ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ: ಕಾನು ಭೂಮಿ ಮೇಲೆ ಕಬಳಿಕೆದಾರರ ಕಣ್ಣು

ಅತಿಕ್ರಮಣದ ಹೆಸರಿನಲ್ಲಿ ಸದ್ದಿಲ್ಲದೇ ಖಾಸಗಿ ವ್ಯಕ್ತಿಗಳ ಪಾಲು
Published 28 ಜೂನ್ 2024, 3:33 IST
Last Updated 28 ಜೂನ್ 2024, 3:33 IST
ಅಕ್ಷರ ಗಾತ್ರ

ಶಿವಮೊಗ್ಗ: ಮಲೆನಾಡಿನಲ್ಲಿ ತೋಟಕ್ಕೆ ಸೊಪ್ಪು ತರಲು, ಕಟ್ಟಿಗೆ, ಒಣಗಿದ ಎಲೆ ಸಂಗ್ರಹಿಸಲು, ವನಸ್ಪತಿ, ಕೃಷಿ ಪರಿಕರಕ್ಕೆಂದು ಗ್ರಾಮಸ್ಥರ ಉಪಯೋಗಕ್ಕೆ ಮೀಸಲಿಟ್ಟಿದ್ದ ಕಾನು ಭೂಮಿ ಅತಿಕ್ರಮಣದ ಹೆಸರಿಲ್ಲಿ ಸದ್ದಿಲ್ಲದೇ ಖಾಸಗಿ ವ್ಯಕ್ತಿಗಳ ಪಾಲಾಗುತ್ತಿದೆ.

ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ, ಸಾಗರ, ಸೊರಬ ತಾಲ್ಲೂಕುಗಳಲ್ಲಿ ‘ಕಾನು’ ಎಂದು ಕರೆಸಿಕೊಳ್ಳುವ ಅರಣ್ಯಪ್ರದೇಶ ಹೆಚ್ಚಾಗಿದೆ. ಹುಲ್ಲು ಬನ್ನಿ, ಮುಫತ್ತು, ಗೋಚರ, ಬಂಜರು, ಗೋಮಾಳ ಎಂಬ ಬೇರೆಬೇರೆ ಹೆಸರಿನಲ್ಲಿ ಈ ಕಾನು ಭೂಮಿ ಗ್ರಾಮೀಣರ ಸಾಮೂಹಿಕ ಬಳಕೆಯಲ್ಲಿದೆ. ಕೆಲವು ಕಾನು ಅರಣ್ಯಗಳಿಗೆ ಸರ್ಕಾರ ಆಣೆ ಲೆಕ್ಕದಲ್ಲಿ ಕಂದಾಯ ವಿಧಿಸುತ್ತಿದೆ. ಹೀಗಾಗಿ ಒಂದಾಣೆ ಕಾನು, ಖಾತೆ ಕಾನು ಹೆಸರಿನಲ್ಲೂ ಈ ಭೂಮಿ ಗುರುತಿಸಲಾಗುತ್ತದೆ.

ಇತ್ತೀಚೆಗೆ ಈ ಕಾನುಗಳ ಮೇಲೆ ಭೂ ಕಬಳಿಕೆದಾರರ ಕಣ್ಣು ಬಿದ್ದಿದೆ. ಬಗರ್‌ ಹುಕುಂ, ಅತಿಕ್ರಮಣ, ಒತ್ತುವರಿ ಪ್ರಕರಣಗಳ ನೆಪದಲ್ಲಿ ಖಾತೆ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ವೃಕ್ಷ ಲಕ್ಷ ಆಂದೋಲನದ ಮುಖ್ಯಸ್ಥ, ಶಿರಸಿಯ ಅನಂತ ಹೆಗಡೆ ಅಶೀಸರ ತಿಳಿಸಿದ್ದಾರೆ.

ಹೊಸನಗರ ತಾಲ್ಲೂಕಿನ ಕಟ್ಟೇಕೊಪ್ಪದಲ್ಲಿ 600 ಎಕರೆ, ತೋಟದ ಕೊಪ್ಪದಲ್ಲಿ 360, ಗರ್ತಿಕೆರೆಯಲ್ಲಿ 90, ತೀರ್ಥಹಳ್ಳಿ ತಾಲ್ಲೂಕಿನ ಭೀಮಸೇತು ಹೆಗ್ಗಾರ ಘಟ್ಟದಲ್ಲಿ 1,200 ಎಕರೆ, ಹಲವನಹಳ್ಳಿಯಲ್ಲಿ 115, ಮಂಡಗದ್ದೆ ಅರಣ್ಯ ವಲಯ ವ್ಯಾಪ್ತಿಯ ಹಗಲತ್ತಿಯಲ್ಲಿ 180, ಸಿಂಧುವಾಡಿಯಲ್ಲಿ 155, ಹೆಮ್ಮಕ್ಕಿಯಲ್ಲಿ 46, ಕುಳ್ಳುಂಡೆಯಲ್ಲಿ 105, ಶೇಡಗಾರದಲ್ಲಿ 110, ಕುಡಗಲಮನೆಯಲ್ಲಿ 120, ಕೋಣಂದೂರು ಮಳಲಿಮಠ ಹತ್ತಿರದ ಜಂಬೇಕಾನು 270, ಕೊಳಗಿಬೈಲ್‌ನಲ್ಲಿ 135, ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಗಂಟಿನಕೊಪ್ಪದಲ್ಲಿ 90, ಶಿರವಂತೆ ಬಳಿಯ ಬರದವಳ್ಳಿಯಲ್ಲಿ 240, ನಾರಗೋಡದಲ್ಲಿ 25, ಅಡೂರಿನಲ್ಲಿ 60, ಸೊರಬ ತಾಲ್ಲೂಕಿನ ತಾವರೆಹಳ್ಳಿಯಲ್ಲಿ 525 ಎಕರೆ ಸೇರಿ ಶಿವಮೊಗ್ಗ ಜಿಲ್ಲೆಯ ಹಲವೆಡೆ ಕಾನು ಭೂಮಿಯ ಮಾಲೀಕತ್ವದ ವಿಚಾರ ಖಾಸಗಿ ವ್ಯಕ್ತಿಗಳು ಹಾಗೂ ಅರಣ್ಯ ಇಲಾಖೆ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಅದರಲ್ಲಿ ಕೆಲವು ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿವೆ.

‘ಇವೆಲ್ಲವೂ ಕಂದಾಯ, ಅರಣ್ಯ ಭೂಮಿ, ಡೀಮ್ಡ್‌ ಅರಣ್ಯ ಭೂಮಿಯ ವ್ಯಾಪ್ತಿಯಲ್ಲಿವೆ. ಈ ಪ್ರಕರಣಗಳಲ್ಲಿ ಜೀವವೈವಿಧ್ಯ, ಕಂದಾಯ, ಅರಣ್ಯ ಹಾಗೂ ವನ್ಯಜೀವಿ ಕಾಯ್ದೆಯನ್ನು ಉಲ್ಲಂಘಿಸಲಾಗಿದೆ’ ಎಂದು ಅಶೀಸರ ದೂರಿದ್ದಾರೆ.

‘ಖಾತೆ ಕಾನು ಅರಣ್ಯ ಭೂಮಿ ದಾಖಲೆಗಳಲ್ಲಿ ಖಾಸಗಿ ವ್ಯಕ್ತಿಗಳು ಅಕ್ರಮ ತಿದ್ದುಪಡಿ ಮಾಡಿಸಿದ್ದಾರೆ. ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ಆದೇಶ ಪಡೆಯುವುದು, ಕಾನು ಅರಣ್ಯ ಭೂಮಿ ಮಾರಾಟ, ಮರಕಡಿತಲೆ, ಅರಣ್ಯನಾಶ ಅವ್ಯಾಹತವಾಗಿ ನಡೆಯುತ್ತಿವೆ. ಈ ರೀತಿಯ ಭೂ ಕಬಳಿಕೆಗೆ ಸರ್ಕಾರ ಕಡಿವಾಣ ಹಾಕಬೇಕು. ಖಾತೆ ಕಾನು ಇನ್ನೂ ಎಲ್ಲೆಲ್ಲಿ ಇವೆ ಎಂಬ ಬಗ್ಗೆ ಅರಣ್ಯ ಮತ್ತು ಕಂದಾಯ ಇಲಾಖೆಗಳು ತುರ್ತಾಗಿ ಮಾಹಿತಿ ಸಂಗ್ರಹಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಸಮನ್ವಯದ ಕೊರತೆ:

ಈ ಪ್ರಕರಣಗಳ ಪೈಕಿ ಕೆಲವು ಸರ್ಕಾರದ ಪರವಾಗಿ, ಇನ್ನೂ ಕೆಲವು ಖಾಸಗಿಯವರ ಪರವಾಗಿ ನ್ಯಾಯಾಲಯದ ಆದೇಶ ಆಗಿದೆ. ಸರ್ಕಾರಕ್ಕೆ ಸೋಲು ಆಗಿರುವ ಪ್ರಕರಣಗಳಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆಗಳ ನಡುವೆ ಸಮನ್ವಯದ ಕೊರತೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

ಯಾಲಯದಲ್ಲಿರುವ ಎಲ್ಲ ಪ್ರಕರಣಗಳನ್ನು ಒಗ್ಗೂಡಿಸಿ ಸಮಗ್ರ ಪ್ರಕರಣ ಎಂದು ಪರಿಗಣಿಸಿ ಕಾನೂನು ಹೋರಾಟ ಮಾಡಲು ಸಾಧ್ಯವೇ ಎಂದು ಸರ್ಕಾರ ಪರಿಶೀಲಿಸಬೇಕು.
ನ್ಯಾ ಅನಂತ ಹೆಗಡೆ ಅಶೀಸರ ವೃಕ್ಷ ಲಕ್ಷ ಆಂದೋಲನದ ಸಂಚಾಲಕ
ಕಾನು ಅರಣ್ಯ ಸಂರಕ್ಷಣೆ ವಿಚಾರದಲ್ಲಿ ಅರಣ್ಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸುತ್ತಿದ್ದೇವೆ. ಕಾನೂನು ಹೋರಾಟದ ಸಂದರ್ಭದಲ್ಲಿ ಅಗತ್ಯವಿರುವ ದಾಖಲೆಗಳನ್ನು ಒದಗಿಸುತ್ತಿದ್ದೇವೆ.
ಗುರುದತ್ತ ಹೆಗಡೆ ಶಿವಮೊಗ್ಗ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT