ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಥಮಿಕ ಹಂತದಲ್ಲೂ ಎನ್‌ಇಪಿಗೆ ಸಿದ್ಧತೆ

‘ರಜತ ಚುಂಚಾದ್ರಿ’ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Last Updated 2 ಡಿಸೆಂಬರ್ 2022, 5:31 IST
ಅಕ್ಷರ ಗಾತ್ರ

ಶಿವಮೊಗ್ಗ: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ಮುಂದಿನ ವರ್ಷದಿಂದ ಪ್ರಾಥಮಿಕ ಹಂತದಲ್ಲೂ ಅಳವಡಿಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಭದ್ರಾವತಿ ತಾಲ್ಲೂಕಿನ ಕಾರೇಹಳ್ಳಿಯ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಶಾಲೆಗಳ ವಿದ್ಯಾರ್ಥಿಗಳಿಗೆ ಗುರುವಾರ ಆಯೋಜಿಸಿದ್ದ ‘ರಜತ ಚುಂಚಾದ್ರಿ’ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಷ್ಟ್ರದಲ್ಲಿ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ನೀತಿ ಇಲ್ಲಿಯವರೆಗೂ ಇರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನದಿಂದ ಎನ್ಇಪಿ ಮೂಲಕ ಆ ಆಶಯ ಈಡೇರಿದೆ. ಒಂದೇ ಅವಧಿಯಲ್ಲಿ ಹಲವು ಪದವಿ ಪಡೆಯುವ ಅವಕಾಶವನ್ನು ಎನ್‌ಇಪಿ ಕಲ್ಪಿಸಿದೆ. ಮಕ್ಕಳ ಸಮಗ್ರ ವ್ಯಕ್ತಿತ್ವ ರೂಪುಗೊಳ್ಳಲು ಈ ಶಿಕ್ಷಣ ವ್ಯವಸ್ಥೆ ರೂಪಿಸಿದ್ದು, ಪ್ರಾಥಮಿಕ ಹಂತದಿಂದಲೇ ಇದು ಜಾರಿಗೊಂಡರೆ ಮಕ್ಕಳಿಗೆ ಅನುಕೂಲವಾಗಲಿದೆ’ ಎಂದರು.

ಕಲಿಕೆಯನ್ನು ಇನ್ನಷ್ಟು ಸರಳಗೊಳಿಸುವ ಅಗತ್ಯವಿದ್ದು, ಸಾಮಾನ್ಯ ಕುಟುಂಬದಿಂದ ಬರುವ ಮಗು ಮಾನಸಿಕ ಒತ್ತಡಕ್ಕೆ ಒಳಗಾಗದೆ ಕಲಿಯುವ ವಾತಾವರಣ ನಿರ್ಮಿಸಬೇಕಿದೆ. ಈ ಸರಳೀಕರಣ ಎನ್‌ಇಪಿಯ ಭಾಗ ಎಂದರು.

ಬಿಜಿಎಸ್‌ ಶಿಕ್ಷಣ ಸಂಸ್ಥೆಗಳ ಮೂಲಕ ನಾಡಿನಲ್ಲಿ ಶಿಕ್ಷಣ ಕ್ರಾಂತಿ ಮಾಡಿದ ಬಾಲಗಂಗಾಧರ ಸ್ವಾಮೀಜಿ ಶಿಕ್ಷಣಕ್ಕೆ ಗುಣಾತ್ಮಕತೆ, ಆಧ್ಯಾತ್ಮಕತೆ ತುಂಬಿದವರು. ಅದೇ ರೀತಿ ವಿಜ್ಞಾನ ಮತ್ತು ತತ್ವಜ್ಞಾನದ ಸಂಗಮ ನಿರ್ಮಲನಾಥ ಸ್ವಾಮೀಜಿ ಎಂದು ಬಣ್ಣಿಸಿದರು. ಇದೇ ವೇಳೆ ನಾಡಪ್ರಭು ಕೆಂಪೇಗೌಡ ವೇದಿಕೆಯಿಂದ ಬಸವರಾಜ ಬೊಮ್ಮಾಯಿ ಅವರನ್ನು ಸನ್ಮಾನಿಸಲಾಯಿತು.

ಆದಿಚುಂಚನಗಿರಿ ಪೀಠದ ಜಗದ್ಗುರು ನಿರ್ಮಲಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಿವಮೊಗ್ಗ ಶಾಖಾ ಮಠದ ಪ್ರಸನ್ನನಾಥ ಸ್ವಾಮೀಜಿ, ಬೆಂಗಳೂರು ಶಾಖಾಮಠದ ಸೌಮ್ಯನಾಥ, ಮೈಸೂರು ಶಾಖಾಮಠದ ಸೋಮನಾಥ, ಮಂಗಳೂರು ಧರ್ಮಮಾರನಾಥ, ಶೃಂಗೇರಿ ಗುಣಾನಾಥ ಸ್ವಾಮೀಜಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ನಾಗೇಶ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಸುಧಾಕರ್, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಬಿ.ಕೆ. ಸಂಗಮೇಶ್ವರ, ಎಸ್‌.ಎಲ್‌. ಭೋಜೇಗೌಡ, ಡಿ.ಎಸ್. ಅರುಣ್, ನಿವೃತ್ತ ಐಜಿಪಿ ಚಂದ್ರಶೇಖರ್ ಹಾಜರಿದ್ದರು.

ಸಾವಿರಾರು ಕ್ರೀಡಾಪಟುಗಳು ಭಾಗಿ

ಮಂಡ್ಯ, ಮೈಸೂರು, ಬೆಂಗಳೂರು, ಚಿಕ್ಕಮಗಳೂರು, ತುಮಕೂರು, ಹಾಸನ, ಮಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಉತ್ತರ ಕನ್ನಡ ಜಿಲ್ಲೆಯ ಕುಮಟಾ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅದಿಚುಂಚನಗಿರಿ ಮಠದ ಆಶ್ರಯದಲ್ಲಿ ನಡೆಯುತ್ತಿರುವ ಶಾಲೆಗಳ ಸಾವಿರಾರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮೂರು ದಿನಗಳ ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.

ಕ್ರೀಡಾಕೂಟ ಆರಂಭಿಸಿ 25 ವರ್ಷ ಆಗಿರುವುದರಿಂದ ಈ ಬಾರಿ ‘ರಜತ ಚುಂಚಾದ್ರಿ’ ಹೆಸರಿನಲ್ಲಿ ಆಯೋಜನೆ ಮಾಡಲಾಗಿದೆ ಎಂದು ಪ್ರಸನ್ನಾನಂದ ಸ್ವಾಮೀಜಿ ತಿಳಿಸಿದರು.

ಉದ್ಘಾಟನೆಗೂ ಮುನ್ನ ನಿರ್ಮಲಾನಂದ ಸ್ವಾಮೀಜಿ ಅವರ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ತೆರೆದ ವಾಹನದಲ್ಲಿ ಕ್ರೀಡಾಂಗಣದಲ್ಲಿ ಸಂಚರಿಸಿದರು. ಉದ್ಘಾಟನೆ ವೇಳೆ ಬಣ್ಣ ಬಣ್ಣದ ಬಲೂನು, ಪಾರಿವಾಳ ಹಾರಿ ಬಿಡಲಾಯಿತು.

ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳ ವ್ಯಾಪ್ತಿಯಲ್ಲಿ 1.25 ಲಕ್ಷ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಎಂದು ಕೇಳಿ ಅಚ್ಚರಿಯಾಯಿತು. ಭೇದ ಭಾವ ಇಲ್ಲದೆ ಮಕ್ಕಳನ್ನು ವಿಶ್ವಮಾನವರನ್ನಾಗಿ ಬೆಳೆಸುತ್ತಿರುವುದು ಶ್ಲಾಘನೀಯ.

ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT