ಶುಕ್ರವಾರ, ಜುಲೈ 30, 2021
23 °C

ಶಿಮುಲ್‌: ಅವಿಶ್ವಾಸ ತೂಗುಗತ್ತಿಯಿಂದ ಸದ್ಯಕ್ಕೆ ಪಾರಾದ ಅಧ್ಯಕ್ಷ ಆನಂದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕರ ಅಪೇಕ್ಷೆಯಂತೆ ಜುಲೈ 15ರಂದು ನಡೆಯಬೇಕಿದ್ದ ಅಧ್ಯಕ್ಷರ ಅವಿಶ್ವಾಸ ಮಂಡನೆ ಸಭೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ ಕಾರಣ ಡಿ.ಆನಂದ್ ಸದ್ಯಕ್ಕೆ ತೂಗುಗತ್ತಿಯಿಂದ ಪಾರಾಗಿದ್ದಾರೆ.

ಹೈಕೋರ್ಟ್ ಷರತ್ತುಬದ್ಧವಾಗಿ ಅವಿಶ್ವಾಸ ಗೊತ್ತುವಳಿ ಮಂಡನೆ ಸಭೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಆನಂದ್ ಸದ್ಯಕ್ಕೆ ಪದಚ್ಯುತಿ ಭೀತಿಯಿಂದ ಪಾರಾಗಿದ್ದಾರೆ. ಆದರೆ, ಅವರು ಅಧ್ಯಕ್ಷರಾಗಿ ಹಕ್ಕು ಚಲಾಯಿಸುವಂತಿಲ್ಲ.  ಪ್ರಮುಖ ನಿರ್ಧಾರಗಳು, ಹಣಕಾಸಿನ ತೀರ್ಮಾನಗಳನ್ನು ಕೈಗೊಳ್ಳುವಂತಿಲ್ಲ.

ಶಿಮುಲ್‌ಗೆ ಹಿಂದೆ ನಡೆದಿದ್ದ ಚುನಾವಣೆಯ ನಂತರ ನಡೆದಿದ್ದ ಆಂತರಿಕ ಒಪ್ಪಂದದ ಪ್ರಕಾರ ಅವರು ರಾಜೀನಾಮೆ ಸಲ್ಲಿಸಬೇಕಿತ್ತು. ಮತ್ತೊಬ್ಬ ನಿರ್ದೇಶಕರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಸಹಕರಿಸಬೇಕಿತ್ತು. ಆದರೆ, ರಾಜೀನಾಮೆ ನೀಡಲು ಒಪ್ಪಿರಲಿಲ್ಲ. ಹಾಗಾಗಿ, ಹತ್ತು ನಿರ್ದೇಶಕರು ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ನೋಟಿಸ್ ನೀಡಿದ್ದರು. ಗುರುವಾರ ಸಭೆ ನಿಗದಿಯಾಗಿತ್ತು.

ಅವಿಶ್ವಾಸ ಗೊತ್ತುವಳಿ ಮಂಡನೆ ಸಭೆಗೆ ತಡೆಯಾಜ್ಞೆ ಕೋರಿ ಶಿಮುಲ್ ಅಧ್ಯಕ್ಷ ಡಿ.ಆನಂದ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಮಧ್ಯಂತರ ಆದೇಶ ನೀಡಿದ್ದ ಹೈಕೋರ್ಟ್ ಜುಲೈ 19ಕ್ಕೆ ವಿಚಾರಣೆ ಮುಂದೂಡಿದೆ. ಅಲ್ಲಿವರೆಗೂ ಅವಿಶ್ವಾಸ ಗೊತ್ತವಳಿ ಮಂಡನೆ ಸಭೆ ನಡೆಸಬಾರದು ಎಂದು ಹೇಳಿದೆ.

ಕೊರೊನಾ ಅವಧಿಯಲ್ಲಿ ಯಾವುದೇ ಪಟ್ಟಣ, ನಗರ ಸ್ಥಳೀಯ ಸಂಸ್ಥೆಗಳು, ಸಹಕಾರಿ ಸಂಸ್ಥೆಗಳ ಚುನಾವಣೆ ನಡೆಸಬಾರದು ಎಂದು ಸರ್ಕಾರವೇ ಆದೇಶಿಸಿದೆ. ಶಿಮುಲ್‍ನಲ್ಲಿ ಅವಿಶ್ವಾಸ ಮಂಡನೆಗೆ ಅವಕಾಶ ನೀಡಿರುವುದು ಎಷ್ಟು ಸರಿ? ಒಂದು ವೇಳೆ ಅಧ್ಯಕ್ಷರ ಪದಚ್ಯುತಿಯಾದರೆ ಸದ್ಯಕ್ಕೆ ಹೊಸ ಅಧ್ಯಕ್ಷರ ಆಯ್ಕೆ ಸಾಧ್ಯವಿಲ್ಲ.  ಆಡಳಿತಾತ್ಮಕ ಸಮಸ್ಯೆ ಉಂಟಾಗುತ್ತದೆ. ಈ ಕಾರಣದಿಂದ ಅವಿಶ್ವಾಸ ಮಂಡನೆಗೆ ಅವಕಾಶ ನೀಡಬಾರದು ಎಂದು ಡಿ.ಆನಂದ್ ಪರ ವಕೀಲರು ವಾದ ಮಂಡಿಸಿದ್ದರು.

ಜುಲೈ 19ರಂದು ಹೈಕೋರ್ಟ್ ಏನು ಆದೇಶ ನೀಡಲಿದೆ ಎಂಬುದರ ಮೇಲೆ ಅವಿಶ್ವಾಸ ಮಂಡನೆ ಸಭೆಯ ಭವಿಷ್ಯ ನಿರ್ಧಾರವಾಗಲಿದೆ.

***

ಸಭೆ ಮುಂದೂಡಿಕೆ

‘ಅವಿಶ್ವಾಸ ಗೊತ್ತುವಳಿ ಮಂಡನೆ ಸಭೆ ನಡೆಸಲು ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಆದರೆ, ಜುಲೈ 19ರವರೆಗೆ ಸಭೆ ನಡೆಸದಂತೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿರುವುದರಿಂದ ಗುರುವಾರ ನಡೆಯಬೇಕಿದ್ದ ಸಭೆ ಮುಂದೂಡಲಾಗಿದೆ. ನ್ಯಾಯಾಲಯ ಯಾವ ರೀತಿ ಆದೇಶ ನೀಡುತ್ತದೆಯೋ ಅದನ್ನು ಪಾಲಿಸಲಾಗುವುದು’ ಎಂದು ಸಹಕಾರ ಸಂಘಗಳ ಉಪನಿಬಂಧಕ ನಾಗೇಶ್ ಡೋಂಗ್ರೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು