ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಗರ್ತಿ: ಜೀವ ಭದ್ರತೆ ಇಲ್ಲದೆ ದುಡಿಯುವ ಕೊನೆಗಾರರು

ಅಡಿಕೆ ಮರಕ್ಕೆ ಔಷಧ ಸಿಂಪರಣೆ ಮಾಡುವ ದಿನಗೂಲಿ ಕೆಲಸಗಾರರು
Last Updated 14 ಜುಲೈ 2021, 5:50 IST
ಅಕ್ಷರ ಗಾತ್ರ

ತ್ಯಾಗರ್ತಿ: ಮಲೆನಾಡು ಭಾಗದಲ್ಲಿ ಅಡಿಕೆಯ ಕೊಳೆ ರೋಗ ನಿಯಂತ್ರಣಕ್ಕೆ ಔಷಧ ಸಿಂಪಡಣೆಗೆ ಮರ ಏರುವುದು ಅನಿವಾರ್ಯವಾಗಿದ್ದು, 30–40 ಅಡಿ ಎತ್ತರವಿರುವ ಬಳುಕುವ ಅಡಿಕೆ ಮರ ಏರಿ ಮದ್ದು ಸಿಂಪಡಿಸುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯಕ್ಕೆ ಒಳಗಾಗಬೇಕಾಗುತ್ತದೆ. ಕೆಲಸ ಕಠಿಣವಾಗಿದ್ದರೂ ಅದಕ್ಕೆ ಅನುಭವಿ ಕೆಲಸಗಾರರೇ ಬೇಕು.

ಕಾಲಿಗೆ ಕಾಲುದಳೆ ಹಾಕಿ ಕೈ ಸಹಾಯದಿಂದ ಅಡಿಕೆ ಮರ ಅಪ್ಪಿ ಹಿಡಿದು ಒಂದೊಂದೇ ಅಡಿಯಂತೆ ಮೇಲೇರಿ ಕುಳಿತುಕೊಳ್ಳಲು ಕರಕಿ ಮಣೆಯನ್ನು ಮರಕ್ಕೆ ಬಿಗಿದು ಔಷಧ ಸಿಂಪಡಣೆ ಮಾಡುತ್ತಾರೆ ಕೊನೆಗಾರರು.

ಔಷಧ ಸಿಂಪಡಿಸುವವರಿಗೆ ನೆಲದಿಂದಲೇ ಸಹಾಯಕರೊಬ್ಬರು ಔಷಧ ಏರುವ ಯಂತ್ರಕ್ಕೆ ಗಾಳಿ ಹೊಡೆದು ಬಾಲದ ಮೂಲಕ ಔಷಧವನ್ನು ಸಿಂಪಡಣೆಯ ಸಾಧನಕ್ಕೆ (ಪಿರ್ಕಿ) ಕಳುಹಿಸುತ್ತಾರೆ. ಮರದ ತುದಿಯಲ್ಲಿರುವ ಕೊನೆಗಾರರು ಒಂದೊಂದೇ ಅಡಿಕೆ ಗೊನೆಗೆ ಔಷಧ ಸಿಂಪಡಿಸುತ್ತಾರೆ.

ಜಿನುಗು ಮಳೆಯಿಂದಾಗಿ ಹಾವಸೆ ಬೆಳೆದು ಜಾರುವ ಮರದಿಂದ ಮರಕ್ಕೆ ಹಾರುವ ಕೆಲಸ ಅತ್ಯಂತ ಜಾಗರೂಕತೆಯಿಂದ ಮಾಡುವಂಥದ್ದಾಗಿದ್ದು, ಗಾಳಿಗೆ ಬಳುಕುವ ಮರ, ಬಿಸಿಲಿಗೆ ಮೈಯೊಡ್ಡಿ ಕರಕಲಾದ ಮರ ಮುರಿಯುವ
ಸಾಧ್ಯತೆ ಇರುತ್ತದೆ.

ಮಲೆನಾಡಿನಲ್ಲಿ ಕೊಟ್ಟೆ ಒಕ್ಕಲಿಗರು, ಘಟ್ಟದ ಕೆಳಗಿನ ಗಂಜಿ ಗೌಡರು, ಹಸಲರು ತಲೆತಲಾಂತರದಿಂದ ಕೊಟ್ಟೆ ಕಟ್ಟುವುದು, ಔಷಧ ಸಿಂಪಡಿಸುವುದು, ಕೊನೆ ಕೊಯ್ಯುವ ಕಾಯಕವನ್ನು ಹಿಂದಿನಿಂದಲೂ ಕುಲಕಸುಬು ಎಂದು ನಂಬಿಕೊಂಡು ಬಂದಿದ್ದರು. ಬದಲಾದ ಕಾಲಘಟ್ಟದಲ್ಲಿ ಗ್ರಾಮೀಣ ಪ್ರದೇಶದ ಬಹುತೇಕ ಯುವಕರು ಹೋಟೆಲ್, ಗ್ಯಾರೇಜ್‌, ಫ್ಯಾಕ್ಟರಿ ಕೆಲಸಗಳಿಗೆ ಪಟ್ಟಣ ಪ್ರದೇಶದತ್ತ ಸಾಗುತ್ತಿದ್ದಾರೆ. ಗ್ರಾಮೀಣ ಯುವ ಶಕ್ತಿ ಕರಗಿ ಹೋಗಿರುವುದರಿಂದ ಪಾರಂಪರಿಕ ಕುಶಲಕರ್ಮಿಗಳ ಕೊರತೆ ತಲೆದೋರಿದೆ.

ಗ್ರಾಮೀಣ ಭಾಗದಲ್ಲಿ ಒಂದು ಬಾನಿ (100 ಲೀ.) ಮದ್ದು ಸಿಂಪಡಿಸಲು ಹಾಗೂ 100 ಕೊನೆ ಕೊಯ್ಯಲು ₹ 500ರಿಂದ ₹ 600 ಕೂಲಿಯಿದೆ. ಪರಿಶ್ರಮದಿಂದ ಕೆಲಸ ಮಾಡುವವವರು ದಿನವೊಂದಕ್ಕೆ ಸಾವಿರ ರೂಪಾಯಿಗೂ ಹೆಚ್ಚು ಸಂಪಾದಿಸಬಹುದಾಗಿದೆ. ಇತ್ತೀಚೆಗೆ ಇತರ ಸಮುದಾಯದ ಕೆಲವು ಯುವಕರು ಔಷಧ ಸಿಂಪಡಣೆ, ಕೊನೆ ಕೊಯ್ಯುವು ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದಾರೆ.

ಮರ ಏರುವವರಿಗಿಲ್ಲ ರಕ್ಷಣೆ: ತೋಟಗಾರಿಕಾ ಕೃಷಿ ಕೆಲಸವಾದ ಔಷಧ ಸಿಂಪಡಣೆ ಹಾಗೂ ಕೊನೆ ಕೆಲಸಗಾರರ ಜೀವಕ್ಕೆ ಭದ್ರತೆಯಿಲ್ಲ. ಖಾಯಂ ದಿನಗೂಲಿಯವರಿಗೆ ವಿಮಾ ಸೌಲಭ್ಯವನ್ನು ಬೆಳೆಗಾರರೇ ದೊರಕಿಸಿಕೊಡುತ್ತಾರೆ. ತೋಟದಲ್ಲಿ ಕೆಲಸ ಮಾಡುವಾಗ ಬಿದ್ದರೆ ತೋಟದ ಮಾಲೀಕರೆ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಾರೆ. ಆದರೆ, ಅಡಿಕೆ ಮರದಿಂದ ಬಿದ್ದು ಸತ್ತರೆ ಅಥವಾ ಬೆನ್ನು ಮೂಳೆಗೆ ಪೆಟ್ಟಾದರೆ ಕಾರ್ಮಿಕರಿಗೆ ಭದ್ರತೆ ಇಲ್ಲವಾಗಿದೆ.

ದುಡಿಯುವ ಕೈ ಕಳೆದುಕೊಂಡು ಪರಿತಪಿಸುವ ಕುಟುಂಬದವರಿಗೆ ಸರ್ಕಾರದ ಮಟ್ಟದಲ್ಲಿ ಯಾವ ಯೋಜನೆಯ ನೆರವೂ ಇಲ್ಲ. ಸಾಮಾಜಿಕ ಭದ್ರತಾ ಯೋಜನೆಯಲ್ಲಿ ಅಸಂಘಟಿತ ಕಾರ್ಮಿಕರೆಂದು ಗುರುತಿಸಿ ಗುರುತಿನ ಚೀಟಿ ನೀಡಿಲ್ಲ. ತೋಟಗಾರರು ದಿನಗೂಲಿ ಕೆಲಸಗಾರರನ್ನು ಸೇರಿಸಿಕೊಂಡು ಅಪಘಾತ ವಿಮೆ ಮಾಡಿಸಿರುವುದು ವಿರಳ. ಅಡಿಕೆ ಮರದಿಂದ ಬಿದ್ದು ಸತ್ತರೆ, ಪೆಟ್ಟಾದರೆ ಆಪ್ಕೋಸ್, ಮಾಮ್‍ಕೋಸ್, ತೋಟಗಾರ್ಸ್ ಮೊದಲಾದ ಸಂಘದವರು ನೆರವು ನೀಡುವುದಿದ್ದರೂ ಅದು ಅವರ ಸದಸ್ಯರ ತೋಟದಲ್ಲಿ ನಡೆಯುವ ಅವಘಡಗಳಿಗೆ ಮಾತ್ರ ಸೀಮಿತವಾಗಿದೆ.

ಎಪಿಎಂಸಿ ಕಾಯ್ದೆಯಡಿ ಕೃಷಿ ಜಮೀನಿನಲ್ಲಿ ಆಪಘಾತವಾಗಿ ಮರಣ ಹೊಂದಿದರೆ ಪರಿಹಾರ ನೀಡುವ ರೈತ ಸಂಜೀವನಿ ಯೋಜನೆ ಇದ್ದರೂ ಅದರಲ್ಲಿ ಕೃಷಿ ಕಾರ್ಮಿಕರು ಸೇರಿಲ್ಲ. ಇಂತಹ ಕುಟುಂಬಗಳಿಗೆ ನೆರವಾಗಲು ಸರ್ಕಾರ ಸುಭದ್ರ ಕಲ್ಯಾಣ ಯೋಜನೆಯನ್ನು ಜಾರಿಗೆ ತರುವುದು ಉತ್ತಮ ಎಂದು ಅಡಿಕೆ ಬೆಳೆಗಾರರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT