ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಏ. 15ರಿಂದ ಜಿಲ್ಲೆಯಾದ್ಯಂತ ಜನಗಣತಿ ಆರಂಭ

Last Updated 10 ಮಾರ್ಚ್ 2020, 11:27 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯಾದ್ಯಂತ ಏ. 15ರಿಂದ ಮನೆಪಟ್ಟಿ, ಮನೆಗಣತಿ ಹಾಗೂ ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್ ಪರಿಷ್ಕರಣೆ ಕಾರ್ಯ ಆರಂಭಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಹೇಳಿದರು.

ಜಿಲ್ಲಾಧಿಕಾರಿ ಹಳೇ ಕಚೇರಿ ಕಟ್ಟಡದ ಸಭಾಂಗಣದಲ್ಲಿ ಭಾರತದ ಜನಗಣತಿ-2021ಕ್ಕೆ ಸಂಬಂಧಿಸಿ ಕ್ಷೇತ್ರ ತರಬೇತುದಾರರಿಗೆ ಮಂಗಳವಾರ ಏರ್ಪಡಿಸಿದ್ದ 5 ದಿನಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ನಂತರದ ವರ್ಷಗಳಲ್ಲಿ ಕೈಗೊಳ್ಳಲಾಗುತ್ತಿರುವ 8ನೇ ಜನಗಣತಿ ಇದು. ರಾಷ್ಟ್ರದ ಯೋಜನೆ ಮತ್ತು ಅಭಿವೃದ್ಧಿಗೆ ಸಹಕಾರಿಯಾಗಲಿದ್ದು, ಮನೆಮನೆಗೆ ಭೇಟಿ ನೀಡಿ ಮಾಹಿತಿ ಕೇಳುವ ಅಧಿಕಾರಿಗಳಿಗೆ ಸಾರ್ವಜನಿಕರು ವಿವರ ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದರು.

ಪ್ರಸ್ತುತ ಜನಗಣತಿಯಲ್ಲಿ ಮನೆಯ ಸ್ಥಿತಿ, ಸೌಲಭ್ಯ ಮತ್ತು ಸ್ವತ್ತುಗಳು, ಜನಸಂಖ್ಯಾ ಶಾಸ್ತ್ರ, ಧರ್ಮ, ಪರಿಶಿಷ್ಟ ಜಾತಿ/ಪಂಗಡ, ಭಾಷೆ, ಸಾಕ್ಷರತೆ ಮತ್ತು ಶಿಕ್ಷಣ, ಆರ್ಥಿಕ ಚಟುವಟಿಕೆ, ವಲಸೆ ಮತ್ತು ಸಂತಾನೋತ್ಪತ್ತಿ ಸೇರಿ ಹಲವು ವಿಷಯಗಳ ಬಗ್ಗೆ ಸೂಕ್ಷ್ಮ ರೀತಿಯಲ್ಲಿ ಮಾಹಿತಿ ಕಲೆ ಹಾಕಲಾಗುವುದು ಎಂದರು.

‘ಹಿಂದಿನ ಜನಗಣತಿಗಿಂತ ಭಿನ್ನವಾಗಿದ್ದು, ಇದೇ ಮೊದಲ ಬಾರಿಗೆ ಮೊಬೈಲ್ ಆ್ಯಪ್ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಗಣತಿದಾರರು ತಮ್ಮ ಸ್ವಂತ ಮೊಬೈಲ್ ಫೋನ್ ಬಳಸಿ ಕುಟುಂಬಗಳಿಂದ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲು ಪ್ರೋತ್ಸಾಹಿಸಲಾಗಿದೆ. ಮೊದಲ ಹಂತವಾಗಿ ಮನೆಪಟ್ಟಿ ಮತ್ತು ಮನೆ ಸ್ವತ್ತುಗಳ ಗಣತಿಯ ಬಗ್ಗೆ ಮಾಹಿತಿ ಸಂಗ್ರಹಿಸಲಿದ್ದಾರೆ’ ಎಂದು ತಿಳಿಸಿದರು.

ಸಮೀಕ್ಷೆಗಾಗಿ ವಿನ್ಯಾಸಗೊಳಿಸಿರುವ ಈ ಆ್ಯಪ್‍ ಅನ್ನು ತುಂಬಾ ಸರಳ, ಅನುಕೂಲಕರ ಮತ್ತು ಬಳಕೆದಾರ ಸ್ನೇಹಿಯಾಗಿ ಅಭಿವೃದ್ಧಿಪಡಿಸಲಾಗಿದೆ. ಇದರಿಂದಾಗಿ ಗಣತಿದಾರರು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಸಾರ್ವಕಾಲಿಕ ಎನ್.ಪಿ.ಆರ್. ಕಿರುಪುಸ್ತಕಗಳನ್ನು ಸಾಗಿಸಬೇಕಾದ ಅಗತ್ಯವಿಲ್ಲ ಎಂದು ತಿಳಿಸಿದರು.

ಈ ಮಹತ್ವದ ಗಣತಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಎಲ್ಲ ಹಂತದ ಕ್ಷೇತ್ರ ಕಾರ್ಯಕರ್ತರು, ಗಣತಿದಾರರು ನಿಷ್ಠೆ ಮತ್ತು ಬದ್ಧತೆಯಿಂದ ಜವಾಬ್ದಾರಿಯರಿತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವಂತೆ, ಸಮೀಕ್ಷೆ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಸೌಹಾರ್ದಯುತವಾಗಿ ವ್ಯವಹರಿಸುವಂತೆ ಹಾಗೂ ಎದುರಾಗಬಹುದಾದ ಪ್ರಶ್ನೆಗಳಿಗೆ ಉತ್ತರಿಸಲು ವಿಷಯ ಅರಿತಿರುವಂತೆ ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಜಿ.ಅನುರಾಧಾ, ಜಿಲ್ಲಾ ಸಾಂಖ್ಯಿಕ ಅಧಿಕಾರಿ ಬ್ರಿಜೆಟ್ ವರ್ಗೀಸ್, ರಾಜ್ಯ ಸಂಪನ್ಮೂಲ ವ್ಯಕ್ತಿ ಮ್ಯಾಥ್ಯೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT