ಬುಧವಾರ, ಜೂನ್ 29, 2022
25 °C
ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ

ಒತ್ತುವರಿ ತೆರವುಗೊಳಿಸಲು ಸದಸ್ಯರು ಕೈಜೋಡಿಸಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೀರ್ಥಹಳ್ಳಿ: ಪಟ್ಟಣದಲ್ಲಿ ಅಕ್ರಮವಾಗಿ ಸರ್ಕಾರಿ ಖಾಲಿ ಜಾಗ ಒತ್ತುವರಿ ಮಾಡಿರುವವರನ್ನು ತೆರವುಗೊಳಿಸಲು ಸದಸ್ಯರು ಕೈಜೋಡಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ ನೀಡಿದರು.

ಪಟ್ಟಣ ಪಂಚಾಯಿತಿಯಲ್ಲಿ  ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಿವೇಶನ ರಹಿತ ಬಡವರಿಗೆ ಜಾಗ ಮಂಜೂರು ಮಾಡಬೇಕು. ಕೊಳೆಗೇರಿಗಳು ಹಾಗೂ ಪಟ್ಟಣ ಪಂಚಾಯಿತಿ ಅಡಿಯ ಖಾಲಿ ನಿವೇಶನದಲ್ಲಿ 50 ಮನೆ ಹೊಂದಿರುವ ಅಂತಸ್ತು ಕಟ್ಟಡ ನಿರ್ಮಾಣ ಮಾಡಿ ಹಂಚುವುದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆರಗ ಸೂಚಿಸಿದರು.

‘ನೀರಿನ ಬಾಕಿ ಬಿಲ್‌ ಕಟ್ಟಿದರೂ ಖಾತೆ ಪುಸ್ತಕದಲ್ಲಿ ಕಡಿತಗೊಳ್ಳುತ್ತಿಲ್ಲ’ ಎಂದು ಸದಸ್ಯ ಸಂದೇಶ್‌ ಜವಳಿ ಆಕ್ಷೇಪ ವ್ಯಕ್ತಪಡಿಸಿದರು.

‘ಈ ಬಗ್ಗೆ ಅನೇಕ ಬಾರಿ ಪ್ರಸ್ತಾಪಿಸಿದರೂ ದೋಷ ತಿದ್ದುಪಡಿ ಆಗುತ್ತಿಲ್ಲ. ಮತದಾರರಿಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ. 15 ದಿನಗಳೊಳಗೆ ಸಮಸ್ಯೆ ಬಗೆಹರಿಸದಿದ್ದರೆ ಪಂಚಾಯಿತಿ ಮುಂಭಾಗ ಧರಣಿ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಸದಸ್ಯ ಯತಿರಾಜ್‌ ಮಾತನಾಡಿ, ‘ಪಟ್ಟಣ ಪಂಚಾಯಿತಿ ಖಾಲಿ ಜಾಗ ಒತ್ತುವರಿಯಾಗುತ್ತಿದೆ. ಆಡಳಿತ ಮಂಡಳಿ ಬಂದ ದಿನದಿಂದಲೂ ಈ ಬಗ್ಗೆ ಸಭೆಯ ಗಮನಕ್ಕೆ ತರಲಾಗುತ್ತಿದೆ. ಸದಸ್ಯರು ನೀಡುತ್ತಿರುವ ದೂರುಗಳಿಗೆ ಸಮರ್ಪಕ ಉತ್ತರ ಸಿಗುತ್ತಿಲ್ಲ’ ಎಂದು ಆರೋಪಿಸಿದರು.

ಸಭೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಬನಮ್‌, ಉಪಾಧ್ಯಕ್ಷ ಜಯಪ್ರಕಾಶ್‌ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ, ಮುಖ್ಯಾಧಿಕಾರಿ ಕುರಿಯಾಕೋಸ್‌ ಮತ್ತು ಇತರ ಸದಸ್ಯರು, ಮುಖಂಡರು ಇದ್ದರು.

ಪ.ಪಂ. ಮಳಿಗೆ ಹರಾಜು ಅಕ್ರಮ: ವರದಿ ಚರ್ಚೆ

ಪಟ್ಟಣ ಪಂಚಾಯಿತಿ ಮಳಿಗೆ ಹರಾಜು ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಕುರಿತು ‘ಪ್ರಜಾವಾಣಿ’ ಪ್ರಕಟಿಸಿದ್ದ ವರದಿ ಸಭೆಯಲ್ಲಿ ಸದಸ್ಯರ ನಡುವೆ ಚರ್ಚೆಗೆ ಒಳಗಾಯಿತು.

ಬಡ ಅರ್ಹ ಉದ್ಯೋಗಿಗಳಿಗೆ ಅಕ್ರಮ ಹರಾಜು ಪ್ರಕ್ರಿಯೆಯಿಂದ ಅನ್ಯಾಯವಾಗಿದೆ. ಈ ಕುರಿತು ಸಾರ್ವಜಿನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಶ್ರೀಮಂತರ ಪರವಾಗಿ ಪಟ್ಟಣ ಪಂಚಾಯಿತಿ ವ್ಯವಸ್ಥೆ ನಿಂತರೆ ಬಡವರ ಪಾಡೇನು? ರಿಂಗ್‌ ಒಳಗೆ ರಿಂಗ್‌ ನಡೆದಿದೆ ಎಂದು ಸದಸ್ಯ ಸೊಪ್ಪುಗುಡ್ಡೆ ರಾಘವೇಂದ್ರ ಆಕ್ಷೇಪ ವ್ಯಕ್ತಪಡಿಸಿದರು.

ಮರು ಹರಾಜು ಪ್ರಕ್ರಿಯೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಯತಿರಾಜ್‌ ಆಗ್ರಹಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು