Last Updated 13 ಡಿಸೆಂಬರ್ 2022, 5:49 IST
ಅಕ್ಷರ ಗಾತ್ರ

ತುಮರಿ:ಸಮೀಪದ ಏಳಿಗೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂಲಸೌಲಭ್ಯ ಇಲ್ಲ. ಶೌಚಾಲಯ ಇಲ್ಲದ ಕಾರಣ ವಿದ್ಯಾರ್ಥಿನಿಯರು ಸೀರೆಯನ್ನು ಮರೆಯಾಗಿ ಕಟ್ಟಿಕೊಂಡು ಬಹಿರ್ದೆಸೆಗೆ ಹೋಗುವ ದುಃಸ್ಥಿತಿ ಇದೆ.

ಸಾಗರದಿಂದ 65 ಕಿ.ಮೀ ದೂರದ ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಗ್ರಾಮ ಏಳಿಗೆ. ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಶಿಷ್ಟ ಪಂಗಡದ ಹಸಲರ ವಿದ್ಯಾರ್ಥಿಗಳೇ ಹೆಚ್ಚಿದ್ದಾರೆ. 2022–23ನೇ ಸಾಲಿನಲ್ಲಿ 13 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ.

ಶೌಚಾಲಯ, ಕುಡಿಯುವ ನೀರು ಸೇರಿದಂತೆ ಶಾಲೆಯಲ್ಲಿ ಯಾವುದೇಮೂಲಸೌಲಭ್ಯ ಇಲ್ಲ. ಅಂತೆಯೇವಿದ್ಯಾರ್ಥಿಗಳ ಸಂಕಷ್ಟವಂತೂ ಹೇಳತೀರದು. ಶಾಲೆಯಲ್ಲಿದ್ದಶೌಚಾಲಯ ಶಿಥಿಲಗೊಂಡಿದ್ದು, ಬಾಗಿಲು ಇಲ್ಲ. ವಿದ್ಯಾರ್ಥಿನಿಯರು ಹರಿದ ಸೀರೆಯನ್ನು ಮರೆಯಾಗಿ ಕಟ್ಟಿಕೊಂಡು ಆದರಾಚೆ ಬಯಲು ಶೌಚಾಲಯಕ್ಕೆ ಹೋಗುವ ಅನಿವಾರ್ಯತೆ ಎದುರಾಗಿದೆ.

ಶೌಚಾಲಯ ನಿರ್ಮಾಣಕ್ಕೆ ಅನುದಾನ ಮಂಜೂರಾತಿಯಾದರೂ, ಸ್ಥಳೀಯಾಡಳಿತದ ನಿರ್ಲಕ್ಷ್ಯದಿಂದ ಕಾಮಗಾರಿ ಪ್ರಾರಂಭವಾಗಿಲ್ಲ. 8 ವರ್ಷಗಳಿಂದ ಈ ಸರ್ಕಾರಿ ಶಾಲೆಗೆ ಕಾಯಂ ಶಿಕ್ಷಕರೂ ಇಲ್ಲ ಎಂಬುದು ಪಾಲಕರ ಅಳಲು.

ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸಲು ಶುದ್ಧ ನೀರು ಸಿಗುತ್ತಿಲ್ಲ. ದೂರ ಪ್ರದೇಶದಿಂದ ನೀರು ತಂದು ಅಡುಗೆ ಹಾಗೂ ಕುಡಿಯಲು ಬಳಸಬೇಕು ಎಂದು ಬಿಸಿಯೂಟ ಸಿಬ್ಬಂದಿ ಹೇಳುತ್ತಾರೆ.

ಶಿಥಿಲಾವ್ಯವಸ್ಥೆ ತಲುಪಿರುವ ಕಟ್ಟಡದಲ್ಲಿ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಸಮಸ್ಯೆಗಳ ಪರಿಹಾರಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥ ಸುರೇಶ್‌ ಹೇಳಿದರು.

ಶಾಲೆಯ ಶೌಚಾಲಯ ಹಾಗೂ ಕುಡಿಯುವ ನೀರಿನ ಸಮಸ್ಯೆಯ ಬಗೆಹರಿಸಲು ಸೂಚಿಸಲಾಗುವುದು. ನೂತನ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು.

–ಸಿ.ಆರ್. ಪರಮೇಶ್ವರಪ್ಪ, ಡಿಡಿಪಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT