ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕಾರಿಪುರ: ಶಿಥಿಲಗೊಂಡ ಕನ್ನಡ ಸಾಹಿತ್ಯ ಪರಿಷತ್ ಕಚೇರಿ

9 ಸಮ್ಮೇಳನದಲ್ಲಿ ನಿರ್ಣಯಕ್ಕೆ ಸೀಮಿತವಾದ ಭರವಸೆ: ನೂತನ ಭವನದ ನಿರೀಕ್ಷೆಯಲ್ಲಿ ಸಾಹಿತ್ಯಾಸಕ್ತರು
Last Updated 31 ಅಕ್ಟೋಬರ್ 2021, 5:46 IST
ಅಕ್ಷರ ಗಾತ್ರ

ಶಿಕಾರಿಪುರ:ಕನ್ನಡ ಸಾಹಿತ್ಯದ ಕಾರ್ಯಕ್ರಮಗಳು ನಡೆಯುತ್ತಿದ್ದ ಕನ್ನಡ ಸಾಹಿತ್ಯ ಪರಿಷತ್ ಕಚೇರಿ ಕಟ್ಟಡ ನವೆಂಬರ್‌ 1ರಂದು ನಡೆಯುವ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮಕ್ಕೆ ಮಾತ್ರಸೀಮಿತವಾಗಿದೆ. ಸಾಹಿತ್ಯ ಚಟುವಟಿಕೆ ನಡೆಸಲು ಅಗತ್ಯವಾದ ಕನ್ನಡ ಸಾಹಿತ್ಯ ಭವನ ನಿರ್ಮಾಣದ ಕನಸು ಇನ್ನೂ ಈಡೇರಿಲ್ಲ.

ಪ್ರಸ್ತತ ಶಿಶುವಿಹಾರ ರಸ್ತೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್‌ ಕಚೇರಿ ಕಟ್ಟಡ ಕೆಲವು ವರ್ಷಗಳ ಹಿಂದೆ ತಮಿಳು ಶಾಲೆಯಾಗಿತ್ತು. ಕನ್ನಡ ಸಾಹಿತ್ಯ ಪರಿಷತ್‌ ಪದಾಧಿಕಾರಿಗಳ ಹಾಗೂ ಆಜೀವ ಸದಸ್ಯರ ಮನವಿಯಂತೆ ಈ ಕಟ್ಟಡದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಚಟುವಟಿಕೆ ನಡೆಸಲು ಅವಕಾಶ ದೊರಕಿತ್ತು. ಹಲವು ಸಾಹಿತ್ಯಿಕ ಕಾರ್ಯಕ್ರಮಗಳು ಈ ಕಟ್ಟಡದಲ್ಲಿನಡೆಯುತ್ತಿದ್ದವು. ಪ್ರಸ್ತುತ ಈ ಕಟ್ಟಡ ಶಿಥಿಲಗೊಂಡಿದ್ದು, ಗೋಡೆಗಳು ಬಿರುಕು ಬಿಟ್ಟಿವೆ. ಇದರಿಂದ ಸಾಹಿತ್ಯದ ಚಟುವಟಿಕೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂಬುದು ಸಾಹಿತ್ಯಾಸಕ್ತರ ಅಳಲು.

1996ರಲ್ಲಿ ನಡೆದ ಪ್ರಥಮ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಿಂದ ಸಾಹಿತ್ಯ ಭವನ ನಿರ್ಮಾಣದ ಕನಸನ್ನು ಹೊತ್ತ ಕನ್ನಡ ಸಾಹಿತ್ಯ ಪರಿಷತ್‌ ಪದಾಧಿಕಾರಿಗಳು ಹಾಗೂ ಕನ್ನಡಾಭಿಮಾನಿಗಳು, ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೇ ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣವಾಗಬೇಕೆನ್ನುವ ನಿರ್ಣಯ ಕೈಗೊಂಡಿದ್ದರು. ಪ್ರಥಮ ಹಾಗೂ ದ್ವಿತೀಯ ಸಾಹಿತ್ಯ ಸಮ್ಮೇಳನ ನಡೆಸಿದ ನಂತರ ಉಳಿದ ಹಣವನ್ನು ಕಟ್ಟಡ ನಿರ್ಮಾಣಕ್ಕಾಗಿಯೇ ಅಂದಿನ ಸಾಹಿತ್ಯ ಪರಿಷತ್‌ ಪದಾಧಿಕಾರಿಗಳು ಬ್ಯಾಂಕ್‌ ಖಾತೆಯಲ್ಲಿ ಸಂಗ್ರಹಿಸಿಟ್ಟಿದ್ದಾರೆ. ಈ ಹಣವನ್ನು ಸಾಹಿತ್ಯ ಭವನ ನಿರ್ಮಾಣಕ್ಕೆ ಮಾತ್ರ ಬಳಸಬೇಕೆಂಬ ನಿರ್ಣಯ ಕೂಡ ಕೈಗೊಂಡಿದ್ದರು.

ತಾಲ್ಲೂಕಿನಲ್ಲಿ ಪ್ರಸ್ತುತ 9 ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆದಿವೆ. ಒಂಬತ್ತು ಸಮ್ಮೇಳನಗಳಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣವಾಗಬೇಕೆನ್ನುವ ನಿರ್ಣಯ ಮಾತ್ರ ಪುನರಾವರ್ತನೆಯಾಗುತ್ತಿದೆ. ಆದರೆ 9 ಸಮ್ಮೇಳನಗಳು ನಡೆದರೂ ಕನ್ನಡ ಸಾಹಿತ್ಯ ಭವನ ನಿರ್ಮಾಣ ವಿಷಯ ಮಾತ್ರ ಕೇವಲ ನಿರ್ಣಯವಾಗಿಯೇ ಉಳಿದಿದೆ ಎಂದು ದೂರುತ್ತಾರೆ ಪರಿಷತ್‌ ಆಜೀವ ಸದಸ್ಯ ಉಮೇಶ್‌.

ಪ್ರತಿ ಬಾರಿ ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದ ನಂತರ ಸಾಹಿತ್ಯ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ನೂತನ ಕಟ್ಟಡ ಸಮಿತಿ ರಚಿಸಲಾಗುತ್ತದೆ. ಆದರೆ ಈ ಕಟ್ಟಡ ಸಮಿತಿ ಕನ್ನಡ ಸಾಹಿತ್ಯ ಪರಿಷತ್‌ ಕಾರ್ಯಕ್ರಮದ ಆಹ್ವಾನ ಪತ್ರಿಕೆಗೆ ಮಾತ್ರ ಸೀಮಿತವಾಗಿದೆ ಎಂಬ ಅಸಮಾಧಾನದ ಮಾತುಗಳು ಸಾಹಿತ್ಯಾಸಕ್ತರದ್ದು.

ತಾಲ್ಲೂಕಿನಲ್ಲಿ 9 ಸಮ್ಮೇಳನಗಳಲ್ಲಿ ಭಾಗವಹಿಸಿದ್ದ ಚುನಾಯಿತ ಪ್ರತಿನಿಧಿಗಳು ನೂತನ ಕನ್ನಡ ಸಾಹಿತ್ಯ ಭವನ ನಿರ್ಮಾಣಕ್ಕೆ ಸಹಕರಿಸುವುದಾಗಿ ಭರವಸೆ ನೀಡುತ್ತಾರೆ. ಆದರೆ ಈ ಚುನಾಯಿತ ಪ್ರತಿನಿಧಿಗಳು ನೀಡಿರುವ ಭರವಸೆ ಯಾವಾಗ ಈಡೇರುತ್ತದೆ. ನೂತನ ಕನ್ನಡ ಸಾಹಿತ್ಯ ಪರಿಷತ್‌ ಭವನ ಯಾವ ವರ್ಷದಲ್ಲಿ ನಿರ್ಮಾಣವಾಗುತ್ತದೆ ಎಂದು ಪ್ರಶ್ನಿಸುತ್ತಾರೆ ಉಮೇಶ.

‘ಕ್ಷೇತ್ರದ ಶಾಸಕ ಬಿ.ಎಸ್‌. ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪ್ರಸ್ತುತವಿರುವ ಸ್ಥಳ ಬಿಟ್ಟು ಬೇರೆ ಸ್ಥಳದಲ್ಲಿ ಕನ್ನಡ ಸಾಹಿತ್ಯ ಭವನಕ್ಕೆ ಭೂಮಿ ನೀಡುವ ಬಗ್ಗೆ ಭರವಸೆ ನೀಡಿದ್ದರು. ಆದರೆ ಇದುವರೆಗೂ ಕನ್ನಡ ಸಾಹಿತ್ಯ ಪರಿಷತ್‌ನ ಸಾಹಿತ್ಯ ಭವನಕ್ಕೆ ಭೂಮಿ ನೀಡುವ ಕಾರ್ಯ ಆಗಿಲ್ಲ. ಕಳೆದ ಬಾರಿ 5 ವರ್ಷ ಆಡಳಿತ ನಡೆಸಿದ ಕಸಾಪ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಹಲವು ಬಾರಿ ವೇದಿಕೆಯಲ್ಲಿ ಸಾಹಿತ್ಯ ಭವನ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಸಾಹಿತ್ಯ ಭವನ ನಿರ್ಮಾಣ ಕಾರ್ಯಕ್ಕೆ ಚಾಲನೆ ಮಾತ್ರ ನೀಡಿಲ್ಲ’ ಎಂಬುದು ಪರಿಷತ್‌ಸದಸ್ಯರ ದೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT