ಶುಕ್ರವಾರ, ಮಾರ್ಚ್ 31, 2023
22 °C

ಶಿವಮೊಗ್ಗ: ಖಾಸಗಿಯವರಿಗೆ ಅರಣ್ಯ ಭೂಮಿ ಒಡೆತನಕ್ಕೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ‘ಎಂಪಿಎಂಗೆ ಗುತ್ತಿಗೆ ನೀಡಿದ್ದ ಅರಣ್ಯ ಭೂಮಿ ಖಾಸಗಿಯವರ ಒಡೆತನಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕುಟುಂಬ ಹೆಚ್ಚು ಆಸಕ್ತಿ ತೋರುತ್ತಿದೆ’ ಎಂದು ನಮ್ಮೂರಿಗೆ ಆಕೇಶಿಯಾ ಬೇಡ ಹೋರಾಟ ಸಮಿತಿ ಸಂಚಾಲಕ ಕೆ.ಪಿ. ಶ್ರೀಪಾಲ್ ಆರೋಪಿಸಿದರು.

‘ಅರಣ್ಯ ಭೂಮಿ ಖಾಸಗೀಕರಣಗೊಳಿಸಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕುಟುಂಬದ ಸದಸ್ಯರು ಸಭೆ ಮೇಲೆ ಸಭೆ ನಡೆಸುತ್ತಿದ್ದಾರೆ. ಅದೇ ರೀತಿ ಬಗರ್‌ಹುಕುಂ ರೈತರ ಬಗ್ಗೆ ಸಭೆ ನಡೆಸಿದ್ದರೆ, ಈ ಹೊತ್ತಿಗೆ ರೈತರ ಸಮಸ್ಯೆ ಬಗೆಹರಿಸಬಹುದಿತ್ತು’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಕುಟುಕಿದರು.

‘ಎಂಪಿಎಂಗೆ ನೀಡಿದ್ದ ಅರಣ್ಯ ಭೂಮಿಯನ್ನು ಖಾಸಗಿಯವರಿಗೆ ವಹಿಸುವ ಸಂಬಂಧ ಅರಣ್ಯ ಇಲಾಖೆ ಮುಖ್ಯ ಕಾರ್ಯದರ್ಶಿ ಜತೆ ಮಾತುಕತೆ ನಡೆಸಿರುವ ಕುರಿತ ದಾಖಲೆಗಳು ನಮ್ಮ ಬಳಿ ಇವೆ. ಅರಣ್ಯ ಭೂಮಿಯನ್ನು ಖಾಸಗೀಕರಣಗೊಳಿಸದಂತೆ ಜೀವವೈವಿಧ್ಯ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಆನಂತ ಹೆಗಡೆ ಅಶೀಸರ ಅವರು ಮುಖ್ಯಮಂತ್ರಿ ಮೇಲೆ ಒತ್ತಡ ಹೇರಲು ವಿಫಲರಾಗಿದ್ದಾರೆ. ಆಶೀಸರ ಅವರು ನಿಜವಾಗಿಯೂ ಪರಿಸರವಾದಿಯಾಗಿದ್ದರೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಪರಿಸರ ಹೋರಾಟಕ್ಕೆ ನಮ್ಮ ಜೊತೆ ಕೈ ಜೋಡಿಸಲಿ’ ಎಂದು ಸವಾಲು ಹಾಕಿದರು.

ನೆಡುತೋಪುಗಳನ್ನು ಖಾಸಗಿಯವರಿಗೆ ನೀಡಬಾರದು ಎಂದು ಹೋರಾಟದ ಮೂಲಕ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಾಯಕರಿಗೆ ಮನವಿ ಸಲ್ಲಿಸಿದ್ದರೂ, ಇಲ್ಲಿಯವರೆಗೂ ಯಾವುದೇ ಪ್ರತಿಕ್ರಿಯೆ ಇಲ್ಲ. ಒಂದು ವೇಳೆ ಖಾಸಗಿಯವರಿಗೆ ನೀಡಲು ಮುಂದಾದರೆ ನೆಡುತೋಪಿನಲ್ಲಿ ರೈತರೊಂದಿಗೆ ಬೇಲಿ ಹಾಕಿ ವಿರೋಧಿಸಲಾಗುವುದು ಎಂದರು.

ಚಿಂತಕ ರಾಜೇಂದ್ರ ಚೆನ್ನಿ ಮಾತನಾಡಿ, ‘ಎಂಪಿಎಂಗೆ ನೀಡಿದ್ದ ಅರಣ್ಯ ಭೂಮಿಯ ಗುತ್ತಿಗೆ ಅವಧಿ ಮುಗಿದಿದೆ. ಒಪ್ಪಂದದಂತೆ 33 ಸಾವಿರ ಹೆಕ್ಟೇರ್ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿ ಸಹಜ ಅರಣ್ಯ ಬೆಳೆಸಲು ಸಹಕಾರ ನೀಡಬೇಕು’ ಎಂದು ಆಗ್ರಹಿಸಿದರು.

ಸರ್ಕಾರದ ನಿರ್ಧಾರದ ವಿರುದ್ಧ ಜನಾಭಿಪ್ರಾಯ ಸಂಗ್ರಹಿಸಲಾಗುವುದು. ಸರ್ಕಾರಕ್ಕೆ ಸ್ಪಷ್ಟ ಸಂದೇಶ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ರೈತ ಮುಖಂಡ ಕೆ.ಟಿ. ಗಂಗಾಧರ್ ಮಾತನಾಡಿ, ಸರ್ಕಾರ ಅಧಿಕಾರಶಾಹಿಗೆ ಶರಣಾಗಿದೆ. ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಈಗ ಮುಂದುವರಿದ ಭಾಗವಾಗಿ ಖಾಸಗಿ ಕಂಪನಿಗಳಿಗೆ ಅರಣ್ಯ ಇಲಾಖೆ ಭೂಮಿ ಹಸ್ತಾಂತರ ಮಾಡಲು ಸಂಚು ನಡೆಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು