ಶಿವಮೊಗ್ಗ: ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿದೆರೆ ಶಿವಮೊಗ್ಗ ಜಿಲ್ಲೆಯಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚು ದಾಖಲಾಗಿವೆ. ರಾಜ್ಯದಲ್ಲಿ 2ನೇ ಸ್ಥಾನದಲ್ಲಿದ್ದು, ಇದು ನಾಗರಿಕ ಸಮಾಜ ತಲೆತಗ್ಗಿಸಬೇಕಾದ ಸಂಗತಿ ಎಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಮಂಜುನಾಥ್ ನಾಯ್ಕ ಬೇಸರ ವ್ಯಕ್ತಪಡಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಿಮ್ಸ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಸಹಯೋಗದಲ್ಲಿ ಸಿಮ್ಸ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಜ್ಞ ವೈದ್ಯರು ಹಾಗೂ ವೈದ್ಯಾಧಿಕಾರಿಗೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (ಪೋಕ್ಸೊ) ಕುರಿತು ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸಕ್ತ ದಿನಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚು ನಡೆಯುತ್ತಿರುವುದು ವಿಷಾದಕರ. ಸ್ವಸ್ಥ ಸಮಾಜ ನಿರ್ಮಾಣವಾಗಬೇಕಾದರೆ ಪ್ರತಿಯೊಬ್ಬ ನಾಗರಿಕನೂ ಸಾಮಾಜಿಕ ಜವಾಬ್ದಾರಿ ಹೊಂದಬೇಕು. ಪೋಕ್ಸೊ ಪ್ರಕರಣಗಳಲ್ಲಿ ಅಪರಾಧಿಗೆ ಶಿಕ್ಷೆಯಾಗಲು ಮತ್ತು ಸಂತ್ರಸ್ತೆಯರಿಗೆ ನ್ಯಾಯ ಒದಗಿಸುವಲ್ಲಿ ವೈದ್ಯಾಧಿಕಾರಿ ಅವರು ನೀಡುವ ವರದಿ ತುಂಬಾ ಮಹತ್ವದ್ದಾಗಿದೆ. ನ್ಯಾಯಾಂಗ ಪ್ರಕ್ರಿಯೆಗಳಲ್ಲಿ ಹೇಳಿಕೆ ಮಹತ್ವ ಪೂರ್ಣವಾದುದು ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ನ್ಯಾಯಾಧೀಶ ಮೋಹನ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಚಂದನ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿದ್ದನಗೌಡ ಪಾಟೀಲ್, ವೈದ್ಯಾಧಿಕಾರಿ ಡಾ.ನಾಗರಾಜ್ ನಾಯ್ಕ್, ಸಿಮ್ಸ್ ನಿರ್ದೇಶಕ ವಿರೂಪಾಕ್ಷಪ್ಪ, ವೈದ್ಯಕೀಯ ಅಧೀಕ್ಷಕ ಶ್ರೀಧರ್ ಹಾಗೂ ಪ್ರಿಯಾಂಕ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.