ಹೊಳೆಹೊನ್ನೂರು: ಸಕಲ ಭಕ್ತರ ಉದ್ಧಾರಕ್ಕಾಗಿ ಶ್ರೀಕೃಷ್ಣ ಭೂಮಿಯಲ್ಲಿ ಅವತಾರ ಮಾಡಿದ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ಇಲ್ಲಿನ ಶ್ರೀ ಸತ್ಯಧರ್ಮ ಮಠದಲ್ಲಿ ಚಾತುರ್ಮಾಸ್ಯದ ವಿದ್ವತ್ ಸಭೆಯಲ್ಲಿ ಶನಿವಾರ ದಶಮ ಸ್ಕಂದ ಭಾಗವತ ಕುರಿತು ಅವರು ಪ್ರವಚನ ನೀಡಿದರು.
ದೇವರ ಅವತಾರದ ಸಂದರ್ಭದಲ್ಲಿ ಅವರ ಸ್ತೋತ್ರ ಮಾಡಬೇಕಾದ್ದು ಭಕ್ತರ ಕರ್ತವ್ಯ. ಹೀಗಾಗಿ ಬ್ರಹ್ಮ ಮತ್ತು ರುದ್ರಾದಿ ದೇವತೆಗಳು ಗರ್ಭ ಸ್ತುತಿಯನ್ನು ಮಾಡಿದ್ದಾರೆ. ಆ ಮೂಲಕ ಭಗವಂತನ ಸರ್ವೋತ್ತಮತ್ವವನ್ನು ನಮಗೆ ತಿಳಿಸುತ್ತಿದ್ದಾರೆ ಎಂದರು.
ಲೌಖಿಕ ಲಾಭ ಕ್ಷಣಿಕ: ಒಂದು ಸಿಹಿ ತಿನಿಸನ್ನು ಕೊಡುವುದರಿಂದ ಒಬ್ಬರಿಗೆ ಆಗುವ ಸಂತೋಷ ಮತ್ತು ಲಾಭ ಅತ್ಯಂತ ಸಣ್ಣ ಲಾಭ. ಆದರೂ ಅದು ಕೂಡ ತತ್ಕಾಲದ ಸಂತೋಷ ನೀಡುತ್ತದೆ. ತಾತ್ಕಾಲಿಕ ಉಪಕಾರವೇ ಒಂದು ಸ್ಮರಣೀಯ ಉಪಕಾರ ಅಂತಾದ್ರೆ ಜ್ಞಾನ ನೀಡುವ ಜ್ಞಾನದ ಉಪಕಾರ ಮೋಕ್ಷದವರೆಗೂ ಮತ್ತು ಮೋಕ್ಷದಲ್ಲೂ ಇರುವ ಉಪಕಾರ. ಅನಂತ ಕಾಲದವರೆಗೂ ಜ್ಞಾನ ನೀಡುತ್ತದೆ ಎಂದರು.
ಉತ್ತರಾದಿ ಮಠದ ದಿವಾನರಾದ ಶಶಿ ಆಚಾರ್, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷರಾದ ಸುಬ್ಬಣ್ಣಾಚಾರ್ಯ ನವರತ್ನ, ಶ್ರೀನಿವಾಸಾಚಾರ್ಯ ನವರತ್ನ, ಪುರುಷೋತ್ತಮಾಚಾರ್ಯ ನವರತ್ನ, ರಘೂತ್ತಮಾಚಾರ್ಯ ಸಂಡೂರು, ಕೃಷ್ಣಾಚಾರ್ಯ ರಾಯಚೂರು, ಪ್ರಕಾಶಾಚಾರ್ಯ, ಅನಿಲ್ ರಾಮಧ್ಯಾನಿ, ಗುರುರಾಜ್ ಮೊದಲಾದವರಿದ್ದರು.
ಚಾತುರ್ಮಾಸ್ಯದ ನಿಮಿತ್ತ ಭಾನುವಾರ ಸಂಜೆ ಶ್ರೀ ಜಯವರ್ಯ ಸಭಾ ಮಂಟಪದಲ್ಲಿ ಮಹಿಳಾ ಗೋಷ್ಠಿ ನಡೆಯಿತು.